ಕಪ್ಪು ಟಿ-ಶರ್ಟ್ ಧರಿಸಿ ಕಾರು ಚಲಾಯಿಸುತ್ತೀರಾ? ಸೀಟ್ ಬೆಲ್ಟ್ ಧರಿಸಿದ್ದರೂ ದಂಡಕ್ಕೆ ನೋಟಿಸ್ ಬರಬಹುದು ಎಚ್ಚರ!

|

Updated on: Aug 19, 2024 | 9:15 AM

ಸೀಟ್ ಬೆಲ್ಟ್ ಧರಿಸಿಕೊಂಡು ಕಾರು ಚಾಲನೆ ಮಾಡಿಯೂ ನಿಮಗೆ ದಂಡ ಪಾವತಿಸುವಂತೆ ಚಲನ್ ಬಂದಿದೆಯಾ? ನೀವು ನಿಯಮ ಉಲ್ಲಂಘಿಸಿದ್ದೀರಿ ಎನ್ನಲಾದ ಆ ದಿನ ನೀವು ಕಪ್ಪು ಬಣ್ಣದ ಅಥವಾ ಸೀಟ್​ ಬೆಲ್ಟ್​​ ಬಣ್ಣವನ್ನೇ ಹೋಲುವ ಟಿ-ಶರ್ಟ್ ಅಥವಾ ಅಂಗಿ ಧರಿಸಿದ್ದೀರಾ? ಹಾಗಿದ್ದರೆ ಖಂಡಿತಾ ಒಂದಕ್ಕೊಂದು ಸಂಬಂಧವಿದೆ. ಅದೇನು ಎಂಬ ಮತ್ತು ತಪ್ಪು ಮಾಡದೆ ಚಲನ್ ಪಾವತಿಸುವಂತೆ ನೋಟಿಸ್ ಬಂದರೆ ಏನು ಮಾಡಬೇಕೆಂಬ ವಿವರ ಇಲ್ಲಿದೆ ನೋಡಿ.

ಕಪ್ಪು ಟಿ-ಶರ್ಟ್ ಧರಿಸಿ ಕಾರು ಚಲಾಯಿಸುತ್ತೀರಾ? ಸೀಟ್ ಬೆಲ್ಟ್ ಧರಿಸಿದ್ದರೂ ದಂಡಕ್ಕೆ ನೋಟಿಸ್ ಬರಬಹುದು ಎಚ್ಚರ!
ಸೀಟ್ ಬೆಲ್ಟ್ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಆಗಸ್ಟ್ 19: ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವವರಿಗೆ ದಂಡ ವಿಧಿಸುವ ಪ್ರಕ್ರಿಯೆಯು ಬೆಂಗಳೂರು ಸೇರಿದಂತೆ, ಕರ್ನಾಟಕದಾದ್ಯಂತ ಚುರುಕುಗೊಂಡಿದೆ. ಆದರೆ, ಸೀಟ್ ಬೆಲ್ಟ್ ಧರಿಸಿದ ಹೊರತಾಗಿಯೂ ದಂಡಪಾವತಿಸುವಂತೆ ನೋಟಿಸ್ ಬರುತ್ತಿದೆ ಎಂದು ಅನೇಕ ವಾಹನ ಸವಾರರು ದೂರಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಯಾಮರಾ ಆಧಾರದಿಂದ ಸೀಟ್ ಬೆಲ್ಟ್ ಧರಿಸಿದವರನ್ನು ಪತ್ತೆಹಚ್ಚಿ ದಂಡದ ನೋಟಿಸ್ ಕಳುಹಿಸಲಾಗುತ್ತಿದೆ. ಆದರೆ, ಈ ಕ್ಯಾಮೆರಾಗಳು ತಪ್ಪಾಗಿ ಗುರುತಿಸಿ ದಂಡ ವಿಧಿಸುತ್ತಿವೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

ಬೆಂಗಳೂರು ಟ್ರಾಫಿಕ್ ಎಐ ಕ್ಯಾಮರಾಗಳು ವಿನಾಕಾರಣ ಸೀಟ್‌ಬೆಲ್ಟ್ ಟಿಕೆಟ್ ಚಲನ್‌ಗಳನ್ನು ನೀಡುತ್ತಿವೆ. ಸೀಟ್‌ಬೆಲ್ಟ್ ಮತ್ತು ಶರ್ಟ್ ಅಥವಾ ಕೋಟ್‌ನ ಒಂದೇ ರೀತಿಯ ಬಣ್ಣದಿಂದಾಗಿ ಈ ರೀತಿ ನಡೆಯುತ್ತಿದೆ. ಶರ್ಟ್ ಅಥವಾ ಕೋಟ್ ಮತ್ತು ಸೀಟ್ ಬೆಲ್ಟ್​​ ಎರಡನ್ನೂ ಪ್ರತ್ಯೇಕಿಸಲು ಕ್ಯಾಮೆರಾಗಳ ಅಸಮರ್ಥತೆಯಿಂದ ಈ ಸಮಸ್ಯೆ ಉದ್ಭವಿಸುತ್ತಿದೆ ಎಂದು siliconcity.bengaluru ಎಂಬ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಮೈಸೂರಿನಲ್ಲಿ ಕಾರು ಚಾಲನೆ ಮಾಡುವ ಜನರು ತಮ್ಮ ಚಲನ್‌ಗಳನ್ನು ಪರಿಶೀಲಿಸಲು ನಾನು ವಿನಂತಿಸುತ್ತೇನೆ. ಈ ಪೋಸ್ಟ್ ಅನ್ನು ನೋಡಿದ ನಂತರ, ನನ್ನ ಕಾರಿನ ಚಲನ್ ಅನ್ನು ಪರಿಶೀಲಿಸಿದ್ದೇನೆ ಮತ್ತು ನನಗೆ ಆಶ್ಚರ್ಯವಾಯಿತು. ಸೀಟ್‌ಬೆಲ್ಟ್ ಧರಿಸಿದ್ದರೂ ಧರಿಸಿರಲಿಲ್ಲವೆಂಬ ಕಾರಣಕ್ಕಾಗಿ ಚಲನ್ ಬಂದಿದೆ’ ಎಂದು ಫೇಸ್‌ಬುಕ್ ಪೋಸ್ಟ್​ಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸೀಟ್‌ಬೆಲ್ಟ್ ಇಲ್ಲದೆ ಕಾರನ್ನು ಚಲಾಯಿಸುವುದಿಲ್ಲ ಮತ್ತು ಹಾಗೆ ಕಾರು ಓಡಿಸಲು ಸಾಧ್ಯವಾಗುವುದಿಲ್ಲ. ಆದಾಗ್ಯೂ ಚಲನ್ ಬಂದಿದೆ. ಅನೇಕರು ಇಂತಹ ಚಲನ್ ಪಡೆಯುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಮಸ್ಯೆ ಒಪ್ಪಿಕೊಂಡ ಪೊಲಿಸರು

ಎಐ ಕ್ಯಾಮರಾ ಆಧಾರಿತ ಚಲನ್ ಕಳುಹಿಸುವುದರಲ್ಲಿ ಸಮಸ್ಯೆ ಇರುವುದನ್ನು ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಡ್ಕರ್ ಒಪ್ಪಿಕೊಂಡಿದ್ದಾರೆ. ನಾವು ಈ ಬಗ್ಗೆ ಅರಿತುಕೊಂಡು ಕೆಲಸ ಮಾಡುತ್ತಿದ್ದೇವೆ. ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಮುಖ್ಯಸ್ಥರಾಗಿರುವ ಎಡಿಜಿಪಿ ಅಲೋಕ್ ಕುಮಾರ್ ಅವರಿಗೂ ಇದು ತಿಳಿದಿದೆ. ತಂತ್ರಜ್ಞಾನವನ್ನು ಉತ್ತಮಗೊಳಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿರುವುದಾದಿ ‘ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ವಾಯುಮಾಲಿನ್ಯ: ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ತಪಾಸಣೆ ಮಾಡ್ತಿಲ್ಲ ಟ್ರಾಫಿಕ್ ಪೊಲೀಸರು!

ಬೆಂಗಳೂರು ನಗರದಲ್ಲಿ ಸಮಸ್ಯೆಯನ್ನು 2023 ರ ಡಿಸೆಂಬರ್​​ನಲ್ಲೇ ಗುರುತಿಸಲಾಗಿದ್ದು, ಕ್ರಮ ಕೈಗೊಳ್ಳಲಾಗಿದೆ. ಈ ಸಮಸ್ಯೆಯ ಕಾರಣ ಈಗ ನಾವು ಎಐ ಕ್ಯಾಮರಾಗಳು ಸೆರೆಹಿಡಿದಿರುವ ಚಿತ್ರಗಳನ್ನು ಮ್ಯಾನುವಲ್ ಆಗಿ ಪರಿಶೀಲಿಸಿಯೇ ತಪ್ಪೆಸಗಿದ್ದು ದೃಢಪಟ್ಟಲ್ಲಿ ಮಾತ್ರ ಚಲನ್ ಅನ್ನು ನೀಡುತ್ತೇವೆ ಎಂದು ಬೆಂಗಳೂರಿನ ಹೆಚ್ಚುವರಿ ಟ್ರಾಫಿಕ್ ಕಮಿಷನರ್ ಎನ್ ಅನುಚೇತ್ ತಿಳಿಸಿದ್ದಾರೆ.

ತಪ್ಪಾಗಿ ಚಲನ್ ಬಂದರೆ ಏನು ಮಾಡಬೇಕು?

ತಪ್ಪಾಗಿ ಚಲನ್ ಬಂದರೆ ಮತ್ತು ಅವುಗಳನ್ನು ರದ್ದುಗೊಳಿಸಲು ಬಯಸುವ ನಾಗರಿಕರು automationpubbcp@ksp.gov.in ಅಥವಾ bangaloretrafficpolice@gmail.com ಗೆ ಮೇಲ್ ಮಾಡಬಹುದು ಎಂದು ಅನುಚೇತ್ ಹೇಳಿದ್ದಾರೆ. ಬಿಟಿಪಿ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್, ಹತ್ತಿರದ ಟ್ರಾಫಿಕ್ ಪೊಲೀಸ್ ಠಾಣೆಗೆ ಭೇಟಿ ನೀಡಬಹುದು ಅಥವಾ ಕೆಎಸ್‌ಪಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ