ಬೆಂಗಳೂರಲ್ಲಿ ಚಿರಂಜೀವಿಯಾಗಿರೋ ರಸ್ತೆ ಗುಂಡಿಗಳು: ಮುಂದುವರಿದ ಉದ್ಯಮಿಗಳು-ಸರ್ಕಾರದ ನಡುವಿನ ತಿಕ್ಕಾಟ
ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಮಸ್ಯೆಯಿಂದ ಪ್ರತಿನಿತ್ಯ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಸ್ವತಃ ರಸ್ತೆಗಿಳಿದು ಅಧಿಕಾರಿಗಳಿಗೆ ಇವುಗಳನ್ನು ಮುಚ್ಚುವಂತೆ ಸೂಚಿಸಿದ್ದರೂ ಗುಂಡಿಗಳು ಹಾಗೇ ಇರೋದು ಜಡ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಈ ನಡುವೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

ಬೆಂಗಳೂರು, ಅಕ್ಟೋಬರ್ 14: ರಾಜಧಾನಿ ಬೆಂಗಳೂರಲ್ಲಿ ರಸ್ತೆ ಗುಂಡಿಗಳು (Potholes) ಚಿರಂಜಿವಿಯಾಗಿದ್ದು, ವಾಹನ ಸವಾರರು ಪ್ರತಿನಿತ್ಯ ಇವುಗಳಿಂದ ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ಉದ್ಯಮಿಗಳೂ ಈ ಬಗ್ಗೆ ಹಲವು ಭಾರಿ ಧ್ವನಿ ಎತ್ತಿದ್ದು, ಬೆಂಗಳೂರು ತೊರೆಯುವ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಹೈಕಮಾಂಡ್ ನಿಂದ ಕ್ಲಾಸ್ ತೆಗೆದುಕೊಂಡ ಪರಿಣಾಮ, ಸ್ವತಃ ಸಿಎಂ ಮತ್ತು ಡಿಸಿಎಂ ಅಖಾಡಕ್ಕಿಳಿದು ಅಧಿಕಾರಿಗಳ ಚಳಿ ಬಿಡಿಸಿದ್ದರು. ಡೆಡ್ ಲೈನ್ ಕೂಡ ಕೊಟ್ಟಿದ್ದರು. ಇಷ್ಟೆಲ್ಲ ಆದರೂ ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ರಾರಾಜಿಸುತ್ತಿದ್ದು, ಈ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
ಬಯೋಕಾನ್ ಪಾರ್ಕ್ಗೆ ಚೀನಾದಿಂದ ಬಂದಿದ್ದ ಉದ್ಯಮಿಯೊಬ್ಬರು ಯಾಕೆ ಬೆಂಗಳೂರು ನಗರದ ರಸ್ತೆಗಳು ಹಾಳಾಗಿವೆ? ಕಂಡ ಕಂಡಲ್ಲಿ ಕಸದ ರಾಶಿ ಯಾಕಿದೆ? ಇಲ್ಲಿನ ಸರ್ಕಾರ ಹೂಡಿಕೆದಾರರಿಗೆ ಬೆಂಬಲ ನೀಡುತ್ತಿಲ್ಲವೇ ಎಂದು ನನ್ನನ್ನು ಪ್ರಶ್ನಿಸಿದ್ದಾರೆ ಎಂದು ಕಿರಣ್ ಮಜುಂದಾರ್ ಶಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ ಅನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆಗೆ ಟ್ಯಾಗ್ ಮಾಡಿದ್ದಾರೆ.
ಕಿರಣ್ ಮಜುಂದಾರ್ ಶಾ ಪೋಸ್ಟ್
I had an overseas business visitor to Biocon Park who said ‘ Why are the roads so bad and why is there so much garbage around? Doesn’t the Govt want to support investment? I have just come from China and cant understand why India can’t get its act together especially when the…
— Kiran Mazumdar-Shaw (@kiranshaw) October 13, 2025
ಇದನ್ನೂ ಓದಿ: ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಧ್ವನಿ ಎತ್ತಿದ ಐಟಿ ದಿಗ್ಗಜರು: ಕಂಪನಿ ಸ್ಥಳಾಂತರಕ್ಕೆ ನಿರ್ಧಾರ
ಕಿರಣ್ ಮಜುಂದಾರ್ ಅವರ ಈ ಪೋಸ್ಟ್ ವಿಚಾರದ ಬಗ್ಗೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಬೆಂಗಳೂರಿಗೆ ಉದ್ಯಮಿಗಳದ್ದು ಅವರದ್ದೇ ಆದ ಕೊಡುಗೆ ಇದೆ. ಸಮಸ್ಯೆಗಳ ಬಗ್ಗೆ ಅವರು ಕರೆ ಮಾಡಿ ನಮ್ಮ ಜೊತೆ ಮಾತನಾಡಬಹುದು. ಎಲ್ಲರೂ ಅವರವರ ಪಾತ್ರ ನಿರ್ವಹಿಸಿದ್ರೆ ರಾಜ್ಯಕ್ಕೆ ಒಳ್ಳೇದು. ಕಸ ಹಾಕೋರು ಯಾರು? ಮೇಲಿಂದ ಬಂದು ಬೀಳುತ್ತಾ? ಹೀಗಾಗಿ ನಾಗರಿಕರು ತಮ್ಮ ಜವಾಬ್ದಾರಿ ಅರಿತುಕೊಂಡು ಸಹಾಕಾರ ನೀಡಬೇಕು ಎಂದಿದ್ದಾರೆ. ಅನ್ಯ ರಾಜ್ಯದವರು ಉದ್ಯಮಿಗಳಿಗೆ ಆಹ್ವಾನ ಕೊಡೋದು ಸಹಜ. ಆಂಧ್ರ ಐಟಿ ಮಿನಿಸ್ಟರ್ ಅಂತೂ ರಣಹದ್ದಿನಂತೆ ಕಾಯುತ್ತಿರುತ್ತಾರೆ. ಅಭಿವೃದ್ಧಿ ಬಗ್ಗೆ ಪ್ರತಿಪಕ್ಷ ಸಲಹೆ ಕೊಡಲ್ಲ, ಆ ನಿರೀಕ್ಷೆಯೂ ನಮಗಿಲ್ಲ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಬೆಂಗಳೂರಿಗೆ ಕಿರಣ್ ಮಜುಂದಾರ್ ಅವರ ಕೊಡುಗೆ ಇದೆ. ಹಾಗೆಯೇ ಬೆಂಗಳೂರು ಕೂಡ ಕಿರಣ್ ಮಜುಂದಾರ್ಗೆ ಎಲ್ಲವೂ ಕೊಟ್ಟಿದೆ. ಮಳೆ ಆದ ಮೇಲೆ ಎಲ್ಲಾ ಕಡೆ ಹಾನಿಯಾಗಿ ಇಡೀ ರಾಜ್ಯದಲ್ಲಿ ಸಮಸ್ಯೆ ಆಗಿದೆ. ಮಳೆ ಬರುವಾಗ ರಸ್ತೆ ಗುಂಡಿ ಮುಚ್ಚುವುದಕ್ಕೆ ಆಗಲ್ಲ. ಹೀಗಿದ್ದರೂ ಆದ್ರೂ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆಯೇ ವಿನಃ ಬೆಂಗಳೂರಿನಿಂದ ಹೋಗುವವರ ಸಂಖ್ಯೆ ಕಡಿಮೆ ಇದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:12 pm, Tue, 14 October 25




