ಬೆಂಗಳೂರು, ಡಿಸೆಂಬರ್ 27: ಎಪಿಕೆ ಫೈಲ್‌ಗಳನ್ನು ಕಳುಹಿಸಿ ವಾಟ್ಸ್ಆ್ಯಪ್, ಮೊಬೈಲ್ ನಂಬರ್ ಹ್ಯಾಕ್ ಮಾಡುವ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಹೆಚ್ಚಾಗಿದ್ದು, ಇದೀಗ ಬೆಂಗಳೂರು ಪೊಲೀಸರಿಗೂ ಅದರ ಬಿಸಿ ತಟ್ಟಿದೆ. ಬೆಂಗಳೂರಿನ ಹಲವು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಮೊಬೈಲ್ ಫೋನ್ ಸಂಖ್ಯೆಗಳು ಮತ್ತು ವಾಟ್ಸ್ಆ್ಯಪ್ ಖಾತೆಗಳನ್ನು ಸೈಬರ್ ವಂಚಕರು ಬುಧವಾರ ಎಪಿಕೆ ಫೈಲ್ ಲಿಂಕ್ ಕಳುಹಿಸಿ ಹ್ಯಾಕ್ ಮಾಡಿರುವುದು ಮೂಲಗಳಿಂದ ತಿಳಿದುಬಂದಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು, ಇನ್ಸ್ಪೆಕ್ಟರ್ಗಳು ಸೇರಿದಂತೆ ಅನೇಕ ಪೊಲೀಸ್ ಸಿಬ್ಬಂದಿ ಅಪರಿಚಿತ ಸಂಖ್ಯೆಯ ರಿಸೀವರ್‌ಗಳು ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ ಎಪಿಕೆ ಫೈಲ್ ಲಿಂಕ್ ಅನ್ನು ದುರುದ್ದೇಶಪೂರಿತವೆಂದು ತಿಳಿಯದೆ ಕ್ಲಿಕ್ ಮಾಡಿದ್ದಾರೆ ಎನ್ನಲಾಗಿದೆ.
ವಂಚಕರು ಆಡುಗೋಡಿ ಟ್ರಾಫಿಕ್ ಮತ್ತು ಜ್ಞಾನಭಾರತಿ, ಗಿರಿನಗರ ಮತ್ತು ಬಸವನಗುಡಿ ಠಾಣೆ ಸೇರಿದಂತೆ ಕೆಲವು ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಅಧಿಕೃತ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿದ್ದಾರೆ. ಅವರ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮತ್ತು ಗುಂಪುಗಳಿಗೆ ಎಪಿಕೆ ಫೈಲ್ ಲಿಂಕ್‌ಗಳನ್ನು ಕಳುಹಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಲಿಂಕ್ ಡೌನ್‌ಲೋಡ್ ಮಾಡಿದ ನಂತರ ಹಣವನ್ನು ಕಳೆದುಕೊಂಡ ಬಗ್ಗೆ ಯಾವುದೇ ದೂರು ಅಥವಾ ಮಾಹಿತಿ ಇನ್ನೂ ಬಂದಿಲ್ಲ ಎಂದು ಪೊಲೀಸರು ತಿಳಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಕಳುಹಿಸಿದ ಎಪಿಕೆ ಫೈಲ್ ಸಂದೇಶವನ್ನು ಸ್ವೀಕರಿಸಿದ್ದೇನೆ. ಕುತೂಹಲದಿಂದ ಅದನ್ನು ಕ್ಲಿಕ್ ಮಾಡಿದ್ದೇನೆ. ಆ ಲಿಂಕ್ ಖಾಲಿಯಾಗಿತ್ತು. ನಂತರ, ಅವರ ಫೋನ್ ಮತ್ತು ವಾಟ್ಸ್ಆ್ಯಪ್ ಹ್ಯಾಕ್ ಆಗಿರುವುದು ನನಗೆ ತಿಳಿಯಿತು ಎಂದು ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಬಳಿಕ ಆ ಅಧಿಕಾರಿ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಿ ಪಾಸ್‌ವರ್ಡ್ ಬದಲಾಯಿಸಿದ್ದರು.
ಬೆಳಗಾವಿಯಲ್ಲಿ ವಿಶೇಷ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸ್ ಇನ್ಸ್‌ಪೆಕ್ಟರ್ ವಾಟ್ಸ್ಆ್ಯಪ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಅವರ ಎಲ್ಲಾ ಕಾಂಟ್ಯಾಕ್ಟ್ಗಳು ಮತ್ತು ಗುಂಪುಗಳಿಗೆ ಅವರ ಮೊಬೈಲ್ ಸಂಖ್ಯೆಯನ್ನು ಬಳಸಿ ಸಂದೇಶವನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ.
‘‘ನಾನು ಬೆಳಗಾವಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಿದ್ದೇನೆ. ನನ್ನ ಅಧಿಕೃತ ಸಂಖ್ಯೆಯಿಂದ ಸ್ವೀಕರಿಸಿದ ಎಪಿಕೆ ಫೈಲ್‌ಗಳ ಬಗ್ಗೆ ಸ್ನೇಹಿತರು ನನಗೆ ಎಚ್ಚರಿಕೆ ನೀಡಿದ ನಂತರ ಹ್ಯಾಕಿಂಗ್ ಬಗ್ಗೆ ನನ್ನ ಕಾಂಟ್ಯಾಕ್ಟ್ಗಳಿಗೆ ಎಚ್ಚರಿಕೆ ನೀಡುವ ಸಂದೇಶವನ್ನು ಪೋಸ್ಟ್ ಮಾಡಿದ್ದೇನೆ’’ ಎಂದು ಅವರು ತಿಳಿಸಿದ್ದಾರೆ.
ಒಮ್ಮೆ ಮೊಬೈಲ್ ಬಳಕೆದಾರರು ಎಪಿಕೆ ಲಿಂಕ್ ಕ್ಲಿಕ್ ಮಾಡಿ ಫೈಲ್ ಡೌನ್‌ಲೋಡ್ ಮಾಡಿದ ನಂತರ, ಆ ಲಿಂಕ್ ಕಳುಹಿಸಿದವರಿಗೆ (ವಂಚಕರಿಗೆ) ವೈಯಕ್ತಿಕ ಡೇಟಾ ಮತ್ತು ಬ್ಯಾಂಕಿಂಗ್ ಮಾಹಿತಿ ಒಳಗೊಂಡಂತೆ ದತ್ತಾಂಶಗಳು ಸಿಗುತ್ತವೆ. ವಂಚಕರು ಮೊಬೈಲ್ ಮೇಲೆ ನಿಯಂತ್ರಣ ಸಾಧಿಸುತ್ತಾರೆ ಮತ್ತು ಬ್ಯಾಂಕ್ ಖಾತೆಗಳಿಂದ ಹಣವನ್ನು ಎಗರಿಸಬಹುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ