ಬೆಂಗಳೂರು: ಗಣೇಶೋತ್ಸವ ಸಮಿತಿ ವತಿಯಿಂದ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. 75 ವರ್ಷದ ಇತಿಹಾಸದಲ್ಲಿ ಮೊದಲ ಭಾರಿಗೆ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದೇವೆ. ಇನ್ನು ಮುಂದೆ ಜಯಚಾಮರಾಜೇಂದ್ರ ಮೈದಾನದಲ್ಲಿ ಪ್ರತಿ ವರ್ಷ ಗಣೇಶೋತ್ಸವ ಮಾಡೇ ಮಾಡುತ್ತೇವೆ ಎಂದು ಪ್ರತಿಷ್ಠಿತ ಲಹರಿ ಆಡಿಯೋ ಸಂಸ್ಥೆ ಮಾಲೀಕ ಲಹರಿ ವೇಲು ಹೇಳಿದರು. ಚಾಮರಾಜಪೇಟೆ ನಾಗರೀಕ ಒಕ್ಕೂಟ, ಗಣೇಶೋತ್ಸವ ಸಮಿತಿಯಿಂದ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಗಂಗಾಜಲವನ್ನು ಮೈದಾನದಲ್ಲಿ ಪ್ರೋಕ್ಷಣೆ ಮಾಡಿ ಪ್ರತಿಷ್ಠಾಪನೆ ಮಾಡುತ್ತೇವೆ. ಯಾವುದೇ ಅಹಿತಕರ ಘಟನೆ ಇಲ್ಲದೆ ಎಲ್ಲಾ ಧರ್ಮದವರು ಹಬ್ಬದಲ್ಲಿ ಭಾಗಿಯಾಗಬಹುದು ಎಂದು ಹೇಳಿದರು.
ಗಣೇಶೋತ್ಸವದಲ್ಲಿ ಸಾವರ್ಕರ್ ಪೋಟೋ ಇಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು ಅವರ ಪೋಟೊ ಇಡಿ ಎಂಬ ಒತ್ತಾಯ ಬಂದ್ರೆ ಇಡುತ್ತೇವೆ. ಸ್ವಾತಂತ್ರ್ಯ ಧ್ವಜಾರೋಹಣದ ದಿನ ಮುಸ್ಲಿಂರು ಸಹ ವಂದೇಮಾತರಂ ಗೀತೆ ಹಾಡಿದ್ರು. ಸುಮ್ಮನೆ ನಮ್ಮಲ್ಲಿ ಭೇದ-ಭಾವ ತರುವ ಪ್ರಯತ್ನ ಮಾಡಲಾಗುತ್ತಿದೆ. ನಾವೆಲ್ಲಾ ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಗಲಭೆ ಇಲ್ಲ, ಎಲ್ಲರೂ ಒಟ್ಟಾಗಿ ಗಣೇಶೋತ್ಸವ ಮಾಡುತ್ತೇವೆ. ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್ಗೆ ಹೋಗುವ ವಿಚಾರವಾಗಿ ಮಾತನಾಡಿದ ಅವರು ಹೋಗಲಿ ಅದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ. ನಾವು ಸುಪ್ರೀಂ ಕೋರ್ಟ್ಗೆ ಹೋಗ್ತೇವೆ ಅಲ್ಲೂ ನಮಗೆ ಜಯ ಸಿಗುತ್ತೆ. ಚಾಮರಾಜಪೇಟೆಯ ಗಣೇಶೋತ್ಸವವನ್ನು ತಡೆಯಲು ಯಾರಿಂದಲೂ ಆಗಲ್ಲ. ಇಂದು ಸಂಜೆಯೊಳಗೆ ಸರ್ಕಾರದಿಂದ ಪರ್ಮೀಶನ್ ಸಿಗುವ ಸಾಧ್ಯತೆ ಇದೆ ಎಂದು ಲಹರಿ ವೇಲು ಹೇಳಿಕೆ ನೀಡಿದರು.
ಗಣೇಶೋತ್ಸವ ನಡೆಯುತ್ತದೋ ಇಲ್ವೋ ಎನ್ನೋ ಜಿಜ್ಞಾಸೆ ಕಾಡುತ್ತಿತ್ತು: ಶಾಸಕ ರವಿ ಸುಬ್ರಹ್ಮಣ್ಯ
ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಪ್ರತಿಕ್ರಿಯೆ ನೀಡಿದ್ದು, ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ ನಡೆಯುತ್ತದೋ ಇಲ್ವೋ ಎನ್ನೋ ಜಿಜ್ಞಾಸೆ ಕಾಡುತ್ತಾ ಇತ್ತು. ಆದರೆ ನ್ಯಾಯಾಲಯದ ಆದೇಶದ ಪ್ರಕಾರ ಗಣೇಶೋತ್ಸವ ನಡೆಯಬೇಕು ಎನ್ನುವುದು ನಾಗರೀಕರ ಒತ್ತಾಸೆಯಾಗಿದೆ. ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುತ್ತದೆ ಎಂಬ ನಂಬಿಕೆ ಇದೆ. ಅತ್ಯಂತ ವಿಜೃಂಭಣೆಯಿಂದ ಅಲ್ಲಿ ಗಣೇಶೋತ್ಸವ ಆಚರಣೆ ಮಾಡ್ತೇವೆ. ಹುಬ್ಬಳ್ಳಿಯಲ್ಲೂ ಅವಕಾಶ ಸಿಗತ್ತೆ ಎಂಬ ನಂಬಿಕೆ ಇದೆ. ಮತೀಯರನ್ನು ಒಲೈಸುವ ನಿಟ್ಟಿನಲ್ಲಿ ಅಡ್ಡಿ ಆತಂಕ ಉಂಟು ಮಾಡ್ತಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಕೇವಲ ಎರಡು ರಾಜ್ಯಗಳಿಗೆ ಸೀಮಿತವಾಗಿ ಕಾಂಗ್ರೆಸ್ ಕೆಳಗಿಳಿದಿದೆ. ಕಾಂಗ್ರೆಸ್ ಮುಕ್ತ ಭಾರತದ ಹೀನ ಸ್ಥಿತಿಗೆ ಕಾಂಗ್ರೆಸ್ ತಲುಪುತ್ತಿದೆ ಎಂದು ಹೇಳಿದರು.
ನಮ್ಮಲ್ಲಿ ಈಗ ಯಾವುದೇ ಮನಸ್ತಾಪ ಇಲ್ಲ: ರುಕ್ಮಾಂಗ
ಇದೇ ತಿಂಗಳ 31ರಂದು ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡ್ತೇವೆ. ಸರ್ಕಾರಕ್ಕೆ ತುಂಬಾ ಜನ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಯಾರಿಗೆ ಅನುಮತಿ ಕೊಟ್ರೂ ಒಟ್ಟಿಗೆ ಹಬ್ಬ ಆಚರಣೆ ಮಾಡ್ತೀವಿ. ಈಗಾಗಲೇ ಸಮಿತಿಗಳ ರಚನೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆಗೆ ಪ್ರತ್ಯೇಕ ಸಮಿತಿ ರಚನೆ ಮಾಡಿದ್ದೇವೆ. ಇಡೀ ಕರ್ನಾಟಕದ ಜನ ಚಾಮರಾಜಪೇಟೆ ಯತ್ತ ನೋಡುತ್ತಿದ್ದಾರೆ. ನಾವು 11 ದಿನದ ಹಬ್ಬಕ್ಕೆ ಅನುಮತಿ ಕೋರಿದ್ದೇವೆ. ಯಾರಿಗೆ ಅನುಮತಿ ಕೊಟ್ರೂ ನಾವು ಒಟ್ಟಿಗೆ ಹಬ್ಬ ಆಚರಿಸ್ತೀವಿ. ನಮ್ಮ ಸಂಘಟನೆಯಲ್ಲಿ ಯಾವುದೇ ಒಡಕು ಇಲ್ಲ ಎಲ್ಲರೂ ಒಟ್ಟಾಗಿದ್ದೇವೆ. ಸಂಘಟನೆ ಅಂದ ಮೇಲೆ ಕೆಲವು ಮನಸ್ತಾಪ ಬರುತ್ತೆ ಸರಿಹೋಗುತ್ತೆ, ನಮ್ಮಲ್ಲಿ ಈಗ ಯಾವುದೇ ಮನಸ್ತಾಪ ಇಲ್ಲ ಎಂದು ರುಕ್ಮಾಂಗದ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನೂ ಓದಲು ಇಲ್ಲಿ ಕ್ಲಿಕ್ ಮಾಡಿ.