Bengaluru News: ಕಾರ್‌ಗೆ ಗುದ್ದಿ 5 ಕಿಮೀ ವರೆಗೆ ಬೆನ್ನಟ್ಟಿದ ಇಬ್ಬರು ಬೈಕರ್‌ಗಳ ಬಂಧನ

| Updated By: ಆಯೇಷಾ ಬಾನು

Updated on: Jan 30, 2023 | 1:30 PM

ಕಾರುಗಳಿಗೆ ಡ್ಯಾಶ್‌ಕ್ಯಾಮ್‌ ಬಳಸುವಂತೆ ಹಾಗೂ ರಾತ್ರಿಯ ಹೊತ್ತು ಅಪರಿಚಿತರು ಒತ್ತಾಯಿಸಿದಾಗ ಕಾರ್ ಬಾಗಿಲು ತೆಗೆಯಬಾರದು ಎಂದು ಸಿಟಿಜನ್ಸ್ ಮೂವ್‌ಮೆಂಟ್ ಸಲಹೆ ಮಾಡಿದೆ.

Bengaluru News: ಕಾರ್‌ಗೆ ಗುದ್ದಿ 5 ಕಿಮೀ ವರೆಗೆ ಬೆನ್ನಟ್ಟಿದ ಇಬ್ಬರು ಬೈಕರ್‌ಗಳ ಬಂಧನ
ಬೆಂಗಳೂರಿನಲ್ಲಿ ದಂಪತಿಗೆ ಬೆದರಿಕೆ ಯಾಕಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
Follow us on

ಬೆಂಗಳೂರು: ಕಾರ್‌ಗೆ ಬೈಕ್ ಗುದ್ದಿಸಿ, ನಂತರ ಅದೇ ಕಾರನ್ನು ಐದು ಕಿಮೀವರೆಗೆ ಬೆನ್ನಟ್ಟಿದ ಆರೋಪದ ಮೇಲೆ ಇಬ್ಬರನ್ನು ಬೆಂಗಳೂರು ಪೊಲೀಸರು (Bengaluru Police) ಬಂಧಿಸಿದ್ದಾರೆ. ಅಪಘಾತದ ನಂತರ ಆರೋಪಿಗಳು ಕಾರನ್ನು 5 ಕಿಮೀ ದೂರದಷ್ಟು ಹಿಂಬಾಲಿಸಿ, ಬೆದರಿಕೆ ಹಾಕಿದ್ದರು. ಆರೋಪಿಗಳನ್ನು ಬೆಳ್ಳಂದೂರಿನ ಧನುಷ್ (24) ಮತ್ತು ರಕ್ಷಿತ್ (20) ಎಂದು ಗುರುತಿಸಲಾಗಿದೆ. ಧನುಷ್ ಮೀನು ವ್ಯಾಪಾರಿಯಾಗಿದ್ದು, ಅವನ ಅಂಗಡಿಯಲ್ಲಿ ರಕ್ಷಿತ್ ಕೆಲಸ ಮಾಡುತ್ತಾನೆ. ಇವರ ವಿರುದ್ಧ ಐಪಿಸಿ 384 (ಸುಲಿಗೆ), 504 (ಶಾಂತಿಭಂಗಕ್ಕಾಗಿ ಮೂದಲಿಸಿ ಮಾತನಾಡುವುದು) ಮತ್ತು 506 (ಬೆದರಿಕೆ) ಕಲಂಗಳ ಅಡಿಯಲ್ಲಿ (IPC) ಪ್ರಕರಣ ದಾಖಲಿಸಲಾಗಿದೆ.

ಭಾನುವಾರ ನಸುಕಿನಲ್ಲಿ ಪ್ರಕರಣ ನಡೆದಿದೆ. ಕಾರಿನಲ್ಲಿದ್ದ ಕ್ಯಾಮೆರಾದಲ್ಲಿ ಪ್ರಕರಣದ ಸಂಪೂರ್ಣ ವಿವರಗಳು ದಾಖಲಾಗಿವೆ. ಬೈಕ್‌ನಲ್ಲಿ ಬಂದ ಆರೋಪಿಗಳು ಕಾರಿಗೆ ಡಿಕ್ಕಿ ಹೊಡೆದರು. ನಂತರ ಕಾರಿನಲ್ಲಿದ್ದ ದಂಪತಿಗೆ ಕೆಳಗಿಳಿಯುವಂತೆ ಒತ್ತಾಯಿಸಿದರು. ದಂಪತಿ ಕೆಳಗಿಳಿಯಲು ನಿರಾಕರಿಸಿ ಕಾರನ್ನು ಹಿಂದಕ್ಕೆ ತೆಗೆದುಕೊಂಡರು. ಆರೋಪಿಗಳು ಕಾರನ್ನು ಸುಮಾರು 5 ಕಿಮೀಗಳಷ್ಟು ದೂರಕ್ಕೆ ಬೆನ್ನಟ್ಟಿದ್ದರು.

‘ಸಿಟಿಜನ್ಸ್‌ ಮೂವ್‌ಮೆಂಟ್‌, ಈಸ್ಟ್ ಬೆಂಗಳೂರು’ ಟ್ವಿಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ಘಟನೆಯ ವಿಡಿಯೊ ವೈರಲ್ ಆಗಿದೆ. ಕಾರುಗಳಿಗೆ ಡ್ಯಾಶ್‌ಕ್ಯಾಮ್‌ ಬಳಸುವಂತೆ ಹಾಗೂ ರಾತ್ರಿಯ ಹೊತ್ತು ಅಪರಿಚಿತರು ಒತ್ತಾಯಿಸಿದಾಗ ಕಾರ್ ಬಾಗಿಲು ತೆಗೆಯಬಾರದು ಎಂದು ಸಿಟಿಜನ್ಸ್ ಮೂವ್‌ಮೆಂಟ್ ಸಲಹೆ ಮಾಡಿದೆ.

ಘಟನೆಯ ವಿವರ

ದೊಡ್ಡಕನ್ನೆಲ್ಲಿ ಮತ್ತು ಚಿಕ್ಕನಾಯಕನಹಳ್ಳಿ ಮಧ್ಯೆ ಘಟನೆ ನಡೆದಿದೆ. ಭಾನುವಾರ ನಸುಕಿನ 2.59ರಲ್ಲಿ ಕುಶ್ ಮತ್ತು ಅಂಕಿತಾ ಜೈಸ್ವಾಲ್ ದಂಪತಿ ವೈಟ್‌ಫೀಲ್ಡ್‌ ಕಡೆಯಿಂದ ತಮ್ಮ ಮನೆಗೆ ಹೋಗುತ್ತಿದ್ದರು. ದೊಡ್ಡಕನ್ನೆಲ್ಲಿ ಜಂಕ್ಷನ್‌ನಲ್ಲಿ ಸರ್ಜಾಪುರ ರೋಡ್‌ ಕಡೆಗೆ ತಿರುಗಿಸಿದಾಗ ಹಠಾತ್ ಬೈಕ್ ಒಂದು ಬಂದು ಡಿಕ್ಕಿಯಾಯಿತು. ಕಾರಿನತ್ತ ನುಗ್ಗಿ ಬಂದ ಅಪರಿಚಿತರು ಬಾಗಿಲು ತೆಗೆದು ಕೆಳಗಿಳಿಯುವಂತೆ ಕೂಗಾಡಿದರು. ಹೆದರಿದ ದಂಪತಿ ಕಾರನ್ನು ಹಿಂದಕ್ಕೆ ತೆಗೆದುಕೊಂಡಾಗ ಅಪರಿಚಿತರು ಬೆನ್ನಟ್ಟಿದರು. ಕಾರ್‌ನ ಬಾನೆಟ್ ಮೇಲೆ ಹತ್ತಿ ಕೂಗಾಡಿದರು. ತಮ್ಮ ಮೇಲೆ ಹಲ್ಲೆ ನಡೆಸಿ, ಸುಲಿಗೆ ಮಾಡಬಹುದು ಎಂದು ಹೆದರಿದ ದಂಪತಿ ಹೇಗೋ ಅವರಿಂದ ಪಾರಾಗಿ ಮನೆ ತಲುಪಿಕೊಂಡಿದ್ದರು.

ಆರೋಪಿಗಳ ಬಂಧನ

ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ‘ರಸ್ತೆಯಲ್ಲಿ ಹೀಗೆ ವರ್ತಿಸುವುದನ್ನು ಸಹಿಸಲು ಆಗುವುದಿಲ್ಲ. ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಟ್ರಾಫಿಕ್ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಪ್ರತಿಕ್ರಿಯಿಸಿದರು. ‘ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಡಿಸಿಪಿ (ವೈಟ್‌ಫೀಲ್ಡ್) ಎಸ್.ಗಿರೀಶ್ ಮಾಹಿತಿ ನೀಡಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ