AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Caste Census: ಮನೆಗೊಂದು ಜಾತಿ! ಅಬ್ಬಬ್ಬಾ, ಕರ್ನಾಟಕದಲ್ಲಿವೆ 1500ಕ್ಕೂ ಹೆಚ್ಚು ಜಾತಿಗಳು

ಕರ್ನಾಟಕ ಜಾತಿ ಗಣತಿ (ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ); ಸೆಪ್ಟೆಂಬರ್‌ 22ರಿಂದ ಕರ್ನಾಟಕದಾದ್ಯಂತ ಜಾತಿ ಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಸಮೀಕ್ಷೆಯಲ್ಲಿ 60 ಪ್ರಶ್ನೆಗಳು ಇರಲಿದ್ದು, ರಾಜ್ಯದಲ್ಲಿ ಎಷ್ಟು ಜಾತಿಗಳು, ಉಪಜಾತಿಗಳಿವೆ ಎಂಬುದರ ಪಟ್ಟಿಯನ್ನೂ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ 1500ಕ್ಕೂ ಹೆಚ್ಚು ಜಾತಿಗಳು ಇರುವುದು ತಿಳಿದುಬಂದಿದೆ.

Karnataka Caste Census: ಮನೆಗೊಂದು ಜಾತಿ! ಅಬ್ಬಬ್ಬಾ, ಕರ್ನಾಟಕದಲ್ಲಿವೆ 1500ಕ್ಕೂ ಹೆಚ್ಚು ಜಾತಿಗಳು
ಕರ್ನಾಟಕ ಜಾತಿ ಗಣತಿ (ಸಾಂದರ್ಭಿಕ ಚಿತ್ರ)
Ganapathi Sharma
| Updated By: Digi Tech Desk|

Updated on:Sep 17, 2025 | 12:50 PM

Share

ಬೆಂಗಳೂರು, ಸೆಪ್ಟೆಂಬರ್ 17: ಕರ್ನಾಟಕದಲ್ಲಿ ಜಾತಿ ಸಮೀಕ್ಷೆ (Karnataka Caste Census) ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಇದರ ಸುತ್ತ ಹಲವು ಗೊಂದಲಗಳು ಮತ್ತು ವಿವಾದಗಳೂ ಸೃಷ್ಟಿಯಾಗಿವೆ. ಮತಾಂತರಗೊಂಡವರ ಜಾತಿಯನ್ನು ಉಲ್ಲೇಖಿಸಿರುವ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ತಕರಾರು ಎತ್ತಿದ್ದರೆ, ಮತ್ತೊಂದೆಡೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವೂ ಮುನ್ನೆಲೆಗೆ ಬಂದಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ರಾಜ್ಯದಲ್ಲಿ 1500ಕ್ಕೂ ಹೆಚ್ಚು ಜಾತಿ, ಉಪ ಜಾತಿಗಳು ಇರುವುದು ಗೊತ್ತಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 1,561 ಜಾತಿ-ಉಪಜಾತಿಗಳಿವೆ.

ಏತನ್ಮಧ್ಯೆ, ಕ್ರಿಶ್ಚನ್ ಜತೆ ಹಿಂದೂ ಉಪಜಾತಿಗಳ ಹೆಸರುಗಳನ್ನು ಉಲ್ಲೇಖಿಸಿರುವುದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದರೆ, ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಮತಾಂತರಗೊಂಡವರ ಜಾತಿಯ ಬಗ್ಗೆ ಮಾಹಿತಿ ಕಲೆಹಾಕಿದರೆ ತಪ್ಪೇನು ಎಂದು ಸರ್ಕಾರ ಪ್ರಶ್ನಿಸಿದೆ.

ಬೃಹತ್ ಹೋರಾಟಕ್ಕೆ ಬಿಜೆಪಿ ತೀರ್ಮಾನ

ಸದ್ಯ, ಕ್ರಿಶ್ಚನ್ ಜತೆ ಹಿಂದೂ ಉಪಜಾತಿಗಳ ಹೆಸರುಗಳನ್ನು ಸೇರಿಸಿರುವ ವಿಚಾರವಾಗಿ ಮಂಗಳವಾರ ಬಿಜೆಪಿ ನಾಯಕರು, ಸ್ವಾಮೀಜಿಗಳು ಮತ್ತು ಸಾಮಾಜಿಕ ವಲಯದ ಪ್ರಮುಖರು ಸಭೆಗಳನ್ನು ನಡೆಸಿ ಚರ್ಚೆ ನಡೆಸಿದ್ದಾರೆ. ಬಳಿಕ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ. ಬಿಜೆಪಿ ಸಂಸದ ಯದುವೀರ್ ಒಡೆಯರ್, ಸಂಸದ ಪಿಸಿ ಮೋಹನ್, ಶಾಸಕ ಸುನಿಲ್ ಕುಮಾರ್, ಎಂಎಲ್ಸಿ ಎನ್ ರವಿ ಕುಮಾರ್ ಸೇರಿದಂತೆ ಹಲವರು ನಿಯೋಗದಲ್ಲಿದ್ದರು. ಅಲ್ಲದೆ, ಸರ್ಕಾರದ ನಡೆಯ ವಿರುದ್ಧ ಮುಂದಿನ ದಿನಗಳಲ್ಲಿ ಭಾರಿ ಹೋರಾಟಕ್ಕೆ ತೀರ್ಮಾನಿಸಿದೆ.

ಏನು ಹೇಳಿದ್ದರು ಸಿದ್ದರಾಮಯ್ಯ?

ಕ್ರಿಶ್ಚನ್ ಕುರುಬ, ಕ್ರಿಶ್ಚನ್ ದಲಿತ ಎಂಬಿತ್ಯಾದಿ ಪ್ರತ್ಯೇಕ ಕಾಲಂಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅವರೂ ನಾಗರಿಕರೇ. ಮತಾಂತರ ಆಗಿರುವ ಕಾರಣಕ್ಕೆ ಅವರಿಗೆ ಸಿಗಬೇಕಾದ ಸೌಲಭ್ಯದಿಂದ ಅವರನ್ನು ವಂಚಿತರನ್ನಾಗಿ ಮಾಡಲಾಗದು ಎಂದಿದ್ದರು.

ಕರ್ನಾಟಕ ಜಾತಿ ಗಣತಿ ಹೇಗೆ ನಡೆಯಲಿದೆ?

ಜಾತಿ ಗಣತಿ ಸೆಪ್ಟೆಂಬರ್ 22 ಸೋಮವಾರದಿಂದ ಶುರುವಾಗಲಿದೆ. ಅದಕ್ಕೆ ಪೂರ್ವಭಾವಿಯಾಗಿ ಈಗಾಗಲೇ 2 ಕೋಟಿ ಮನೆಗಳಿಗೆ ಗಣತಿ ಸಿಬ್ಬಂದಿ ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಗಣತಿಗೆ ಸಿಬ್ಬಂದಿ ಬಂದ ವೇಳೆ ಮನೆಯಲ್ಲಿ ಇಲ್ಲದವರು ಆಯೋಗದ ಸಹಾಯವಾಣಿ ಸಂಖ್ಯೆ 80507 70004ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಅಥವಾ kacbckarnataka.govt.in ವೆಬ್​ಸೈಟ್ ಮೂಲಕವೂ ಸರ್ವೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಮೊದಲಿಗೆ ಆಶಾ ಕಾರ್ಯಕರ್ತರು ಮನೆ ಮನೆಗೂ ಸ್ಟಿಕ್ಕರ್ ಅಂಟಿಸಿ 60 ಪ್ರಶ್ನೆಗಳಿರುವ ಬುಕ್​ಲೆಟ್ ಕೊಡಲಿದ್ದಾರೆ. ಬಳಿಕ ಶಿಕ್ಷಕರು ಗಣತಿಗೆ ಮನೆ ಮನೆಗೂ ತೆರಳಿ, ಬುಕ್​ಲೆಟ್​​ನಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ಕಲೆ ಹಾಕಲಿದ್ದಾರೆ.

ಇದನ್ನೂ ಓದಿ: ಮತ್ತೆ ಬರುತ್ತಿದೆ ಜಾತಿ ಗಣತಿ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

ಸರ್ಕಾರದ ಈ ಕ್ರಮವು ರಾಜಕೀಯ ಉದ್ದೇಶದಿಂದ ಕೂಡಿದೆ ಎಂದು ಬಿಜೆಪಿ ಆರೋಪಿಸಿದ್ದರೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ, ಬಿಜೆಪಿಯ ಆರೋಪಗಳು ಮತ್ತು ವಿರೋಧವು ಮುಂದುವರಿದಿದ್ದು, ಈ ವಿಷಯ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಸರ್ಕಾರದ ಈ ನಿರ್ಧಾರದ ಹಿಂದಿನ ಉದ್ದೇಶ ಮತ್ತು ಅದರ ಪರಿಣಾಮಗಳು ಭವಿಷ್ಯದಲ್ಲಿ ಹೇಗೆ ಬೆಳವಣಿಗೆ ಹೊಂದುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 am, Wed, 17 September 25