ರಕ್ಷಣಾ, ರೈಲ್ವೆ ವಲಯಕ್ಕೂ ತಟ್ಟಿದ ಯುದ್ಧದ ಬಿಸಿ: ಟೂಲ್ಸ್ ಪ್ರೊಪೈಲ್ ಕಚ್ಚಾವಸ್ತು ಸರಬರಾಜು ಮಾಡುವ ಆಟೋಮೊಬೈಲ್ ಇಂಡಸ್ಟ್ರಿ ಬಂದ್

ಇರಾನ್-ಇಸ್ರೇಲ್ ಯುದ್ಧದ ಬಿಸಿ ಬೆಂಗಳೂರಿನ ಪೀಣ್ಯಾ ಕೈಗಾರಿಕಾ ವಲಯಕ್ಕೂ ತಟ್ಟಿದೆ. ಕಚ್ಚಾ ವಸ್ತು ಮತ್ತು LPG ಕೊರತೆಯಿಂದ ಶ್ರೀ ಲಕ್ಷ್ಮಿ ಪ್ರೊಪೈಲ್ ಆಟೋಮೊಬೈಲ್ ಇಂಡಸ್ಟ್ರಿ ತಾತ್ಕಾಲಿಕವಾಗಿ ಮುಚ್ಚಿದೆ. ಇದು ರಕ್ಷಣಾ ಮತ್ತು ರೈಲ್ವೆ ವಲಯಕ್ಕೆ ಬಿಡಿಭಾಗಗಳನ್ನು ಪೂರೈಸುತ್ತಿತ್ತು. ನೂರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಬೆಂಗಳೂರಿನ 400ಕ್ಕೂ ಹೆಚ್ಚು ಕೈಗಾರಿಕೆಗಳು ಸಂಕಷ್ಟ ಎದುರಿಸುತ್ತಿವೆ.

ರಕ್ಷಣಾ, ರೈಲ್ವೆ ವಲಯಕ್ಕೂ ತಟ್ಟಿದ ಯುದ್ಧದ ಬಿಸಿ: ಟೂಲ್ಸ್ ಪ್ರೊಪೈಲ್ ಕಚ್ಚಾವಸ್ತು ಸರಬರಾಜು ಮಾಡುವ ಆಟೋಮೊಬೈಲ್ ಇಂಡಸ್ಟ್ರಿ ಬಂದ್
ಶ್ರೀ ಲಕ್ಷ್ಮಿ ಪ್ರೊಪೈಲ್ ಆಟೋಮೊಬೈಲ್ ಇಂಡಸ್ಟ್ರಿ
Image Credit source: tv9
Edited By:

Updated on: Mar 23, 2026 | 8:56 AM

ಬೆಂಗಳೂರು, ಮಾರ್ಚ್ 23: ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಯುದ್ಧದ (US-Israel-Iran War) ಪರಿಣಾಮ ಇದೀಗ ಕರ್ನಾಟಕ ರಾಜಧಾನಿ ಬೆಂಗಳೂರಿಗೂ (Bangalore) ತಟ್ಟಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕಚ್ಚಾ ತೈಲ ಬೆಲೆ ಏರಿಕೆಯಷ್ಟೇ ಅಲ್ಲ, ನಗರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೂ ನೇರ ಪರಿಣಾಮ ಬೀಳುತ್ತಿದೆ. ಇದು ದೇಶದ ರಕ್ಷಣಾ ಕ್ಷೇತ್ರ ಮತ್ತು ರೈಲ್ವೆ ಇಲಾಖೆ ಮೇಲೂ ಪರಿಣಾಮ ಬೀರುತ್ತಿದೆ. ರಕ್ಷಣಾ ಇಲಾಖೆಯ ವಾಹನಗಳ ತಯಾರಿಕೆಗೆ ಹಾಗೂ ರೈಲ್ವೆ ಇಲಾಖೆಗೆ ಟೂಲ್ಸ್ ಪ್ರೊಪೈಲ್ ಕಚ್ಚಾವಸ್ತು ಸರಬರಾಜು ಮಾಡುತ್ತಿದ್ದ ಪೀಣ್ಯಾದಲ್ಲಿರುವ ಶ್ರೀ ಲಕ್ಷ್ಮಿ ಪ್ರೊಪೈಲ್ ಆಟೋಮೊಬೈಲ್ ಇಂಡಸ್ಟ್ರಿಯನ್ನು ತಾತ್ಕಲಿಕವಾಗಿ ಬಂದ್ ಮಾಡಲಾಗಿದೆ.

ಪೀಣ್ಯ ಕೈಗಾರಿಕಾ ವಲಯಕ್ಕೆ ಬಿಗ್ ಶಾಕ್

ಬೆಂಗಳೂರು ನಗರದಲ್ಲಿರುವ ಪೀಣ್ಯ ಕೈಗಾರಿಕಾ ವಲಯದ ಸಣ್ಣ ಕೈಗಾರಿಕೆಗಳು ಈಗ ಗಂಭೀರ ಸಂಕಷ್ಟ ಎದುರಿಸುತ್ತಿವೆ. ವಿಶೇಷವಾಗಿ ಟೂಲ್ಸ್, ಪ್ರೊಫೈಲ್ ಮತ್ತು ಆಟೋಮೊಬೈಲ್ ಬಿಡಿಭಾಗ ತಯಾರಿಕಾ ಕಂಪನಿಗಳು ಕಚ್ಚಾ ವಸ್ತು ಹಾಗೂ ಇಂಧನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ.

ಎಲ್​ಪಿಜಿ ಕೊರತೆಯಿಂದ ಇಂಡಸ್ಟ್ರಿ ಬಂದ್

ಪೀಣ್ಯಾದಲ್ಲಿರುವ ಶ್ರೀ ಲಕ್ಷ್ಮಿ ಪ್ರೊಪೈಲ್ ಆಟೋಮೊಬೈಲ್ ಇಂಡಸ್ಟ್ರಿ ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಿದೆ. ಈ ಸಂಸ್ಥೆ ಭಾರತೀಯ ರಕ್ಷಣಾ ವಲಯ ಮತ್ತು ರೈಲ್ವೆಗೆ ಅಗತ್ಯವಾದ ಬಿಡಿಭಾಗಗಳನ್ನು ಪೂರೈಸುತ್ತಿತ್ತು. ಜೊತೆಗೆ ವಿಪ್ರೋ ಸೇರಿದಂತೆ ಹಲವು ಕಂಪನಿಗಳಿಗೂ ಪೂರೈಕೆಗಳನ್ನು ಮಾಡುತ್ತಿತ್ತು.

ಕಳೆದ ಒಂದು ವಾರದಿಂದ LPG ಗ್ಯಾಸ್ ಸಿಲಿಂಡರ್ ಲಭ್ಯವಾಗದೆ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರತೀ ಶಿಫ್ಟ್‌ಗೆ 8 ರಿಂದ 10 ಸಿಲಿಂಡರ್ ಅಗತ್ಯವಿದ್ದರೂ, ಸರಬರಾಜು ನಿಂತಿರುವುದರಿಂದ ಕಂಪನಿ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ.

ನೂರಾರು ಉದ್ಯೋಗಿಗಳಿಗೆ ಸಂಕಷ್ಟ

ಈ ಕಂಪನಿಯಲ್ಲಿ ಪ್ರತಿ ಶಿಫ್ಟ್‌ಗೆ ಸುಮಾರು 50 ಮಂದಿ ಕೆಲಸ ಮಾಡುತ್ತಿದ್ದರು. ಈಗ ಗ್ಯಾಸ್ ಕೊರತೆಯಿಂದ ನೂರಾರು ಉದ್ಯೋಗಿಗಳು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೇತನ ಕಡಿತ ಹಾಗೂ ಉದ್ಯೋಗ ಕಳೆದುಕೊಳ್ಳುವ ಭೀತಿ ಹೆಚ್ಚಾಗಿದೆ.

400ಕ್ಕೂ ಹೆಚ್ಚು ಕೈಗಾರಿಕೆಗಳಿಗೆ ಎಫೆಕ್ಟ್

ಪೀಣ್ಯಾದಲ್ಲಿ 12 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿದ್ದು, ಅವುಗಳಲ್ಲಿ ಸಾವಿರಾರು ಕಂಪನಿಗಳು LPG ಗ್ಯಾಸ್ ಮೇಲೆ ಅವಲಂಬಿತವಾಗಿವೆ. ಇತ್ತೀಚೆಗೆ ಇಂಡಸ್ಟ್ರಿಯಲ್ ಗ್ಯಾಸ್ ಸರಬರಾಜು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ 400ಕ್ಕೂ ಹೆಚ್ಚು ಕೈಗಾರಿಕೆಗಳು ತಾತ್ಕಾಲಿಕವಾಗಿ ಬಂದ್ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ಕೈಗಾರಿಕೆಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರ ಕುಟುಂಬಗಳ ಜೀವನೋಪಾಯ ಇದರ ಮೇಲೆ ಅವಲಂಬಿತವಾಗಿದೆ. ಕೆಲಸ ನಿಂತಿರುವುದರಿಂದ ನೂರಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಪ್ರವಾಸೋದ್ಯಮಕ್ಕೂ ತಟ್ಟಿದ LPG ಅಭಾವ: ಕರಾವಳಿ ಖಾದ್ಯಗಳಿಗೆ ಬ್ರೇಕ್; ಪ್ರವಾಸಿಗರಿಗೆ ನಿರಾಶೆ​

ಒಟ್ಟಿನಲ್ಲಿ, ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಬೆಂಗಳೂರಿನ ಕೈಗಾರಿಕಾ ವಲಯಕ್ಕೂ ತಟ್ಟಿದ್ದು, ಯುದ್ಧ ಇನ್ನಷ್ಟು ಮುಂದುವರೆದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ವ್ಯಕ್ತವಾಗಿದೆ. ಉದ್ಯಮ ವಲಯದಲ್ಲಿ ಈಗಲೇ ಅನಿಶ್ಚಿತತೆ ಹೆಚ್ಚಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us