Chamarajpet Idgah Maidan: ಈದ್ಗಾ ಮೈದಾನವು ಕಂದಾಯ ಇಲಾಖೆ ಆಸ್ತಿ ಎಂದ ಬಿಬಿಎಂಪಿ; ವಕ್ಫ್​ ಬೋರ್ಡ್​ನಿಂದ ಆಕ್ಷೇಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 07, 2022 | 12:52 PM

ಈ ಆದೇಶದ ಮೂಲಕ ಬಿಬಿಎಂಪಿ ನ್ಯಾಯಾಂಗ ನಿಂದನೆ ಮಾಡಿದೆ. ಬಿಬಿಎಂಪಿ ಆದೇಶ ಪ್ರಶ್ನಿಸಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಷಫಿ ಅದಿ ಘೋಷಿಸಿದ್ದಾರೆ.

Chamarajpet Idgah Maidan: ಈದ್ಗಾ ಮೈದಾನವು ಕಂದಾಯ ಇಲಾಖೆ ಆಸ್ತಿ ಎಂದ ಬಿಬಿಎಂಪಿ; ವಕ್ಫ್​ ಬೋರ್ಡ್​ನಿಂದ ಆಕ್ಷೇಪ
ವಕ್ಫ್ ಮಂಡಳಿ ಅಧ್ಯಕ್ಷ ಷಫಿ ಸಅದಿ
Follow us on

ಬೆಂಗಳೂರು: ನಗರದ ಚಾಮರಾಜಪೇಟೆ ಈದ್ಗಾ ಮೈದಾನ (Chamarajpet Idgah Maidan) ವಿವಾದವು ದಿನ್ನೊಂದು ತಿರುವು ಪಡೆದುಕೊಳ್ಳುತ್ತಿದೆ. ಈದ್ಗಾ ಮೈದಾನವನ್ನು ಕಂದಾಯ ಇಲಾಖೆ ಆಸ್ತಿ ಎಂದು ಘೋಷಿಸಿದ್ದಕ್ಕೆ ಬಿಬಿಎಂಪಿ (BBMP) ವಿರುದ್ಧ ವಕ್ಫ್​ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಕಿಡಿ ಕಾರಿದ್ದಾರೆ. 1965ರಲ್ಲಿಯೇ ಸುಪ್ರೀಂಕೋರ್ಟ್ ಈ ಮೈದಾನವು ವಕ್ಫ್ ಮಂಡಳಿಯದ್ದು ಎಂದು ತೀರ್ಪು ಕೊಟ್ಟಿದೆ. ಈಗ ಬಿಬಿಎಂಪಿ ಮತ್ತೊಮ್ಮೆ ಪ್ರತ್ಯೇಕ ಆದೇಶ ಹೊರಡಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದೆ. ಬಿಬಿಎಂಪಿ ಆದೇಶ ಪ್ರಶ್ನಿಸಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಅವರು ಘೋಷಿಸಿದ್ದಾರೆ.

ಚಾಮರಾಜಪೇಟೆ ಈದ್ಗಾ ಮೈದಾನವು ನಮಗೆ ಸೇರಿದ್ದಲ್ಲ ಎಂದು ಬಿಬಿಎಂಪಿಯೇ ಒಂದು ಕಾಲಘಟ್ಟದಲ್ಲಿ ಹೇಳಿತ್ತು. ಈಗ ನೋಡಿದರೆ ಅದೇ ಬಿಬಿಎಂಪಿ ಈ ಆಸ್ತಿಯನ್ನು ರಾಜ್ಯ ಕಂದಾಯ ಇಲಾಖೆಗೆ ಸೇರಿದ್ದು ಎಂದು ಆದೇಶ ಹೊರಡಿಸಿದೆ. ಈ ಬಗ್ಗೆ ನಾವು ಕಾನೂನು ತಜ್ಞರಲ್ಲಿ ಚರ್ಚೆ ಮಾಡಿ ಕಾನೂನಾತ್ಮಕ ಹೋರಾಟ ರೂಪಿಸುತ್ತೇವೆ ಎಂದು ಅವರು ತಿಳಿಸಿದರು.

ಮೈದಾನವನ್ನು ತಮ್ಮ ಹೆಸರಿಗೆ ಖಾತಾ ಇಂಡೀಕರಣಕ್ಕೆ ವಕ್ಫ್​ ಬೋರ್ಡ್​ ಬಿಬಿಎಂಪಿಗೆ ಅರ್ಜಿ ಸಲ್ಲಿಸಿತ್ತು. ವಕ್ಫ್​ ಬೋರ್ಡ್​ ಅರ್ಜಿ ವಜಾಗೊಳಿಸಿದ ಬಿಬಿಎಂಪಿ ಚಾಮರಾಜಪೇಟೆ ಮೈದಾನ ರಾಜ್ಯ ಸರ್ಕಾರದ್ದು ಎಂದು ಆದೇಶ ಹೊರಡಿಸಿದೆ ಎಂದು ಹೇಳಿದರು.

ಬಿಬಿಎಂಪಿಯು ಚಾಮರಾಜಪೇಟೆ ಈದ್ಗಾ ಮೈದಾನವನ್ನು ಆಟದ ಮೈದಾನ ಅಲ್ಲ ಎಂದು ಒಪ್ಪಿದ್ದು ಸ್ವಾಗತಾರ್ಹ ಬೆಳವಣಿಗೆ. ಬಿಬಿಎಂಪಿಗೆ ನಮ್ಮ ದಾಖಲೆಗಳನ್ನ ಸಲ್ಲಿಕೆ ಮಾಡಿ, 2018ರಲ್ಲೇ ಖಾತೆ ಇಂಡೀಕರಣಕ್ಕೆ ಮನವಿ ಸಲ್ಲಿಸಿದ್ದೇವೆ. ಹಳೆಯ ಖಾತೆಯಲ್ಲಿ ದರ್ಗಾ ಎಂದು ನಮೂದಾಗಿದೆ. ನಮಗೆ ಹೊಸ ಖಾತೆ ಮಾಡಿಕೊಡಿ ಎಂದು ಮನವಿ ಮಾಡಿದ್ದೇವೆ. ಬಿಬಿಎಂಪಿ ಇದು ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ಹೇಳಿತ್ತು. ಈಗ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಈಗ ತಿಳಿಸಿದೆ. ನಾವು ಸುಪ್ರೀಂಕೋರ್ಟ್​ ಆದೇಶ ಪ್ರತಿ ಸೇರಿದಂತೆ ಎಲ್ಲಾ ಪೂರಕ ದಾಖಲೆಗಳನ್ನ ಅಧಿಕಾರಿಗಳಿಗೆ ನೀಡಿದ್ದೆವು ಎಂದು ಹೇಳಿದರು. ಸ್ವಾತಂತ್ರ್ಯೋತ್ಸವವನ್ನು ಹೇಗೆ ಆಚರಿಸಬೇಕೆಂದು ನಾವು ನಮ್ಮ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.

ದಾಖಲೆ ಸಲ್ಲಿಸದ ವಕ್ಪ್ ಬೋರ್ಡ್

ಈದ್ಗಾ ಮೈದಾನವು ವಕ್ಫ್ ಬೋರ್ಡ್​ಗೆ ಸೇರಿದ್ದು ಎನ್ನುವುದಕ್ಕೆ ದಾಖಲೆ ನೀಡುವಂತೆ ಕೋರಿ ವಕ್ಪ್ ಬೋರ್ಡ್​ಗೆ ಜಂಟಿ ಆಯುಕ್ತ ಶ್ರೀನಿವಾಸ್ ನೋಟಿಸ್ ನೀಡಿದ್ದರು. ಆದರೆ ಎರಡು ತಿಂಗಳ ಕಾಲಾವಕಾಶ ನೀಡಿದರೂ ಸಹ ವಕ್ಪ್ ಬೋರ್ಡ್ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ದಾಖಲೆ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದರು.

ಧ್ವಜ ಹಾರಿಸಲು ಅವಕಾಶ ಕೋರಿದ ನಾಗರಿಕ ಒಕ್ಕೂಟ

ಚಾಮರಾಜಪೇಟೆ ಮೈದಾನವು ಕಂದಾಯ ಇಲಾಖೆಗೆ ಸೇರಿದ್ದು ಎನ್ನುವ ಬಿಬಿಎಂಪಿ ಆದೇಶದ ಹಿನ್ನೆಲೆಯಲ್ಲಿ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಚಾಮರಾಜಪೇಟೆ ನಾಗರಿಕರ ಒಕ್ಕೂಟವು ಮನವಿ ಮಾಡಿದೆ. ಈ ಸಂಬಂಧ ತಮ್ಮ ನಿಲುವು ವಿವರಿಸಲು ನಾಗರಿಕರ ಒಕ್ಕೂಟದ ಮುಖಂಡರು ಇಂದು (ಆಗಸ್ಟ್ 7) ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದಾರೆ.

Published On - 9:06 am, Sun, 7 August 22