ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಮೂವರ ಶವ ಹೊರಕ್ಕೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 22, 2024 | 9:43 PM

ಕಳೆದ ನಾಲ್ಕೈದು ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು, ಹಲವು ಏರಿಯಾಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈಗಾಗಲೇ ಹಿಂಗಾರು ಮಳೆ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಇಂದು(ಅಕ್ಟೋಬರ್ 22) ಸಹ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದ್ದು, ಅವಶೇಷಗಳಡಿ 16 ಕಾರ್ಮಿಕರು ಸಿಲುಕಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಮೂವರ ಶವ ಹೊರಕ್ಕೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ
Follow us on

ಬೆಂಗಳೂರು, (ಅಕ್ಟೋಬರ್ 22): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ (ಅಕ್ಟೋಬರ್ 22) ಧಾರಾಕಾರ ಮಳೆ ಸುರಿಯುತ್ತಿದ್ದು, ಹೆಣ್ಣೂರು ಸಮೀಪದ ಬಾಬುಸಾ​ಬ್​ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದಿದೆ. ಇನ್ನು ಕಟ್ಟಡ ಅವಶೇಷಗಳಡಿ 16 ಕಾರ್ಮಿಕರು ಸಿಲುಕಿರಬಹುದು ಎಂದು ಟಿವಿ9ಗೆ ಪೊಲೀಸ್ ಇಲಾಖೆ ಮೂಲಗಳಿಂದ ತಿಳಿದುಬಂದಿದ್ದು, ಸದ್ಯ ಅಗ್ನಿಶಾಮಕ ದಳ, ಪೊಲೀಸರು ಅವಶೇಷಗಳಡಿ ಸಿಲುಕಿದ್ದ ಮೂವರು ಕಾರ್ಮಿಕರ ಶವ ಹೊರತೆಗೆದಿದ್ದಾರೆ. ಇನ್ನು ಮೂವರನ್ನು ರಕ್ಷಣೆ ಮಾಡಿದ್ದು,  ಇನ್ನುಳಿದಕಾರ್ಮಿಕರಿಗಾಗಿ  ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಕಟ್ಟಡ ಕುಸಿಯುತ್ತಿದ್ದಂತೆಯೇ ಅವಶೇಷಗಳಡಿಯಲ್ಲಿ ಸಿಲುಕಿದ್ದ ಕಾರ್ಮಿಕನೋರ್ವ ರಕ್ತ ಸಿಕ್ತ ಸ್ಥಿತಿಯಲ್ಲಿ ಆಚೆ ಬಂದಿದ್ದು, ಕಾರ್ಮಿಕನ ತಲೆಗೆ ಪೆಟ್ಟಾಗಿ ರಕ್ತ ಸೋರುತ್ತಿದೆ. ಇನ್ನು ರಕ್ತದ ಮಡುವಿನಲ್ಲೇ ಅಳುತ್ತ ನಮ್ಮವರು ಒಳಗೆ ಸಿಲುಕಿದ್ದಾರೆಂದು ಎಂದು ಮಾಹಿತಿ ನೀಡಿದ್ದಾನೆ. ಒಳಗೆ ಇನ್ನು ಕಾರ್ಮಿಕರು ಇದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ರಕ್ಷಣಾ ಕಾರ್ಯಚರಣೆ ಚುರುಕುಗೊಂಡಿದೆ.

ಇದನ್ನೂ ಓದಿ: ಕೆಂಗೇರಿ ಕೆರೆಗೆ ಬಿದ್ದಿದ್ದ ಅಣ್ಣ ತಂಗಿಯ ಮೃತ ದೇಹಗಳು ಪತ್ತೆ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ 

ಮಲ್ಲೇಶ್ವರಂನಲ್ಲಿ ವಾಸವಿದ್ದ ಆಂಧ್ರ ಮೂಲದ ಮುನಿರಾಜು ರೆಡ್ಡಿ ಎಂಬುವರಿಗೆ ಸೇರಿದ ಕಟ್ಟಡ ಇದಾಗಿದೆ. 6 ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯ 8 ತಿಂಗಳಿಂದ ನಡೆಯುತ್ತಿದೆ. ಆದ್ರೆ, ಇದೀಗ ಏಕಾಏಕಿ ಕುಸಿದುಬಿದ್ದಿದೆ. ಈ ಘಟನೆ ಸಂಭವಿಸುತ್ತಿದ್ದಂತೆಯೇ ಕಟ್ಟಡ ಮಾಲೀಕ ಮುನಿರಾಜು ರೆಡ್ಡಿ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ.

ಮಾಹಿತಿ ಪಡೆದ ಸಿಎಂ, ಡಿಸಿಎಂ

ಬೆಂಗಳೂರಿನಲ್ಲಿ ಕಟ್ಟಡ ಕುಸಿತ ದುರಂತದಲ್ಲಿ ಮೂವರ ಕಾರ್ಮಿಕ ಶವ ಪತ್ತೆಯಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಡಿಸಿಪಿ ದೇವರಾಜ್ ಅವರಿಗೆ ಫೋನ್ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ 17 ಜನ ಸಿಲುಕಿರುವ ಬಗ್ಗೆ ಮಾಹಿತಿ ಇದೆ ಇದೆ ಎಂದು ಡಿಸಿಪಿ ದೇವರಾಜ್ ಸಿಎಂ, ಡಿಸಿಎಂಗೆ ಮಾಹಿತಿ ನೀಡಿದ್ದಾರೆ.

ಮಳೆಯ ನಡುವೆಯೂ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಸ್ಥಳೀಯ ಶಾಸಕ ಬೈರತಿ ಸುರೇಶ್‌ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:12 pm, Tue, 22 October 24