
ಬೆಂಗಳೂರು, ಜನವರಿ 31: ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ತ್ರಿವಳಿ ಕೊಲೆ ಪ್ರಕರಣ ಸಂಬಂಧ ಒಂದೊಂದೇ ಶಾಕಿಂಗ್ ಮಾಹಿತಿಗಳು ಹೊರಬರುತ್ತಿವೆ. ತಂದೆ-ತಾಯಿ ಮತ್ತು ಸಹೋದರಿಯನ್ನ ತಾನೇ ಕೊಂದು ಬೆಂಗಳೂರಿಗೆ ಬಂದಿದ್ದ ಆರೋಪಿ ಅಕ್ಷಯ್ ಪೊಲೀಸರೇ ನಂಬುವ ರೀತಿ ಕತೆ ಕಟ್ಟಿದ್ದ. ಜ. 29ರ ರಾತ್ರಿ 11 ಗಂಟೆಗೆ ತಿಲಕನಗರ ಠಾಣೆಗೆ ಬಂದಿದ್ದ ಅಕ್ಷಯ್, ಬೆಂಗಳೂರಿಗೆ ಆಸ್ಪತ್ರೆಗೆಂದು ಬಂದಿದ್ದ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ ಎಂದು ಅಲವತ್ತುಕೊಂಡಿದ್ದ ಎಂಬುದು ಗೊತ್ತಾಗಿದೆ.
ತನ್ನ ತಂದೆ ಭೀಮರಾಜ್ ಗೆ ಆರೋಗ್ಯ ಸಮಸ್ಯೆ ಇದ್ದು, ಹೀಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಬರಬೇಕಿತ್ತು. ಜ.27ರ ಬೆಳಗ್ಗೆ 5 ಗಂಟೆಗೆ ಕೊಟ್ಟೂರಿನಿಂದ ಬೆಂಗಳೂರಿಗೆ ಮನೆಯವರೆಲ್ಲ ಹೊರಟಿದ್ದರು. ತಾಯಿ ಜಯಲಕ್ಷ್ಮೀ, ತಂಗಿ ಅಮೃತಾ ತಂದೆ ಜತೆ ಬೆಂಗಳೂರಿಗೆ ಬಂದಿದ್ದರು. ಸಂಬಂಧಿಗೆ ಕೊಡಲು 4 ಲಕ್ಷ ರೂ. ನಗದು ಕೂಡ ಜೊತೆಯಲ್ಲಿ ತಂದಿದ್ದರು. ಮಧ್ಯಾಹ್ನ ಸುಮಾರು 12:41ಕ್ಕೆ ನನಗೆ ವಾಟ್ಸ್ಯಾಪ್ ಮಾಡಿದ್ದು, ಜಯದೇವ ಆಸ್ಪತ್ರೆಗೆ ಬಂದಿದ್ದೀವಿ ಎಂದು ತಿಳಿಸಿದ್ದರು. ಜಯದೇವ ಆಸ್ಪತ್ರೆಯ ಹಾಗೂ ಮೇಟ್ರೋ ಪಿಲ್ಲರ್ ಫೋಟೋ ಕೂಡ ಕಳುಹಿಸಿದ್ದರು. ಆದರೆ ಸಂಜೆ 6 ಗಂಟೆಗೆ ಫೋನ್ ಮಾಡಿದಾಗ ತಂದೆ ಮತ್ತು ತಾಯಿ ಇಬ್ಬರ ಪೋನ್ ಕೂಡ ಸ್ವಿಚ್ ಆಫ್ ಆಗಿತ್ತು. ತಂಗಿಯ ಪೋನ್ ರಿಂಗ್ ಆದರೂ ರೀಸಿವ್ ಮಾಡಿಲ್ಲ ಎಂದು ಆರೋಪಿ ತಿಳಿಸಿದ್ದ.
ಇದನ್ನೂ ಓದಿ: ವಿಜಯನಗರ ತ್ರಿವಳಿ ಕೊಲೆಗೆ ಟ್ವಿಸ್ಟ್; ಮೂವರನ್ನ ಮನೆಯಲ್ಲೇ ಹೂತುಹಾಕಿದ್ದ, ಲವ್ ಮ್ಯಾಟರ್ ಹತ್ಯೆಗೆ ಕಾರಣವಾಯ್ತಾ?
ಬಳಿಕ ಜ.28ರ ಮಧ್ಯಾಹ್ನ ಅಪರಿಚಿತ ನಂಬರ್ನಿಂದ ತನ್ನ ತಂಗಿ ಕರೆ ಮಾಡಿದ್ದು, ತನ್ನ ಫೋನನ್ನು ಜಯದೇವ ಆಸ್ಪತ್ರೆಯ ವಾರ್ಡನಲ್ಲಿ ಸಿಬ್ಬಂದಿ ತೆಗೆದುಕೊಂಡಿದ್ದಾರೆ. ನೀನು ಬೇಗ ಬಾ ಎಂದು ಹೇಳಿದ್ದಳು. ಆದರೆ ಮತ್ತೆ ಕಾಲ್ ಮಾಡಿದಾಗ ರೆಸ್ಪಾನ್ಸ್ ಇರಲಿಲ್ಲ ಎಂದಿದ್ದ. ಅಲ್ಲದೆ ಜ. 29ರ ಮಧ್ಯಾಹ್ನ 1:30ಕ್ಕೆ ತಾನು ಹಾಗೂ ಮಾವ ಜಯದೇವ ಆಸ್ಪತ್ರೆಗೆ ಬಂದು ಹುಡುಕಾಡಿದ್ದೇವೆ. ಆದರೆ ಆಸ್ಪತ್ರೆಯ ಯಾವ ವಿಭಾಗದಲ್ಲೂ ತಂದೆ ಇರಲಿಲ್ಲ. ಸಿಸಿಟಿವಿ ಕ್ಯಾಮರಾಗಳನ್ನು ಪರೀಶಿಲಿಸಿದರೂ ಯಾರೂ ಕಾಣಲಿಲ್ಲ. ಹೀಗಾಗಿ ಕಾಣೆಯಾದ ತನ್ನ ತಂದೆ, ತಾಯಿ ಮತ್ತು ತಂಗಿಯನ್ನು ಪತ್ತೆ ಮಾಡಿಕೊಡಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದ.
ಅಕ್ಷಯ್ ಮಾತು ನಂಬಿದ ತಿಲಕನಗರ ಪೊಲೀಸರು ಈ ಬಗ್ಗೆ ಕೇಸ್ ದಾಖಲಿಸಿಕೊಂಡು, ಜ.29ರ ರಾತ್ರಿ ಅನೇಕ ಆಸ್ಪತ್ರೆಗಳನ್ನ ಹುಡುಕಾಡಿದ್ದಾರೆ. ಆದರೆ ಯಾವ ಆಸ್ಪತ್ರೆಯಲ್ಲೂ ಅಕ್ಷಯ್ ಕುಟುಂಬಸ್ಥರು ಕಂಡಿಲ್ಲ. ಇದರ ಜೊತೆಗೆ ತಂದೆ, ತಾಯಿ ಮತ್ತು ಸಹೋದರಿ ಒಟ್ಟಿಗೆ ಕಾಣೆಯಾಗಲು ಹೇಗೆ ಸಾಧ್ಯ ಎಂಬ ಅನುಮಾನ ಪೊಲೀಸರಿಗೆ ಬಂದಿದ್ದು, ಹೀಗಾಗಿ ಮಧ್ಯರಾತ್ರಿಯೇ ತನಿಖೆ ಪ್ರಾರಂಭಿಸಿದ್ದ ಆಗ್ನೇಯ ಡಿಸಿಪಿ ಸುಜಿತಾ ಮತ್ತು ಎಸಿಪಿ ವಿಕೆ ವಾಸುದೇವ್ ಟೀಂ ಅಕ್ಷಯ್ನ ಬೇರೆ ಬೇರೆ ಅಯಾಮದಲ್ಲಿ ವಿಚಾರಿಸಿದಾಗ ಸತ್ಯ ಬಯಲಾಗಿದೆ.
ಆರೋಪಿ ಅಕ್ಷಯ್, ಮೂವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಕೊಲೆಗೈದಿದ್ದ. ಮೊದಲು ಚಾಕುವಿನಿಂದ ಇರಿದು ತಾಯಿಯನ್ನು ಕೊಲೆ ಮಾಡಿರುವ ಪಾಪಿ ಪುತ್ರ, ಬಳಿಕ ತಂಗಿಗೆ ಕರೆ ಮಾಡಿ ನಿನಗೆ ಗಿಫ್ಟ್ ತಂದಿರುವೆ ಅಂತಾ ಮನೆಗೆ ಕರೆದು ಆಕೆಯನ್ನೂ ಸಾಯಿಸಿದ್ದ. ಇಬ್ಬರ ಮೃತದೇಹಗಳನ್ನು ಕೊಠಡಿಯಲ್ಲಿ ಇಟ್ಟಿದ್ದ. ಮನೆಗೆ ಬಂದ ತಂದೆ ಟಿವಿ ನೋಡುತ್ತಾ ಕುಳಿತಿದ್ದಾಗ ಅವರ ಕತೆಯನ್ನೂ ಮುಗಿಸಿ, ಮನೆಯ ಹಾಲ್ನಲ್ಲೇ ಮೂರು ಮೃತದೇಹಗಳನ್ನು ಹೂತಿದ್ದ ಎಂಬ ವಿಷಯ ತನಿಖೆ ವೇಳೆ ಬಯಲಾಗಿದೆ.
ವರದಿ- ಪ್ರದೀಪ್ ಚಿಕ್ಕಾಟೆ, ಟಿವಿ9 ಕನ್ನಡ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:30 pm, Sat, 31 January 26