
ಬೆಂಗಳೂರು, ಡಿಸೆಂಬರ್ 10: ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಿದ ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗೆ ಮೊದಲ ತಿಂಗಳಲ್ಲೇ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡೂ ಬದಿಯ ಪ್ರಯಾಣಿಕರು ಮಾಡಿರುವ ಬುಕಿಂಗ್‌ಗಳು 100% ದಾಟಿದ್ದು, ಇಲ್ಲಿಯವರೆಗೆ 55,000 ಕ್ಕೂ ಹೆಚ್ಚು ಪ್ರಯಾಣಿಕರು ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸಿದ್ದಾರೆ.
ಈ ರೈಲು ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡು ಹಾಗೂ ಕರ್ನಾಟಕವನ್ನು ಸಂಪರ್ಕಿಸುವ ಮೊದಲ ಅಂತಾರಾಜ್ಯ ಅರೆ ಹೈಸ್ಪೀಡ್ ಪ್ರೀಮಿಯಂ ರೈಲು ಎಂಬ ಖ್ಯಾತಿ ಪಡೆದಿದ್ದು, ನವೆಂಬರ್‌ನಲ್ಲಿ ಬೆಂಗಳೂರು-ಎರ್ನಾಕುಲಂ ಗೆ 11,447 ಪ್ರಯಾಣಿಕರು ಪ್ರಯಾಣಿಸಿದ್ದು, ಸರಾಸರಿ 127% ಬುಕಿಂಗ್ ಆಗಿದೆ ಎಂದು ಹೇಳಲಾಗಿದೆ.
ನೈಋತ್ಯ ರೈಲ್ವೆ (SWR) ಬೆಂಗಳೂರು ವಿಭಾಗದ ಅಂಕಿಅಂಶಗಳ ಪ್ರಕಾರ, ಡಿಸೆಂಬರ್‌ನಲ್ಲಿ 16,129 ಪ್ರಯಾಣಿಕರು ಸಂಚರಿಸಿದ್ದು, ಶೇ. 117 ಬುಕಿಂಗ್ ಆಗಿದೆ ಎಂದು ತಿಳಿದುಬಂದಿದೆ. ಎರ್ನಾಕುಲಂ-ಬೆಂಗಳೂರು ಸೇವೆಯು ನವೆಂಬರ್‌ನಲ್ಲಿ 12,786 ಪ್ರಯಾಣಿಕರು ಈ ಸೇವೆಯನ್ನು ಸ್ವೀಕರಿಸಿದ್ದು, ಶೇ.141 ರಷ್ಟು ಬುಕಿಂಗ್ ಆಗಿದೆ ಎಂದು ಹೇಳಲಾಗಿದೆ. ಡಿಸೆಂಬರ್‌ನಲ್ಲಿ ಈ ಸಂಖ್ಯೆ 14,742 ಕ್ಕೆ ಏರಿದ್ದು, ಸರಾಸರಿ ಶೇ.106 ರಷ್ಟು ಬುಕಿಂಗ್ ನಡೆದಿದೆ.
ಪ್ರತೀಕ್ಷಾ ಪಟ್ಟಿಯಲ್ಲಿರುವ ಪ್ರಯಾಣಿಕರನ್ನೂ ಸೇರಿಸಿ, ರೈಲ್ವೇಸ್ ಒಟ್ಟು ಬುಕಿಂಗ್‌ಗಳ ಸಂಖ್ಯೆಯಾಗಿ ಆಕ್ಯುಪೆನ್ಸಿಯನ್ನು ಲೆಕ್ಕಾಚಾರ ಮಾಡುತ್ತದೆ. ಇದರರ್ಥ 100 ಸೀಟುಗಳು ಲಭ್ಯವಿದ್ದು, ಅದರಲ್ಲಿ 27 ಬುಕಿಂಗ್‌ಗಳು ಪ್ರತೀಕ್ಷಾ ಪಟ್ಟಿಯಲ್ಲಿದ್ದರೆ , ಆಗ ಆಕ್ಯುಪೆನ್ಸಿಯನ್ನು 127% ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ ವಂದೇ ಭಾರತ್ ಸ್ಲೀಪರ್ ಟ್ರೈನುಗಳ ಬಿಡುಗಡೆ ಮತ್ತಷ್ಟು ವಿಳಂಬ; ಕೆಲ ಸಮಸ್ಯೆಗಳು ಪತ್ತೆ
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜಾದಿನಗಳು ಹಾಗೂ ಶಬರಿಮಲೆ ತೀರ್ಥಯಾತ್ರೆಯಿಂದಾಗಿ ಡಿಸೆಂಬರ್‌ನಲ್ಲಿ ಟಿಕೆಟ್‌ಗಳಿಗೆ ಬೇಡಿಕೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. ದೈನಂದಿನ ಪ್ರಯಾಣಿಕರು, ವ್ಯಾಪಾರದ ಸಲುವಾಗಿ ಪ್ರಯಾಣಿಸುವವರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಲ್ಲಿ ಈ ರೈಲು ಜನಪ್ರಿಯ ಆಯ್ಕೆಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:13 pm, Wed, 10 December 25