IT Capital Bengaluru: ಐಟಿ ರಾಜಧಾನಿ ಬೆಂಗಳೂರು: ಮೋಹನ್​ ದಾಸ್ ಪೈ ಹೇಳಿಕೆಗೆ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ ಹೀಗಿತ್ತು…

| Updated By: Ganapathi Sharma

Updated on: Dec 01, 2023 | 3:04 PM

ಐಟಿ ಸೇವಾ ರಫ್ತಿನ ವಿಷಯದಲ್ಲಿ ಬೆಂಗಳೂರು ನಗರವು ಹೈದರಾಬಾದ್​ಗಿಂತ ಮೈಲಿಗಳಷ್ಟು ಮುಂದಿದೆ ಮತ್ತು ಉಭಯ ನಗರಗಳ ನಡುವೆ ನಿಜವಾದ ಸ್ಪರ್ಧೆಯಿಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

IT Capital Bengaluru: ಐಟಿ ರಾಜಧಾನಿ ಬೆಂಗಳೂರು: ಮೋಹನ್​ ದಾಸ್ ಪೈ ಹೇಳಿಕೆಗೆ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ ಹೀಗಿತ್ತು...
ರಾಜೀವ್ ಚಂದ್ರಶೇಖರ್
Follow us on

ಬೆಂಗಳೂರು, ಡಿಸೆಂಬರ್ 1: ಐಟಿ ರಾಜಧಾನಿ ವಿಚಾರದಲ್ಲಿ ಬೆಂಗಳೂರು (IT Capital Bengaluru) ಮತ್ತು ಹೈದರಾಬಾದ್ (Hyderabad) ನಡುವೆ ನಿಜವಾದ ಸ್ಪರ್ಧೆ ಇಲ್ಲ. ಐಟಿ ರಾಜಧಾನಿ ಎಂಬ ಬೆಂಗಳೂರಿನ ಬಿರುದನ್ನು ಹೈದರಾಬಾದ್​​ ಕಸಿದುಕೊಳ್ಳುವ ಸಾಧ್ಯತೆ ಇಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಸಿಲಿಕಾನ್ ವ್ಯಾಲಿ ನಂತರ ಬೆಂಗಳೂರು ಬಿಟ್ಟರೆ ಬೇರಿಲ್ಲ ಎಂಬಂತೆ ಇಲ್ಲಿನ ಐಟಿ ಪ್ರತಿಭೆಯನ್ನು ಜಗತ್ತು ಗುರುತಿಸಿದೆ. ಇದು ಮತ್ತು ಬೆಂಗಳೂರಿನಲ್ಲಿ ಪ್ರತಿಭೆಯನ್ನು ಹೇಗೆ ನಿರ್ಮಿಸಲಾಗಿದೆ ಎಂಬುದು ಸರ್ಕಾರಗಳೊಂದಿಗೆ ಬಹಳಷ್ಟು ಸಂಬಂಧವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ಐಟಿ ಕ್ಷೇತ್ರದ ಕುರಿತಂತೆ ಉದ್ಯಮಿ ಟಿವಿ ಮೋಹನ್​ ದಾಸ್ ಪೈ ಮಾಡಿದ್ದ ಟ್ವೀಟ್​​ ಗುರುವಾರ ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ರಾಜೀವ್ ಚಂದ್ರಶೇಖರ್ ಆ ಕುರಿತು ಹೇಳಿಕೆ ನೀಡಿದ್ದಾರೆ.

ಐಟಿ ಸೇವಾ ರಫ್ತಿನ ವಿಷಯದಲ್ಲಿ ಬೆಂಗಳೂರು ನಗರವು ಹೈದರಾಬಾದ್​ಗಿಂತ ಮೈಲಿಗಳಷ್ಟು ಮುಂದಿದೆ ಮತ್ತು ಉಭಯ ನಗರಗಳ ನಡುವೆ ನಿಜವಾದ ಸ್ಪರ್ಧೆಯಿಲ್ಲ. ಬೆಂಗಳೂರಿನಲ್ಲಿ ಹೊಸ ಕಂಪನಿ ಸ್ಥಾಪನೆಯಾದಾಗಲೆಲ್ಲಾ ನನಗೆ ಸಂತೋಷ ಮತ್ತು ದುಃಖ ಎರಡೂ ಆಗುತ್ತವೆ. ಏಕೆಂದರೆ ಅದು ನಗರದಲ್ಲಿ ಹೆಚ್ಚು ಟ್ರಾಫಿಕ್ ಅನ್ನು ಸೃಷ್ಟಿಸುತ್ತದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ವರದಿಗಳ ಪ್ರಕಾರ, 2022-23 ನೇ ಹಣಕಾಸು ವರ್ಷದಲ್ಲಿ ಕರ್ನಾಟಕದ ಐಟಿ ರಫ್ತುಗಳು ಶೇ 27 ರಷ್ಟು ಬೆಳೆದು 3.2 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದು ಭಾರತದ ಒಟ್ಟು ಐಟಿ ರಫ್ತಿನ ಶೇಕಡಾ 42 ರಷ್ಟಿದೆ. ಏತನ್ಮಧ್ಯೆ, ತೆಲಂಗಾಣದ ಐಟಿ ರಫ್ತು ಶೇಕಡಾ 31 ರಷ್ಟು ಹೆಚ್ಚಾಗಿ 2.4 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಇದು ಭಾರತದ ಒಟ್ಟು ಐಟಿ ರಫ್ತಿನ ಶೇಕಡಾ 31 ರಷ್ಟಿದೆ.

ಮಣಿಪಾಲ್ ಗ್ಲೋಬಲ್ ಎಜುಕೇಶನ್‌ನ ಅಧ್ಯಕ್ಷರು ಮತ್ತು ಇನ್ಫೋಸಿಸ್‌ ಮಂಡಳಿಯ ಮಾಜಿ ಸದಸ್ಯರಾದ ಟಿವಿ ಮೋಹನ್‌ದಾಸ್ ಪೈ ಅವರು ಹೈದರಾಬಾದ್ ಶೀಘ್ರದಲ್ಲೇ ಭಾರತದ ಐಟಿ ರಾಜಧಾನಿಯಾಗಿ ಬದಲಾಗಬಹುದು ಎಂದು ಕರ್ನಾಟಕ ಸರ್ಕಾರವನ್ನು ಉದ್ದೇಶಿಸಿ ಹೇಳಿದ್ದರು. ಬೆಂಗಳೂರಿನ ಮೂಲಸೌಕರ್ಯ, ಟ್ರಾಫಿಕ್ ಮತ್ತು ಇತರ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರಗಳು ಕಳೆದ 10 ವರ್ಷಗಳಿಂದ ತೋರುತ್ತಾ ಬಂದಿರುವ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್​ಗೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ

ಇದಕ್ಕೆ ತಿರುಗೇಟು ನೀಡಿದ್ದ ಕರ್ನಾಟಕ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಂಪನಿ ಸ್ಥಾಪಿಸಲು ಮಾತುಕತೆಗೆ ಬಂದ ಒಂದೇ ಒಂದು ಕಂಪನಿಯೂ ರಾಜ್ಯವನ್ನು ಬಿಟ್ಟು ಹೋಗಿಲ್ಲ. ಕೆಲವರು ಇಂತಹ ಹೇಳಿಕೆ ನೀಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಕರ್ನಾಟಕ ವಿರೋಧಿ ಹೇಳಿಕೆಗಳನ್ನು ನೀಡಬೇಡಿ ಎಂದು ಹೇಳಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ