
ಬೆಂಗಳೂರು, (ಡಿಸೆಂಬರ್ 17): ಬೆಂಗಳೂರಿನ (Bengaluru) ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಅವರಿಗೆ ಪ್ರೀತ್ಸೆ ಪ್ರೀತ್ಸೆ ಎಂದು ಕಾಟ ಕೊಡುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ವನಜಾ ಅಲಿಯಾಸ್ ಸಂಜನಾ ಬಂಧಿತ ಮಹಿಳೆ. ಈಕೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಅವರಿಗೆ ಲವ್ ಮಾಡುವಂತೆ ದುಂಬಾಲು ಬಿದ್ದಿದ್ದಳು. ಪ್ರೀತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಹೀಗಾಗಿ ಈ ಅತಿರೇಕದ ಪ್ರೇಮ ಕಾಟ ಇನ್ಸ್ಪೆಕ್ಟರ್ಗೆ ದಿನೇ ದಿನೇ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೆ ಸತೀಶ್ ಅವರು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದು, ಇದೀಗ ಭಗ್ನ ಪ್ರೇಮಿ ವನಜಾ ಅಲಿಯಾಸ್ ಸಂಜನಾಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯ ಕಾಟ ಎಷ್ಟರ ಮಟ್ಟಿಗೆ ಹೋಗಿತ್ತು ಎಂದರೆ, ಇನ್ಸ್ಪೆಕ್ಟರ್ ಠಾಣೆಯಲ್ಲಿ ಇಲ್ಲದ ವೇಳೆ ಕಜ್ಜಾಯದ ಡಬ್ಬಿ, ಹೂಗುಚ್ಛ ತಂದು ಠಾಣೆಯಲ್ಲೇ ಇಟ್ಟಿದ್ದಳು. ಇನ್ನು ಬರೋಬ್ಬರಿ 11 ವಿಭಿನ್ನ ಮೊಬೈಲ್ ಸಂಖ್ಯೆಗಳ ಮೂಲಕ ಇನ್ಸ್ಪೆಕ್ಟರ್ಗೆ ಕರೆ ಮಾಡಿ ಪ್ರೀತಿ ನಿವೇದನೆ ಮಾಡುತ್ತಿದ್ದಳು. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇನ್ಸ್ಪೆಪೆಕ್ಟರ್ ಮನ ಗೆಲ್ಲಲು ರಕ್ತದಲ್ಲೇ ಪ್ರೇಮ ಪತ್ರ ಬರೆದಿದ್ದಳು. ಅದಕ್ಕೂ ಇನ್ಸ್ಪೆಕ್ಟರ್ ಮನಸ್ಸು ಕರಗದಿದ್ದಕ್ಕೆ ಆತ್ಮಹತ್ಯೆ ಅಸ್ತ್ರ ಬಳಸಿದ್ದಾಳೆ. ನನ್ನ ಲವ್ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಲವ್ ಲೆಟರ್ ಜೊತೆಗೆ ‘Nexito Plus’ ಎಂಬ ಮಾತ್ರೆಯನ್ನು ಕೂಡ ಪೊಲೀಸ್ ಠಾಣೆಗೆ ಕಳುಹಿಸಿದ್ದಳು.
ವನಜಾ ಅಲಿಯಾಸ್ ಸಂಜನಾಳ ಅತಿರೇಕದ ಪ್ರೇಮದ ಕಾಟಕ್ಕೆ ಇನ್ಸ್ಪೆಕ್ಟರ್ ಸುಸ್ತಾಗಿದ್ದರು. ಅಲ್ಲದೇ ಇದರಿಂದ ಮುಜುಗರಕ್ಕೊಳಗಾಗಿದ್ದರು. ದಿನೇ ದಿನೇ ಈಕೆಯ ಕಾಟ ತಾಳಲಾರದೇ ಇನ್ಸ್ಪೆಕ್ಟರ್ ಸತೀಶ್ ಅವರು ಕಾನೂನು ಕ್ರಮದ ಮೂಲಕ ಬುದ್ಧಿ ಕಲಿಸಬೇಕೆಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಆತ್ಮಹತ್ಯೆ ಬೆದರಿಕೆ ಆರೋಪದಡಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ವನಜಾ ಅಲಿಯಾಸ್ ಸಂಜನಾ ಬಿಲ್ಡಪ್ ಕೊಟ್ಟು ರಾಮಮೂರ್ತಿ ನಗರದ ಇನ್ಸ್ಪೆಕ್ಟರ್ ಸತೀಶ್ ಅವರನ್ನು ಪರಿಚಯ ಮಾಡಿಕೊಂಡಿದ್ದಳು. ತಾನು ಕಾಂಗ್ರೆಸ್ ಕಾರ್ಯಕರ್ತೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ತನಗೆ ಪರಿಚಯ ಎಂದು ಹೇಳಿಕೊಂಡಿದ್ದಳು. ಅಲ್ಲದೇ ಮೋಟಮ್ಮ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಇರುವ ಫೋಟೋಗಳನ್ನು ಕಳುಹಿಸಿ ಪರಿಚಯಿಸಿಕೊಂಡಿದ್ದಳು. ಬಳಿಕ ಪ್ರೀತಿಸಲೇಬೇಕು ಎಂದು ಇನ್ಸ್ಪೆಕ್ಟರ್ ಮೇಲೆ ಒತ್ತಡ ಹೇರಿಲಾರಂಭಿಸಿದ್ದಳು.