ವಕ್ಫ್​ ಇಲಾಖೆ ವಾಹನಗಳಿಗೆ ಪೆಟ್ರೋಲ್​ ತುಂಬಿಸುವುದರಲ್ಲಿ ಭ್ರಷ್ಟಾಚಾರ: ಸರ್ಕಾರಕ್ಕೆ ಯತ್ನಾಳ್​ ಪತ್ರ

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕರ್ನಾಟಕದ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಇಲಾಖೆಯಲ್ಲಿ ವ್ಯಾಪಕ ಪೆಟ್ರೋಲ್ ದುರ್ಬಳಕೆ ನಡೆದಿರುವ ಬಗ್ಗೆ ಆರೋಪ ಮಾಡಿದ್ದಾರೆ. ಸರ್ಕಾರಿ ವಾಹನಗಳಿಗೆ ಪೆಟ್ರೋಲ್ ತುಂಬುವಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಇಂಧನ ಬಳಕೆಯ ಮೇಲೆ ನಿಗಾ ವಹಿಸುವಂತೆ ಮನವಿ ಮಾಡಿದ್ದಾರೆ. ಸರ್ಕಾರದ ಎಲ್ಲಾ ಇಲಾಖೆಗಳಿಗೂ ಇಂಧನ ಬಳಕೆ ನೀತಿಯನ್ನು ಜಾರಿಗೊಳಿಸಬೇಕೆಂದು ಯತ್ನಾಳ್ ಒತ್ತಾಯಿಸಿದ್ದಾರೆ.

ವಕ್ಫ್​ ಇಲಾಖೆ ವಾಹನಗಳಿಗೆ ಪೆಟ್ರೋಲ್​ ತುಂಬಿಸುವುದರಲ್ಲಿ ಭ್ರಷ್ಟಾಚಾರ: ಸರ್ಕಾರಕ್ಕೆ ಯತ್ನಾಳ್​ ಪತ್ರ
ಪತ್ರ, ಜಮೀರ್​ ಅಹ್ಮದ್, ಬಸನಗೌಡ ಪಾಟೀಲ್​ ಯತ್ನಾಳ್​
Follow us
ಕಿರಣ್​ ಹನಿಯಡ್ಕ
| Updated By: ವಿವೇಕ ಬಿರಾದಾರ

Updated on: Dec 27, 2024 | 1:33 PM

ವಿಜಯಪುರ, ಡಿಸೆಂಬರ್​ 27: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್​​​ ಇಲಾಖೆಯಲ್ಲಿ (Waqf Board) ಮನಬಂದಂತೆ ಪೆಟ್ರೋಲ್ ಇಂಡೆಂಟ್​ಗಳನ್ನು ಬಳಸಿಕೊಂಡು ಸರ್ಕಾರಿ ವಾಹನ ಚಾಲಕರು ಹಾಗೂ ಪೆಟ್ರೋಲ್ ಸರ್ವಿಸ್ ಸ್ಟೇಷನ್​ಗಳು ದೊಡ್ಡ ಭ್ರಷ್ಟಾಚಾರವನ್ನು ಎಸಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ (Basangouda Patil Yatnal) ಆರೋಪ ಮಾಡಿದ್ದಾರೆ. ಈ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು ಸರ್ಕಾರದ ಎಲ್ಲ ಇಲಾಖೆಗಳಿಗೂ ಇಂಧನ ಮಿತಿ ಮಾರ್ಗಸೂಚಿ ಹೊರಡಿಸುವಂತೆ ಮನವಿ ಮಾಡಿದ್ದಾರೆ.

ಯತ್ನಾಳ್​ ಬರೆದ ಪತ್ರದಲ್ಲಿ ಏನಿದೆ?

ರಾಜ್ಯದ ತೆರಿಗೆ ಹಣವನ್ನು ಅತ್ಯಂತ ಜವಾಬ್ದಾರಿಯುತವಾಗಿ, ರಾಜ್ಯದ ಕಲ್ಯಾಣಕ್ಕೆ, ಅಭಿವೃದ್ಧಿ ಕಾರ್ಯಗಳಿಗೆ, ಉದ್ಯೋಗ ಸೃಜನೆ, ಮೂಲಸೌಕರ್ಯ ಅಭಿವೃದ್ಧಿ, ಬಡವರ, ರೈತರ ಶ್ರೇಯೋಭಿವೃದ್ಧಿಗೆ, ಮಹಿಳಾ ಸಬಲೀಕರಣ ಉಪಯೋಗಿಸಬೇಕು. ಆದರೆ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್​​ ಇಲಾಖೆಯಲ್ಲಿ ಮನಬಂದಂತೆ ಪೆಟ್ರೋಲ್ ಇಂಡೆಂಟ್​ಗಳನ್ನು ಬಳಸಿಕೊಂಡು ಸರ್ಕಾರಿ ವಾಹನ ಚಾಲಕರು ಹಾಗೂ ಪೆಟ್ರೋಲ್ ಸರ್ವಿಸ್ ಸ್ಟೇಷನ್​ಗಳು ದೊಡ್ಡ ಭ್ರಷ್ಟಾಚಾರವನ್ನು ಎಸಗಿದ್ದಾರೆ.

ಕಾರಿಗೆ ಪೆಟ್ರೋಲ್ ಹಾಕಿಸುವಾಗ ಸಂಬಂಧಪಟ್ಟ ಇಲಾಖೆಯ ಮೊಹರು ಇರಬೇಕು ಹಾಗೂ ಇಲಾಖೆಯ ಮುಖ್ಯಸ್ಥರ ಸಹಿ ಇರಬೇಕು. ಆದರೆ, ಅಲ್ಪಸಂಖ್ಯಾತ, ಹಜ್ ಮತ್ತು ವಕ್ಫ್​ ಇಲಾಖೆಯ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಅವರ ವಾಹನ ಸಂ KA 01 GB 9990 ಗೆ ಇಂಡೆಂಟ್ ಗಳು ಇಲ್ಲದಿದ್ದರೂ ವೆಟ್ರೋಲ್ ತುಂಬಿಸಲಾಗಿರುವುದನ್ನು ಮಾಧ್ಯಮಗಳು ದಾಖಲೆ ಸಮೇತ ಬಯಲು ಮಾಡಿವೆ. ಕೇವಲ ಐದು ತಿಂಗಳಲ್ಲಿ ಈ ವಾಹನಕ್ಕೆ 390 ಲೀಟರ್ ವೆಟ್ರೋಲ್ ತುಂಬಿಸಲಾಗಿದೆ. ಚಾಲಕ ಮಹೇಶ್ ಎನ್ ಎಂಬುವವರು 2023 ಡಿಸೆಂಬರ್, 2024 ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಮೇ ತಿಂಗಳ ಇಂಧನನಿಂದ ಬಿಲ್​ಗಳಲ್ಲಿ ವ್ಯತ್ಯಯ ಆಗಿರುವುದು ಗೊತ್ತಾಗಿದೆ. ಈ ಸಂಬಂಧ ಮಾಧ್ಯಮವೊಂದು ಬಿಡುಗಡೆ ಮಾಡಿರುವ ದಾಖಲೆಯನ್ನು ಈ ಪತ್ರದ ಮೂಲಕ ಲಗತ್ತಿರಿಸುತ್ತೇನೆ.

ಇದನ್ನೂ ಓದಿ: ಕಾರ್ಖಾನೆ ಜಟಾಪಟಿ: ಸುಪ್ರೀಂಕೋರ್ಟ್‌ನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್​ಗೆ ಗೆಲುವು

ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರಿಗೆ ಒದಗಿಸಿರುವ ವಾಹನಗಳಿಗೆ ದಿನಂಪ್ರತಿ ಇಷ್ಟೇ ಪ್ರಮಾಣದಲ್ಲಿ ಪೆಟ್ರೋಲ್ ಹಾಕಿಸಬೇಕೆಂದು ಯಾವುದೇ ನಿಯಮ ಅಥವಾ ಮಿತಿ ಇರುವುದಿಲ್ಲ. ತಾವು ಕೂಡಲೇ ಪ್ರಧಾನ ಕಾರ್ಯದರ್ಶಿಗಳೂ ಸೇರಿ ಸರ್ಕಾರದ ವಾಹನ ಬಳಸುವ ಎಲ್ಲರಿಗೂ ಇಂಧನವನ್ನು ಬಳಸಲು ಒಂದು ಮಾರ್ಗಸೂಚಿಯನ್ನು ಸರ್ಕಾರದ ವತಿಯಿಂದ ಹೊರಡಿಸಬೇಕು ಹಾಗೂ ಮೂರು ತಿಂಗಳಿಗೊಮ್ಮೆ ವಾಹನ ಕ್ರಮಿಸಿರುವ ಕಿಲೋಮೀಟರ್ ಮತ್ತು ಉಪಯೋಗಿಸಿರುವ ಇಂಧನವನ್ನು ಅಡಿಟ್ ಮಾಡಬೇಕೆಂದು ಮನವಿ, ತನ್ಮೂಲಕ ದುರುಪಯೋಗ ಮಾಡಿಕೊಳ್ಳುವುದನ್ನು ತಪ್ಪಿಸಬಹುದು.

ದಯವಿಟ್ಟು ತಾವು ಸರ್ಕಾರದ ಎಲ್ಲ ಇಲಾಖೆಗಳಿಗೂ ನೀಡಿರುವ ವಾಹನಗಳಿಗೆ ‘ಇಂಧನ ನೀತಿ ಮಾರ್ಗಸೂಚಿಯನ್ನು’ (Ruel Usage Policy) ಪರಿಚಯಿಸಿ ಸರ್ಕಾರದ ಹಣವನ್ನು ಕೆಲ ಪಟ್ಟಭದ್ರರು. ಭ್ರಷ್ಟ ನೌಕರರು. ಚಾಲಕರು ದುರುಪಯೋಗ ಮಾಡಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರುತ್ತೇನೆ” ಎಂದು ಪತ್ರದಲ್ಲಿ ಬರೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ