ಬೆಂಗಳೂರು: ಎಂಇಎಸ್ ಸಂಘಟನೆ ಬ್ಯಾನ್ ಮಾಡುವಂತೆ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಇಳಿದಿವೆ. ಹೋರಾಟಗಾರ ವಾಟಾಳ್ ನಾಗರಾಜ್ ನಾಳೆ ಕರುನಾಡು ಬಂದ್ಗೆ ಕರೆ ಕೊಟ್ಟಿದ್ದು, ನಾಳೆ ಇಡೀ ರಾಜ್ಯ ಸ್ತಬ್ಧವಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಡಿಸೆಂಬರ್ 30ರೊಳಗೆ ಎಂಇಎಸ್ ನಿಷೇಧಿಸುವಂತೆ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಗಡುವು ಕೊಟ್ಟಿದ್ರು. ಇಲ್ಲವಾದಲ್ಲಿ ಡಿಸೆಂಬರ್ 31ರಂದು ಕರ್ನಾಟಕ ಬಂದ್ ಮಾಡೋದಾಗಿ ಘೋಷಿಸಿದ್ರು. ಆದ್ರೆ ವಾಟಾಳ್ ಆಗ್ರಹ ಇನ್ನೂ ಈಡೇರಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಬಂದ್ನಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ. ಆದ್ರೆ ಇದರ ನಡುವೆ ಯಾವುದೇ ಕಾರಣಕ್ಕೂ ನಾಳಿನ ಬಂದ್ ಮುಂದೂಡುವುದಿಲ್ಲ ಎಂದು ಬೆಂಗಳೂರಿನಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ ಖಡಕ್ ಆಗಿ ಉತ್ತರಿಸಿದ್ದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮನವಿ ತಿರಸ್ಕರಿಸಿದ್ದಾರೆ.
ಸಾರ್.. ಕೊರೊನಾ ಇದೆ ದಯವಿಟ್ಟು ನಮ್ಮ ಮಾತು ಕೇಳಿ. ನೂರು ಬಂದ್ ಕರೆ ಕೊಟ್ರೂ ನಾವು ನಿಮ್ಮ ಮಾತು ಕೇಳಿದ್ದೇವೆ. ಈ ಬಾರಿ ನೀವು ನಮ್ಮ ಮಾತು ಕೇಳಿ ಎಂದು ವಾಟಾಳ್ ನಾಗರಾಜ್ಗೆ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ. ನಾಳೆ ಒಂದು ದಿನ ಮಾತ್ರ ಬಂದ್ ಮುಂದೂಡುವಂತೆ ವಾಟಾಳ್ ನಾಗರಾಜ್ ಕಾಲುಮುಟ್ಟಿ ಪ್ರವೀಣ್ ಶೆಟ್ಟಿ ಬೇಡಿಕೊಂಡಿದ್ದಾರೆ. ಆದ್ರೆ ಈ ವೇಳೆ ಹೋರಾಟಗಾರ ವಾಟಾಳ್ ನಾಗರಾಜ್ ಪ್ರವೀಣ್ ಶೆಟ್ಟಿ ಮನವಿ ತಿರಸ್ಕರಿಸಿದ್ದಾರೆ. ಇದನ್ನು ಯಾರು ಶುರುಮಾಡಿದರು ಎಂದು ನನಗೆ ಗೊತ್ತಿದೆ. ಎಲ್ಲಾ ವಿಚಾರ ನನಗೆ ಗೊತ್ತಿದೆ, ನಾನು ಸಣ್ಣ ಹುಡುಗನಲ್ಲ. ಯಾವುದೇ ಕಾರಣಕ್ಕೂ ಬಂದ್ ದಿನಾಂಕ ಮುಂದೂಡಲ್ಲ ಎಂದ ವಾಟಾಳ್ ಪಟ್ಟು ಹಿಡಿದಿದ್ದಾರೆ.ವಾಟಾಳ್ ಬಂದ್ನಿಂದ ಹಿಂದೆ ಹೋದ್ರು ಅಂದರೆ ನನ್ನ ಗತಿ ಏನು? ಎಂದರು.
ಈ ವೇಳೆ, ನಾಳೆ ದೊಡ್ಡಮಟ್ಟದ ಱಲಿ ಮಾಡೋಣ, ಬಂದ್ ಬೇಡ ಎಂದು ವಾಟಾಳ್ ನಾಗರಾಜ್ಗೆ ಮುಖಂಡರು ಮನವಿ ಮಾಡಿಕೊಂಡ್ರು. ಯಾರು ಏನೇ ಕೇಳಿದರೂ ಒಪ್ಪಲು ಸಿದ್ಧವಿಲ್ಲದ ವಾಟಾಳ್ ನಾಗರಾಜ್, ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯಲ್ಲ ಎಂದು ಹೇಳುವ ಮೂಲಕ ಪ್ರವೀಣ್ ಶೆಟ್ಟಿ ಮನವಿ ತಿರಸ್ಕರಿಸಿದ್ದಾರೆ. ಹಾಗೂ ನಾಳೆ ಬಂದ್ ಮಾಡುವುದು ಖಚಿತ ಎಂಬ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯತ್ವ ಪಡೆದು, ಮೇಕೆದಾಟು ಹೋರಾಟಕ್ಕೆ ಬೆಂಬಲ ಕೋರಿದ ಡಿಕೆ ಶಿವಕುಮಾರ್
Published On - 3:54 pm, Thu, 30 December 21