AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬರುತ್ತಿದೆ ಜಾತಿ ಗಣತಿ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

ಕಳೆದ ಬಾರಿ ಕರ್ನಾಟಕದಲ್ಲಿ ಜಾತಿ ಗಣತಿ ವಿಚಾರ ವಿವಾದದ ಕಿಚ್ಚು ಹೊತ್ತಿಸಿತ್ತು. ಜಾತಿಗಣತಿಗೆ ಲಿಂಗಾಯತರು, ಒಕ್ಕಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಜಾತಿ ಗಣತಿ ವರದಿ ಅಂಗೀಕರಿಸಲು ಸರ್ಕಾರ ಕೂಡ ಹಿಂದೇಟು ಹಾಕಿತ್ತು. ಇದೀಗ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಸರ್ಕಾರ ವಿವಾದ ಶಮನಕ್ಕೆ ಮುಂದಾಗಿದ್ದು, ಮತ್ತೊಂದು ಸಮೀಕ್ಷೆಗೆ ಮುಂದಾಗಿದೆ. ಆ ಕುರಿತು ಸಿಎಂ ಸಿದ್ದರಾಮಯ್ಯ ನೀಡಿರುವ ಮಾಹಿತಿ ಇಲ್ಲಿದೆ.

ಮತ್ತೆ ಬರುತ್ತಿದೆ ಜಾತಿ ಗಣತಿ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ
ಸಿಎಂ ಸಿದ್ದರಾಮಯ್ಯ
Ganapathi Sharma
|

Updated on: Sep 12, 2025 | 1:08 PM

Share

ಬೆಂಗಳೂರು, ಸೆಪ್ಟೆಂಬರ್ 12: ಕರ್ನಾಟಕದಲ್ಲಿ ಮತ್ತೆ ಸೆಪ್ಟೆಂಬರ್‌ 22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಶುರುವಾಗಲಿದೆ. ಈ ಬಗ್ಗೆ ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಜಾತಿ ಗಣತಿ (Caste Census) ಬಗ್ಗೆ ಮಾಹಿತಿ ನೀಡಿದರು. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7 ರವರೆಗೆ 15 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದರು. ಕಳೆದ ಬಾರಿಯ ಸಮೀಕ್ಷೆಗೆ ಒಕ್ಕಲಿಗರು ಮತ್ತು ಲಿಂಗಾಯತರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ನಂತರ, ಆ ಸಮೀಕ್ಷಾ ವರದಿಯನ್ನು ಸರ್ಕಾರ ಅಂಗೀಕರಿಸಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಇದೀಗ ಮತ್ತೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿದೆ.

ಹೇಗೆ ನಡೆಯಲಿದೆ ಹೊಸ ಜಾತಿ ಗಣತಿ?

ಶಿಕ್ಷಕರು ಮನೆ ಮನೆಗೂ ಭೇಟಿ ನೀಡಿ ಹೊಸ ಸಮೀಕ್ಷೆ ನಡೆಸಲಿದ್ದಾರೆ. ಹೊಸ ಜಾತಿಗಣತಿ ವೇಳೆ 60 ಮಾದರಿಯ ಪ್ರಶ್ನೆಗಳಿಗೆ ಜನ ಮಾಹಿತಿ ನೀಡಬೇಕು. ಈ ಹಿಂದೆ ಕಾಂತರಾಜ್ ವರದಿ ಸಮೀಕ್ಷೆ ವೇಳೆ 54 ಪ್ರಶ್ನೆಗಳನ್ನು ಕೇಳಲಾಗಿತ್ತು. ಈಗ ಉದ್ಯೋಗ, ಧರ್ಮ, ಶಿಕ್ಷಣ, ಜಮೀನು‌ ಸೇರಿದಂತೆ ಒಟ್ಟು 60 ಪ್ರಶ್ನೆಗಳಿಗೆ ಜನರು ಮಾಹಿತಿ ನೀಡಬೇಕು.

2 ಕೋಟಿ ಮನೆಗಳಿಗೆ ಸ್ಟಿಕ್ಕರ್!

2 ಕೋಟಿ ಮನೆಗಳಿಗೆ ಗಣತಿ ಸಿಬ್ಬಂದಿ ಸ್ಟಿಕ್ಕರ್ ಅಂಟಿಸಲಿದ್ದಾರೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು. ಗಣತಿ ವೇಳೆ ಆಧಾರ್ ಕಾರ್ಡ್, ಪಡಿತರ ಚೀಟಿ ಕೊಟ್ಟು ಮಾಹಿತಿ ನೀಡಬೇಕು. ಸಮೀಕ್ಷೆ ವೇಳೆ ಮೊಬೈಲ್ ನಂಬರ್ ಸಹ ಲಿಂಕ್ ಮಾಡಲಾಗುತ್ತದೆ.

ಗಣತಿಗೆ ಸಿಬ್ಬಂದಿ ಬಂದಾಗ ಮನೆಯಲ್ಲಿಲ್ಲದಿದ್ದರೆ ಏನು ಮಾಡಬೇಕು?

ಗಣತಿಗೆ ಸಿಬ್ಬಂದಿ ಬಂದ ವೇಳೆ ಮನೆಯಲ್ಲಿ ಇಲ್ಲದವರು ಆಯೋಗದ ಸಹಾಯವಾಣಿ ಸಂಖ್ಯೆ 80507 70004ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಅಥವಾ kacbckarnataka.govt.in ವೆಬ್​ಸೈಟ್ ಮೂಲಕವೂ ಸರ್ವೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕ್ರಿಶ್ಚನ್ ಕುರುಬ, ಕ್ರಿಶ್ಚನ್ ದಲಿತ ಪ್ರತ್ಯೇಕ ಕಾಲಂ ಏಕೆ?

ಕ್ರಿಶ್ಚನ್ ಕುರುಬ, ಕ್ರಿಶ್ಚನ್ ದಲಿತ ಎಂಬ ಪ್ರತ್ಯೇಕ ಕಾಲಂ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅವರೂ ನಾಗರಿಕರೇ. ಮತಾಂತರ ಆಗಿರುವ ಕಾರಣಕ್ಕೆ ಅವರಿಗೆ ಸಿಗಬೇಕಾದ ಸೌಲಭ್ಯದಿಂದ ಅವರನ್ನು ವಂಚಿತರನ್ನಾಗಿ ಮಾಡಲಾಗದು ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮದ ಕಾಲಂ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಸಿಎಂ, ವೀರಶೈವ ಧರ್ಮ ಅಥವಾ ಲಿಂಗಾಯತ ವೀರಶೈವ ಎಂದಾದರೂ ಬರೆಸಿಕೊಳ್ಳಲಿ. ನಮಗೆ ಅವರ ಶೈಕ್ಷಣಿಕ, ಸಾಮಾಜಿಕ ಪರಿಸ್ಥಿತಿ ಗೊತ್ತಾಗಬೇಕು. ಸಮಿತಿ ಮಾಡಿರವುದು ಧರ್ಮ ತೀರ್ಮಾನ ಮಾಡಲು ಅಲ್ಲ ಎಂದರು.

ಇದನ್ನೂ ಓದಿ: ಜಾತಿಗಣತಿ ಮರು ಸಮೀಕ್ಷೆ ಬಗ್ಗೆ ಸಿಎಂ ಸುದ್ದಿಗೋಷ್ಠಿ, ಲೈವ್​ ನೋಡಿ

ಒಟ್ಟಿನಲ್ಲಿ, ಇದೇ ತಿಂಗಳ 22 ರಿಂದ ರಾಜ್ಯದಲ್ಲಿ ಹೊಸ ಜಾತಿ ಗಣತಿ ನಡೆಯಲಿದೆ. ಮೊದಲಿಗೆ ಆಶಾ ಕಾರ್ಯಕರ್ತರು ಮನೆ ಮನೆಗೂ ಸ್ಟಿಕ್ಕರ್ ಅಂಟಿಸಿ 60 ಪ್ರಶ್ನೆಗಳಿರುವ ಬುಕ್​ಲೆಟ್ ಕೊಡಲಿದ್ದಾರೆ. ಬಳಿಕ ಶಿಕ್ಷಕರು ಗಣತಿಗೆ ಮನೆ ಮನೆಗೂ ತೆರಳಿ, ಬುಕ್​ಲೆಟ್​​ನಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ಕಲೆ ಹಾಕಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ