ಬೆಂಗಳೂರಿನಲ್ಲಿಂದು ಸಾಲು ಸಾಲು ಪ್ರತಿಭಟನೆ; ಟ್ರಾಫಿಕ್ ಸಮಸ್ಯೆ ಸಾಧ್ಯತೆ ಹೆಚ್ಚು

| Updated By: preethi shettigar

Updated on: Sep 20, 2021 | 9:33 AM

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಕಾಂಗ್ರೆಸ್‌ನಿಂದ ಸೈಕಲ್ ಜಾಥಾ ನಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ ಇಂದು ಸಾಲು ಸಾಲು ಪ್ರತಿಭಟನೆಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿಂದು ಸಾಲು ಸಾಲು ಪ್ರತಿಭಟನೆ; ಟ್ರಾಫಿಕ್ ಸಮಸ್ಯೆ ಸಾಧ್ಯತೆ ಹೆಚ್ಚು
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಇಂದು ಸಾಲು ಸಾಲು ಪ್ರತಿಭಟನೆ ನಡೆಯುತ್ತಿದೆ. ಫ್ರೀಡಂಪಾರ್ಕ್‌ನಲ್ಲಿ ಸಾರಿಗೆ ನೌಕರರಿಂದ ಧರಣಿ ಸತ್ಯಾಗ್ರಹ, ಕಟ್ಟಡ ಕಾರ್ಮಿಕರಿಂದ ಮುಖ್ಯಮಂತ್ರಿ ಮನೆ ಚಲೋ, ಬೆಳಗ್ಗೆ 11 ಗಂಟೆಗೆ ರೈಲ್ವೆ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ, ಮತ್ತೊಂದೆಡೆ ಐಟಿಐ ಅತಿಥಿ ಬೋಧಕರಿಂದ ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ಇನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಕಾಂಗ್ರೆಸ್‌ನಿಂದ ಸೈಕಲ್ ಜಾಥಾ ನಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ ಇಂದು ಸಾಲು ಸಾಲು ಪ್ರತಿಭಟನೆಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಫ್ರೀಡಂಪಾರ್ಕ್‌ನಲ್ಲಿ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ
ವಿವಿಧ ಬೇಡಿಕೆಯ ಈಡೇರಿಕೆಗೆ ಆಗ್ರಹಿಸಿ ಫ್ರೀಡಂಪಾರ್ಕ್‌ನಲ್ಲಿ ಸಾರಿಗೆ ನೌಕರರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.  ಬೆಳಗ್ಗೆ 11 ಗಂಟೆಯಿಂದ ಧರಣಿ ಸತ್ಯಾಗ್ರಹ ಆರಂಭವಾಗಲಿದೆ. ನಾಲ್ಕು ನಿಗಮಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅವುಗಳೆಂದರೆ ವಜಾಗೊಳಿಸಿರುವ ಸಾವಿರಾರು ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳಬೇಕು, ಅಮಾನತು, ವರ್ಗಾವಣೆ, ಕಿರುಕುಳದ ಆದೇಶವನ್ನು ಹಿಂಪಡೆಯಬೇಕು, ಮುಷ್ಕರದ ವೇಳೆ ನೀಡಿಎಉವ ಆಪಾದನಾ ಪತ್ರವನ್ನು ಹಿಂಪಡೆಯಬೇಕು, ಸಾರಿಗೆ ನಿಗಮಗಳಲ್ಲಿ ಕಾರ್ಮಿಕ ಸ್ನೇಹಿ ಆಡಳಿತ ಜಾರಿಗೆ ತರಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್​ನಿಂದ ಈ ಧರಣಿ ಸತ್ಯಾಗ್ರಹ ನಡೆಯಲಿದೆ.

ಕಟ್ಟಡ ಕಾರ್ಮಿಕರ ಮುಖ್ಯಮಂತ್ರಿ ಮನೆ ಚಲೋ
ಕಾರ್ಮಿಕ ಪರ ಸಂಘಟನೆಗಳಿಂದ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆದಿದೆ. ಬೆಳಗ್ಗೆ 11 ಗಂಟೆಗೆ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಲಿದ್ದು, ಬಳಿಕ ಫ್ರೀಡಂಪಾರ್ಕ್ ಮೂಲಕವಾಗಿ ಸಿಎಂ ಮನೆ ಚಲೋ ಪ್ರತಿಭಟನೆ ನಡೆಯಲಿದೆ.

ಕಟ್ಟಡ ಕಾರ್ಮಿಕರ ಬೇಡಿಕೆಗಳು
ರೇಷನ್ ಕಿಟ್, ಟೂಲ್ ಕಿಟ್, ಇಮ್ಯುನಿಟಿ ಕಿಟ್, ದುಬಾರಿ ಕಾರು, ಟಿವಿ, ಆ್ಯಂಬ್ಯುಲೆನ್ಸ್ ಖರೀದಿಯಲ್ಲಿ ಅವ್ಯವಹಾರವಾಗಿದೆ. ಈ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು. ಕೊವಿಡ್ ಬಾಕಿ ಇರುವ ಪರಿಹಾರ ಈ ತಕ್ಷಣ ನೀಡಬೇಕು. ಲಸಿಕೆ ಹೆಸರಲ್ಲಿ ಖಾಸಗಿ ಆಸ್ಪತ್ರೆಗೆ ಹಣ ನೀಡಬಾರದು. ಕಾರ್ಮಿಕ ಸಂಘಟನೆಗಳ ವಿವಿಧ ಅರ್ಜಿಯನ್ನು ಈ ತಕ್ಷಣ ಇತ್ಯರ್ಥಗೊಳಿಸಬೇಕು. ಹೀಗೆ ಹಲವು ಬೇಡಿಕೆ ಮುಂದಿಟ್ಟು ಸಿಎಂ ಮನೆ ಚಲೋ ಪ್ರತಿಭಟನೆಯನ್ನು ಕಾರ್ಮಿಕ ಸಂಘಟನೆಗಳು ನಡೆಸುತ್ತಿದೆ. (ಸಿಎಫ್​ಡಬ್ಲೂಐ) ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಹಾಗೂ ಇತರೆ ಕಾರ್ಮಿಕ ಸಂಘಟನೆಗಳ ವತಿಯಿಂದ ಸಿಎಂ ಮನೆ ಚಲೋ ಪ್ರತಿಭಟನೆ ನಡೆಯಲಿದೆ.

ಐಟಿಐ ಅತಿಥಿ ಬೋಧಕರಿಂದ ಪ್ರತಿಭಟನೆ
ರಾಜ್ಯದ ಎಲ್ಲಾ ಐಟಿಐ ಅತಿಥಿ ಬೋಧಕರು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಬೇಡಿಕೆ ಈಡೇರುವವರೆಗೂ ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ ಮಾಡಲಾಗಿದೆ. ಸರ್ಕಾರ ಕೊವಿಡ್ ವೇಳೆ ಐಟಿಐ ಅತಿಥಿ ಉಪನ್ಯಾಸಕರಿಗೆ ಗೌರವಧನ ನಿರಾಕರಿಸಿದೆ. ಈಗಾಗಲೇ ಅಧಿವೇಶನಲ್ಲಿ ಸರ್ಕಾರ ಪದವಿ ಹಾಗೂ ಡಿಪ್ಲೋಮೋ ಅತಿಥಿ ಉಪನ್ಯಾಸಕರಿಗೆ ಗೌರವಧನ ನೀಡಲು ಸಮ್ಮತಿಸಲಾಗಿದೆ.

ಲಾಕ್​ಡೌನ್​ ಅವಧಿಯಲ್ಲಿ ಪದವಿ ಹಾಗೂ ಡಿಪ್ಲೋಮೋ ಅತಿಥಿ ಉಪನ್ಯಾಸಕರಿಗೆ ಗೌರವಧನ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಐಟಿಐ ಅತಿಥಿ ಉಪನ್ಯಾಸಕರು ಗೌರವಧನಕ್ಕೆ ಅರ್ಹರಲ್ಲ ಎಂದು ಸರ್ಕಾರ ತೀರ್ಮಾನಿಸಿದೆ. ಹೀಗೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಸರ್ಕಾರ ಐಟಿಐ ಅತಿಥಿ ಉಪನ್ಯಾಸಕರಿಗೂ ಕೊವಿಡ್ ಸಮಯದ ಗೌರವಧನ ನೀಡಬೇಕು. ಜೊತೆಗೆ ಐಟಿಐ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ, ಆರೋಗ್ಯ ಭದ್ರತೆ ಒದಗಿಸಬೇಕು. ಕನಿಷ್ಠ ಗೌರವಯುತ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡಬೇಕು ಎಂಬ ಬೇಡಿಕೆ ಜತೆಗೆ ಪ್ರತಿಭಟನೆ ನಡೆಸಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್‌ನಿಂದ ಸೈಕಲ್ ಜಾಥಾ
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಸೈಕಲ್ ಜಾಥಾ ನಡೆಸಲಾಗುತ್ತಿದೆ. ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಸೈಕಲ್ ಜಾಥಾ ನಡೆಯಲಿದೆ. ಸೈಕಲ್ ಜಾಥಾದ ಮೂಲಕ ಕೇಂದ್ರ ,ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಗುತ್ತಿದೆ. ಅಧಿವೇಶನ ಪ್ರಾರಂಭದ ದಿನ ಎತ್ತಿನಗಾಡಿಯಲ್ಲಿ ಆಗಮಿಸಿದ್ದ ಕೈ ನಾಯಕರು, ಇಂದು ಸೈಕಲ್ ಮೂಲಕ ಅಧಿವೇಶನಕ್ಕೆ ಆಗಮಿಸಲಿದ್ದಾರೆ. ಕಾಂಗ್ರೆಸ್ ಶಾಸಕರು, ಪರಿಷತ್ ಸದಸ್ಯರಿಂದ ಸೈಕಲ್ ಜಾಥಾ ನಡೆಯಲಿದೆ.

ಕೆಪಿಸಿಸಿ ಕಚೇರಿಯಿಂದ ವಿಧಾನಸೌಧಕ್ಕೆ ಬೆಳಿಗ್ಗೆ 10 ಗಂಟೆಗೆ ಸೈಕಲ್​ನಲ್ಲಿ ಆಗಮಿಸಿರುವ ಕೈ ನಾಯಕರು ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ‌ ಏರಿಕೆ‌ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, 100 ಕ್ಕೂ ಹೆಚ್ಚು ಸೈಕಲ್‌ ಜಾಥಾದಲ್ಲಿ ಭಾಗಿಯಾಗಲಿದೆ.

ಇದನ್ನೂ ಓದಿ:
ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಗ್ರಾ.ಪಂ. ನೌಕರರ ಪ್ರತಿಭಟನೆ

ಬೆಂಗಳೂರಿನಲ್ಲಿ ನಿಲ್ಲದ ಪ್ರತಿಭಟನೆ ಕಾವು: ನಾಳೆಯಿಂದ ಮೂರು ದಿನ ವಿವಿಧ ಸಂಘಟನೆಗಳ ಧರಣಿ

Published On - 8:46 am, Mon, 20 September 21