AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಧ್ವನಿ ಎತ್ತಿದ ಐಟಿ ದಿಗ್ಗಜರು: ಕಂಪನಿ ಸ್ಥಳಾಂತರಕ್ಕೆ ನಿರ್ಧಾರ

ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ಸದ್ಯ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಐಟಿ ದಿಗ್ಗಜರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಗುಂಡಿಯಿಂದ ಬೇಸತ್ತ ಕಂಪನಿಗಳು ಸ್ಥಳಾಂತರಕ್ಕೆ ಮುಂದಾಗಿವೆ. ಈ ಬಗ್ಗೆ ಮೋಹನ್ ದಾಸ್ ಪೈ, ರಾಜೇಶ್ ಯಾಬಾಜಿ ಅವರು ಕೂಡ ಧ್ವನಿ ಎತ್ತಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಧ್ವನಿ ಎತ್ತಿದ ಐಟಿ ದಿಗ್ಗಜರು: ಕಂಪನಿ ಸ್ಥಳಾಂತರಕ್ಕೆ ನಿರ್ಧಾರ
ಪ್ರಾತಿನಿಧಿಕ ಚಿತ್ರ
Kiran Surya
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 17, 2025 | 2:32 PM

Share

ಬೆಂಗಳೂರು, ಸೆಪ್ಟೆಂಬರ್​ 17: ಗ್ರೇಟರ್ ಬೆಂಗಳೂರಿನ ರಸ್ತೆಗುಂಡಿಗಳ (Road potholes) ಬಗ್ಗೆ ಪುಟ್ಟ ಪುಟ್ಟ ಮಕ್ಕಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಅಪ್ಪ ಅಮ್ಮ ಟ್ಯಾಕ್ಸ್​ ಕಟ್ಟುತ್ತಿದ್ದರೂ, ರೋಡ್​ ಇಷ್ಟು ಹದಗೆಟ್ಟಿವೆ, ಯಾವಾಗ ಸರಿ ಮಾಡುತ್ತೀರಾ ಅಂತಾ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯಗೆ ಪ್ರಶ್ನಿಸಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಐಟಿ ದಿಗ್ಗಜ ಮೋಹನ್ ದಾಸ್ ಪೈ (Mohandas Pai) ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ಬೆಂಗಳೂರಿನಲ್ಲಿ ಆಡಳಿತದ ದೊಡ್ಡ ವೈಫಲ್ಯ ಆಗಿದೆ. ಹಲವು ಕಂಪನಿಗಳ ಸಿಐಒಗಳು ಹೊರಹೋಗುತ್ತಿದ್ದಾರೆ. ಬೆಂಗಳೂರಿನ ಔಟರ್​ ರಿಂಗ್​ ರಸ್ತೆಗಳಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. ದಯವಿಟ್ಟು ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್​ಗೆ​ ಟ್ಯಾಗ್​ ಮಾಡಿದ್ದಾರೆ.

ಮೋಹನ್ ದಾಸ್ ಪೈ ಟ್ವೀಟ್ 

ಇನ್ನು ರಸ್ತೆ ಗುಂಡಿಗಳ ವಿರುದ್ಧ ಬ್ಲಾಕ್ ಬಕ್ ಕಂಪನಿ ಕೋ ಫೌಂಡರ್ ಮತ್ತು ಸಿಇಒ ರಾಜೇಶ್ ಯಾಬಾಜಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಗುಂಡಿಯಿಂದ ಬೇಸತ್ತು ಕಂಪನಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಕಳೆದ 9 ವರ್ಷಗಳಿಂದ ಬೆಳ್ಳಂದೂರು ನಮ್ಮ ಕಚೇರಿ ಮತ್ತು ಮನೆಯಾಗಿದೆ. ಆದರೆ ಈಗ ಇಲ್ಲಿ ಮುಂದುವರಿಯುವುದು ತುಂಬಾ ಕಷ್ಟ ಎಂದಿದ್ದಾರೆ.

ಒಂದು ಸೈಡ್ ಪ್ರಯಾಣ ಮಾಡಲು ಕನಿಷ್ಠ 90 ನಿಮಿಷ ಸಮಯ ಬೇಕು. ಕಳೆದ 5 ವರ್ಷದಿಂದ ಈ ಭಾಗದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ರಸ್ತೆಗಳು ಗುಂಡಿಗಳು ಮತ್ತು ಧೂಳಿನಿಂದ ತುಂಬಿ ಹೋಗಿದೆ. ಹೀಗಾಗಿ ನಾವು ಕಂಪನಿ ಸ್ಥಳಾಂತರಕ್ಕೆ ನಿರ್ಧರಿಸಿದ್ದೇವೆ ಎಂದು ರಾಜೇಶ್ ಯಾಬಾಜಿ ಟ್ವೀಟ್​ ಮಾಡಿದ್ದಾರೆ.

ರಾಜೇಶ್ ಯಾಬಾಜಿ ಟ್ವೀಟ್

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್​ ಕೂಡ ಈ ಕುರಿತಾಗಿ ಟ್ವೀಟ್​ ಮಾಡಿದ್ದು, ಪರಿಸ್ಥಿತಿ ಗಂಭೀರವಾಗಿದೆ, ತುರ್ತು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದಿದ್ದಾರೆ.

ಆರ್​​.ಅಶೋಕ್ ಹೇಳಿದ್ದಿಷ್ಟು

ಕಂಪನಿಗಳು ಬೆಂಗಳೂರನ್ನು ಬಿಟ್ಟು ಹೋಗುತ್ತಿವೆ ಎಂಬ ವಿಚಾರವಾಗಿ ಬೆಂಗಳೂರಿನಲ್ಲಿ ಟಿವಿ9ಗೆ ವಿಪಕ್ಷ ನಾಯಕ ಆರ್​​.ಅಶೋಕ್ ಪ್ರತಿಕ್ರಿಯಿಸಿದ್ದು, ಬ್ಲ್ಯಾಕ್ ಬಗ್ ಸೇರಿದಂತೆ ಹಲವು ಕಂಪನಿಗಳು ಬಿಟ್ಟು ಹೋಗುತ್ತಿವೆ. ರಸ್ತೆ ಗುಂಡಿಗಳು ಮುಚ್ಚಿಲ್ಲ, ಮೂಲಸೌಕರ್ಯಗಳ ಸಮಸ್ಯೆ ಇದೆ. ಇದರಿಂದ ಕಂಪನಿಗಳ ಉದ್ಯೋಗಿಗಳಿಗೆ ತೊಂದರೆ ಆಗುತ್ತಿದೆ. ಇದರಿಂದ ಕಂಪನಿಗಳಿಗೆ ನಷ್ಟ ಆಗಿ ಆದಾಯ ಕುಸಿಯುತ್ತಿದೆ ಎಂದರು.

ಇದನ್ನೂ ಓದಿ: ನಮ್‌ ರೋಡ್‌ ಹಿಂಗ್ಯಾಕಿದೆ; ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಬೇಸತ್ತು ಪಿಎಂ, ಸಿಎಂ ಗೆ ಪತ್ರ ಬರೆದ ಶಾಲಾ ಮಕ್ಕಳು

ಇನ್ನು ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್​ ಟೀಕೆ ವಿಚಾರವಾಗಿ ಮಾತನಾಡಿದ್ದು, ಯಾರು ಏನೇ ಟೀಕೆ ಮಾಡಿದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಲೂಟಿ ಹೊಡೆಯೋಕೆ ಏನು ಬೇಕೋ ಅದನ್ನು ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರ್​.ಅಶೋಕ್ ವಾಗ್ದಾಳಿ ಮಾಡಿದ್ದಾರೆ.

ಸಚಿವ ನಾ.ರಾ ಲೋಕೇಶ್ ಹೇಳಿದ್ದಿಷ್ಟು

ಬ್ಲಾಕ್ ಬಕ್ ಕಂಪನಿ ಸಿಇಓ, ಕೋ ಫೌಂಡರ್ ರಾಜೇಶ್ ಯಾಬಾಜಿ ಪೋಸ್ಟ್​ಗೆ ಆಂಧ್ರಪ್ರದೇಶ ಸಿಎಂ ಪುತ್ರ ಮತ್ತು ಐಟಿಬಿಟಿ ಸಚಿವ ನಾ.ರಾ ಲೋಕೇಶ್ ಪ್ರತಿಕ್ರಿಯಿಸಿದ್ದು, ಹಾಯ್ ರಾಜೇಶ್, ನಿಮ್ಮ ಕಂಪನಿಯನ್ನು ವೈಜಾಗ್‌ಗೆ ಸ್ಥಳಾಂತರಿಸುವ ಬಗ್ಗೆ ನಾನು ನಿಮಗೆ ಆಸಕ್ತಿ ನೀಡಬಹುದೇ? ನಾವು ಭಾರತದ ಟಾಪ್ 5 ಸ್ವಚ್ಛ ನಗರಗಳಲ್ಲಿ ಒಂದೆಂದು ರೇಟಿಂಗ್ ಪಡೆದಿದ್ದೇವೆ, ಅತ್ಯುತ್ತಮ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ ಮತ್ತು ಮಹಿಳೆಯರಿಗೆ ಸುರಕ್ಷಿತ ನಗರವೆಂದು ರೇಟಿಂಗ್ ಪಡೆದಿದ್ದೇವೆ. ದಯವಿಟ್ಟು ನನಗೆ DM ಕಳುಹಿಸಿ ಎಂದು ಮಾಹಿತಿ ನೀಡಿದ್ದಾರೆ.

ಮೆಟ್ರೋ ಕಾಮಗಾರಿ ಮುಗಿದ ತಕ್ಷಣ ರಸ್ತೆಗಳು ಸರಿಯಾಗುತ್ತೆ: ಆಯುಕ್ತ ಮಹೇಶ್ವರ್ ರಾವ್

ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಪ್ರತಿಕ್ರಿಯಿಸಿ, ಔಟರ್​​ರಿಂಗ್ ರೋಡ್​ನಲ್ಲಿ ಸಮಸ್ಯೆಗಳಿವೆ. ಮೆಟ್ರೋ ಕಾಮಗಾರಿಯಿಂದ ಗುಂಡಿ ಮುಚ್ಚಲು ಸಮಸ್ಯೆ ಆಗುತ್ತಿದೆ. ಮಳೆ ಬಂದಾಗ ಪ್ರತಿ ಬಾರಿ ಸಮಸ್ಯೆ ಆಗಿಯೇ ಆಗುತ್ತೆ. ಎಲ್ಲೆಲ್ಲಿ ಸಮಸ್ಯೆ ಇದೆ ಚರ್ಚಿಸಿ ಗುಂಡಿ ಮುಚ್ಚುವ ಕೆಲಸ ಆಗುತ್ತಿದೆ. ಮೆಟ್ರೋ ಕಾಮಗಾರಿ ಮುಗಿಯುವ ತನಕ ತೊಂದರೆಯಾಗುತ್ತೆ. ನಂತರ ತಕ್ಷಣ ರಸ್ತೆಗಳು ಸರಿಯಾಗುತ್ತೆ ಎಂದರು.

ಇದನ್ನೂ ಓದಿ: ಟಿವಿ9 ‘ಏನ್‌ ರೋಡ್‌ ಗುರೂ’ ಅಭಿಯಾನ ಪರಿಣಾಮ: ರಾತ್ರೋರಾತ್ರಿ ರಸ್ತೆಗಿಳಿದ ಡಿಕೆ ಶಿವಕುಮಾರ್, ರಸ್ತೆ ಗುಂಡಿ ಮುಚ್ಚಲು ಆದೇಶ

ಈಗಾಗಲೇ ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್​ ಗುಂಡಿ ಮುಚ್ಚಲು ಸೂಚನೆ ನೀಡಿದ್ದಾರೆ. ಪ್ರತಿದಿನ ವಾರ್ಡ್​ಗಳಲ್ಲೂ ಗುಂಡಿ ಮುಚ್ಚುವ ಕೆಲಸ ಮಾಡ್ತಿದ್ದಾರೆ. ಒಂದಷ್ಟು ಕಡೆ ಮಳೆ ಬಂದಾಗ ಹಾಕಿರುವ ಡಾಂಬರು ಎದ್ದು ಬರ್ತಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:16 pm, Wed, 17 September 25