ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ವಿಜಯನಗರ ಪಾಲಿಕೆ ಬಜಾರ್: ಖರ್ಚಾಗಿದೆ 16 ಕೋಟಿ ರೂ.

ವಿಜಯನಗರದ ಬೀದಿ ಬದಿ ವ್ಯಾಪಾರಿಗಳ ಕನಸಿನ ಕೂಸಾದ ಅಂಡರ್ ಗ್ರೌಂಡ್ ಮಾರ್ಕೆಟ್ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಏಳು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ. ಆದರೆ ಇನ್ನೂ ಉದ್ಘಾಟನೆ ಮಾತ್ರ ಆಗಿಲ್ಲ. ಆಗಲೇ ನಗರದಲ್ಲಿ ಸುರಿಯುತ್ತಿರುವ ಮಳೆಗೆ ಮಾರ್ಕೆಟ್ ಮಳಿಗೆಗಳು ಸೋರುತ್ತಿವೆ. ಯಾವುದೇ ಮೂಲಭೂತ ಸೌಕರ್ಯಗಳೂ ಇಲ್ಲ. ವ್ಯಾಪಾರಕ್ಕಾಗಿ ಬರುವ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ.

ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ವಿಜಯನಗರ ಪಾಲಿಕೆ ಬಜಾರ್: ಖರ್ಚಾಗಿದೆ 16 ಕೋಟಿ ರೂ.
ಪಾಲಿಕೆ ಬಜಾರ್
Edited By:

Updated on: Aug 05, 2024 | 7:40 AM

ಬೆಂಗಳೂರು, ಆಗಸ್ಟ್ 5: ವಿಜಯನಗರ ಮುಖ್ಯ ರಸ್ತೆಯಲ್ಲಿ 2017ರಲ್ಲಿ ಬೀದಿಬದಿಯ ವ್ಯಾಪಾರಿಗಳಿಗಾಗಿ ಸುಮಾರು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್ ಗ್ರೌಂಡ್ ಮಾರ್ಕೆಟ್ ಕಾಮಗಾರಿ ಆರಂಭ ಮಾಡಲಾಯಿತು. ಆದರೆ ಸುಮಾರು ಏಳು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ ಇನ್ನೂ ಪೂರ್ಣವಾಗಿಲ್ಲ. ಈ ತಿಂಗಳೋ, ಮುಂದಿನ ತಿಂಗಳು ಓಪನ್ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಅಂಡರ್ ಗ್ರೌಂಡ್ ಮಾರ್ಕೆಟ್​​​ನಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಆರಂಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಂತ ನಿರ್ಮಾಣ ಮಾಡಿದ್ದರೂ ಈಗ ನೋಡಿದರೆ ಟೆಂಡರ್ ಮೂಲಕ ಮಳಿಗೆಗಳನ್ನು ಪಡೆದುಕೊಳ್ಳಬೇಕು ಎನ್ನಲಾಗುತ್ತಿದೆ.

16 ಕೋಟಿ ರೂಪಾಯಿ ವೆಚ್ಚ; ಇಲ್ಲ ಸೌಕರ್ಯ

ಮೊದಲಿಗೆ 10 ಕೋಟಿ ರೂಪಾಯಿ ವೆಚ್ಚ ಅಂದಾಜಿಸಿ ಕಾಮಗಾರಿ ಆರಂಭ ಮಾಡಿದ್ದರು. ಈಗ ನೋಡಿದರೆ 16 ಕೋಟಿ ರೂಪಾಯಿ ವೆಚ್ಚವಾಗಿದೆ ಎನ್ನುತ್ತಿದ್ದಾರೆ. ಈ ಪಾಲಿಕೆ ಬಜಾರ್​​ಗೆ ಬರುವ ಗ್ರಾಹಕರಿಗೆ ವಾಹನಗಳನ್ನು ಪಾರ್ಕಿಂಗ್ ಮಾಡಲು ಯಾವುದೇ ವ್ಯವಸ್ಥೆ ಇಲ್ಲ. ಉದ್ಘಾಟನೆಗೂ ಮುನ್ನವೇ ಮಳಿಗೆಗಳಲ್ಲಿ ನೀರು ಸೋರುತ್ತಿದೆ.

‘ಉದ್ಘಾಟನೆಗೆ ಮುನ್ನವೇ ಮಳೆ ನೀರು ಸೋರುತ್ತಿದೆ ಅಂದರೆ ಎಷ್ಟರಮಟ್ಟಿಗೆ ಕಳಪೆ ಕಾಮಗಾರಿ ಮಾಡಿರಬೇಡಿ ಹೇಳಿ’ ಎಂದು ಸ್ಥಳೀಯ ನಿವಾಸಿ ರಾಜು ಎಂಬವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕೂಡಲೇ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ: ಮಹಿಳೆಯನ್ನು ಬಲವಂತವಾಗಿ ತಬ್ಬಿ ಚುಂಬಿಸಿದ ದುಷ್ಕರ್ಮಿ

ಒಟ್ಟಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸರ್ಕಾರ ಬೀದಿ ಬದಿಯ ವ್ಯಾಪಾರಿಗಳಿಗಾಗಿ ಅಂಡರ್ ಗ್ರೌಂಡ್ ಮಾರ್ಕೆಟ್ ನಿರ್ಮಾಣ ಮಾಡಿದೆ‌. ಆದರೆ ಉದ್ಘಾಟನೆಗೂ ಮುನ್ನವೇ ಮಳಿಗೆಗಳಲ್ಲಿ ಮಳೆ ನೀರು ಸೋರುತ್ತಿದ್ದು, ಮಳಿಗೆಗಳಲ್ಲಿ ವ್ಯಾಪಾರ ಮಾಡಲು ವ್ಯಾಪಾರಸ್ಥರು ಯಾರಾದರೂ ಈ ಕಡೆ ಬರಲು ಧೈರ್ಯ ಮಾಡುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಉತ್ತರ ನೀಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ