ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್ ಕಂಡಕ್ಟರ್ ಕರ್ತವ್ಯದ ವೇಳೆ ಟೋಪಿ ಧರಿಸಿದ್ದಕ್ಕೆ ಬೆಂಗಳೂರಿನ ಮಹಿಳೆಯೊಬ್ಬರು ಆಕ್ಷೇಪ ವ್ಯಕ್ತಪಡಿಸಿ ಅದನ್ನು ತೆಗೆಯುವಂತೆ ಮಾಡಿದ್ದಾರೆ. ಘಟನೆಯ ವಿಡಿಯೋ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಬಿಎಂಟಿಸಿ ಅಧಿಕಾರಿಗಳ ಪ್ರಕಾರ, ಘಟನೆಯು 10-12 ದಿನಗಳ ಹಿಂದೆ ನಡೆದಿದೆ. ಆದರೆ, ಅದಕ್ಕೆ ಸಂಬಂಧಿಸಿದ ವೀಡಿಯೊ ಮಂಗಳವಾರ ಬಹಿರಂಗವಾಗಿದೆ. ಮೊಹಮ್ಮದ್ ಹನೀಫ್ ಎಂಬವರು ಮಹಿಳೆ ಮತ್ತು ಕಂಡಕ್ಟರ್ ನಡುವಣ ಸಂವಾದದ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಮತ್ತು ಬಿಎಂಟಿಸಿ ಬಸ್ ಕಂಡಕ್ಟರ್ ನಡುವಿನ ಕನ್ನಡ ಸಂಭಾಷಣೆಯ ಪ್ರತಿ ಹೀಗಿದೆ.
ಮಹಿಳೆ: ಸರ್, ನಿಮ್ಮ ನಿಯಮಗಳ ಪ್ರಕಾರ ಈ ಕ್ಯಾಪ್ ಧರಿಸಲು ನಿಮಗೆ ಅನುಮತಿ ಇದೆಯೇ?
ಕಂಡಕ್ಟರ್: ನಾವು ಅದನ್ನು ಧರಿಸಬಹುದು ಅಥವಾ ಧರಿಸದೇ ಇರಬಹುದು.
ಮಹಿಳೆ: ನೀವು ನಿಮ್ಮ ಮನೆಯಲ್ಲಿ ನಿಮ್ಮ ಧರ್ಮವನ್ನು ಆಚರಿಸಿ. ಇದು ಸಮವಸ್ತ್ರದ ಭಾಗವಾಗಿಲ್ಲದಿದ್ದರೆ, ನೀವು ಅದನ್ನು ಧರಿಸಲು ಸಾಧ್ಯವಿಲ್ಲ. ಇದನ್ನು ಅನುಮತಿಸಲಾಗಿದೆಯೇ ಅಥವಾ ಇಲ್ಲವೇ? ”
ಕಂಡಕ್ಟರ್: ನಾನು ಅದನ್ನು ಹಲವು ವರ್ಷಗಳಿಂದ ಧರಿಸುತ್ತಿದ್ದೇನೆ.
ಹೆಂಗಸು: ನೀವು ಬಹಳ ವರ್ಷಗಳಿಂದ ಅದನ್ನು ಧರಿಸುತ್ತಿದ್ದೀರಿ ಎಂಬುದು ಬೇರೆ ವಿಷಯ. ನೀವು ಮನೆಯಲ್ಲಿ ನಿಮ್ಮ ಧರ್ಮವನ್ನು ಆಚರಿಸಿ, ಅದನ್ನು ಯಾರೂ ವಿರೋಧಿಸುವುದಿಲ್ಲ. ನೀವು ಸರ್ಕಾರಿ ಉದ್ಯೋಗಿ, ನೀವು ಅದನ್ನು ಧರಿಸಬಹುದೇ?
ಕಂಡಕ್ಟರ್: ನಾನು ಈ ವಿಷಯವನ್ನು ವ್ಯವಸ್ಥಾಪಕ ನಿರ್ದೇಶಕರ ಬಳಿ ಪ್ರಸ್ತಾಪಿಸುತ್ತೇನೆ. ಕೊಂಡೊಯ್ಯುತ್ತೇನೆ.
ಮಹಿಳೆ: ನಾನು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಬೇಕೇ? ಅದಕ್ಕಾಗಿಯೇ ನಾನು ಈ ವೀಡಿಯೊ ಮಾಡುತ್ತಿದ್ದೇನೆ. ನಿಮ್ಮ ನಿಯಮಗಳ ಅಡಿಯಲ್ಲಿ ಇದಕ್ಕೆ ಅವಕಾಶವಿದೆಯೇ? ನಿಮಗೆ ಗೊತ್ತಿಲ್ಲದಿದ್ದರೆ ಅದನ್ನು ತೆಗೆದುಹಾಕಿ. ಅದನ್ನು ನಿಮ್ಮ ಮನೆಯಲ್ಲಿ ಅಥವಾ ಮಸೀದಿಯಲ್ಲಿ ಧರಿಸಿ, ನಾವು ವಿರೋಧಿಸುವುದಿಲ್ಲ.
ಕಂಡಕ್ಟರ್: ನಾನು ಅದನ್ನು ಹಲವು ವರ್ಷಗಳಿಂದ ಧರಿಸುತ್ತಿದ್ದೇನೆ.
ಮಹಿಳೆ: ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತವೆ. ತೆಗೆಯಿರಿ ಸರ್.
ನಂತರ ಕಂಡಕ್ಟರ್ ಆಕೆಯ ಒತ್ತಾಯದ ಮೇರೆಗೆ ಟೊಪಿ ತೆಗೆದಿರುವುದು ವಿಡಿಯೊದಲ್ಲಿದೆ.
ವಾಟ್ಸಾಪಲ್ಲಿ ನೋಡ್ದೆ. ಆ ಮಹಿಳೆಯ ಹೃದಯದಲ್ಲಿ ತುಂಬಿದ ಕೋಮು ವಿಷದ ತೀವ್ರತೆಯನ್ನು ಅಳೆಯುವ ಯಂತ್ರವೊಂದಿದ್ರೆ ಅದರ ಮುಳ್ಳುಗಳೇ ಒಡೆದುಹೋಗುತ್ತಿದ್ವೆನೋ?. ಕುಂಕುಮ, ಮಾಲೆಗಳನ್ನು ಧರಿಸುವಂತೆ ಟೋಪಿಗೂ ಅವಕಾಶವಿದೆಎಂದಾಗಿದೆ ನನ್ನ ಭಾವನೆ. ಏನಿದ್ದರೂ ವಿಷ ಕಾರುತ್ತಿರುವ ಮಹಿಳೆಯ ಮುಂದೆಯೂ ಸೌಮ್ಯವಾಗಿ ನಡೆದುಕೊಂಡ ನಿರ್ವಾಹಕರಿಗೆ ನನ್ನದೊಂದು ಸಲಾಂ pic.twitter.com/RFaIXGuq3M
— Mohamed Haneef (@Mohamed47623244) July 11, 2023
ಟ್ವಿಟರ್‌ನಲ್ಲಿ ಅನೇಕ ಜನರು ಮಹಿಳೆ ಮತ್ತು ಅವರ ನಡೆಯನ್ನು ಖಂಡಿಸಿಸಿದ್ದರೆ, ಇನ್ನು ಕೆಲವರು ಅವರನ್ನು ಬೆಂಬಲಿಸಿದ್ದಾರೆ. ಇನ್ನು ಕೆಲವರು ಮಹಿಳೆ ನೈತಿಕ ಪೊಲೀಸ್‌ಗಿರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಏತನ್ಮಧ್ಯೆ, ಬೆಂಗಳೂರು ಪೊಲೀಸರು ಘಟನೆಯನ್ನು ಗಮನಿಸಿದ್ದು, ‘ದಯವಿಟ್ಟು ಎಲ್ಲಿ ಘಟನೆ ನಡೆದಿದೆ ಎಂಬ ಮಾಹಿತಿ ನೀಡಿ’ ಎಂದು ಟ್ವೀಟ್ ಮಾಡಿದ್ದಾರೆ.
Kindly Dm Where the incident happened.
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) July 12, 2023
ಈ ವಿಚಾರವಾಗಿ ಬಿಎಂಟಿಸಿ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ