
ಬೆಂಗಳೂರು, ಅಕ್ಟೋಬರ್ 15: ರಾಜಧಾನಿ ಬೆಂಗಳೂರಲ್ಲಿ ರಸ್ತೆ ಗುಂಡಿಗಳ (Pothole) ವಿಚಾರ ಭಾರಿ ಚರ್ಚೆಯಲ್ಲಿದೆ. ಉದ್ಯಮಿ ಕಿರಣ್ ಮಜುಂದಾರ್ ಶಾ ಪೋಸ್ಟ್ ಬೆನ್ನಲ್ಲೇ ನಾವು ಆಸ್ತಿ ತೆರಿಗೆ ಕಟ್ಟುವುದಿಲ್ಲ ಮತ್ತು ನಮ್ಮಿಂದ ತೆರಿಗೆ ಕೇಳಬೇಡಿ ಎಂದು ಐಟಿ-ಬಿಟಿ ಮಂದಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಪತ್ರ ಬರೆದಿರುವ ಪ್ರಸಂಗ ನಡೆದಿದೆ. ವರ್ತೂರು ಮತ್ತು ಪಣತ್ತೂರು ಭಾಗದ ನಿವಾಸಿಗಳು ಪತ್ರ ಬರೆದಿದ್ದು, ಮೂಲ ಸೌಕರ್ಯ ಸಮಸ್ಯೆ ಬಗ್ಗೆ ಈ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ವರ್ತೂರು, ಪಣತ್ತೂರು ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಎಲ್ಲಿ ನೋಡಿದರೂ ಬರಿ ಗುಂಡಿಗಳೇ ಕಾಣುತ್ತಿವೆ. ಇಂತಹ ರಸ್ತೆಗಳಲ್ಲಿ ಸರಾಗವಾಗಿ ಸಂಚರಿಸಲು ಸಾಧ್ಯವಾಗದ ಕಾರಣ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಸ್ಕೂಲ್ ಬಸ್ಗಳ ಅಪಘಾತ ದಿನನಿತ್ಯ ಮಾಮೂಲು ಎಂಬಂತಾಗಿದೆ. ಗುಂಡಿ ಮುಕ್ತ ರಸ್ತೆ , ಮೂಲ ಸೌಕರ್ಯ ಕೊಟ್ಟು ತೆರಿಗೆ ಕೇಳಿ ಎಂದು Individual Tax Payers Forumನಿಂದ ಸಿಎಂ, ಡಿಸಿಎಂಗೆ ಪತ್ರ ಬರೆಯಲಾಗಿದೆ.
ಇದನ್ನೂ ಓದಿ: ಉದ್ಯಮಿ ಕಿರಣ್ ಮಜುಂದಾರ್ ಶಾ ಪೋಸ್ಟ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು
ರಸ್ತೆ ಸಮಸ್ಯೆ ಮಾತ್ರವಲ್ಲದೆ ಈ ಭಾಗದಲ್ಲಿ ಸಮರ್ಪಕ ಚರಂಡಿಗಳ ಕೊರತೆಯೂ ಇದೆ. ಮಳೆ ಬಂದರೆ ನೀರು ವರ್ತೂರು ಕೆರೆಗೆ ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳು ಜಲಾವೃತವಾಗುತ್ತಿವೆ. ಇತ್ತೀಚೆಗೆ ಮಳೆ ಬಂದ ಸಂದರ್ಭವೂ ಇದೇ ರೀತಿಯ ಸಮಸ್ಯೆ ಉಂಟಾಗಿ, ಜನ ಜೀವನ ಅಸ್ತವ್ಯಸ್ತವಾಗಿತ್ತು. ಹೀಗಾಗಿ ಈ ಪ್ರದೇಶದಲ್ಲಿ ಸರಿಯಾದ ರಸ್ತೆ, ಒಳಚರಂಡಿ ವ್ಯವಸ್ಥೆ ಸೇರಿ ಮೂಲ ಸೌಕರ್ಯಗಳನ್ನು ಕಲ್ಪಿಸದ ಹಿನ್ನಲೆ ಗೃಹ ನಿರ್ಮಾಣ ಪ್ರಾಧಿಕಾರ ಅಥವಾ GBA ಆಸ್ತಿ ತೆರಿಗೆ ಸಂಗ್ರಹಿಸದಂತೆ ಆದೇಶಿಸಿ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಈ ಭಾಗದಿಂದ ವಾರ್ಷಿಕವಾಗಿ 800 ಕೋಟಿ ತೆರಿಗೆ ಪಾವತಿಯಾಗಲಿದ್ದು, ಇದೇ ವಿಚಾರವಾಗಿ ಈ ಹಿಂದೆ ಹಲವು ಬಾರಿ ಸ್ಥಳೀಯರು ಪ್ರತಿಭಟನೆಗಳನ್ನೂ ನಡೆಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:55 am, Wed, 15 October 25