ಆನೇಕಲ್: ತನ್ನ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರ್ಟಿಐ ಕಾರ್ಯಕರ್ತೆಯೊಬ್ಬರು (Woman RTI worker) ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಪಂಚಾಯಿತಿ ಅಧಿಕಾರಿಗಳು ಪ್ರತ್ಯಾರೋಪ ಮಾಡಿದ್ದಾರೆ. ಹಾಗಾಗಿ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿಯಲ್ಲಿ ( Mayasandra Gram Panchayat ) ಈ ಘಟನೆ ನಡೆದಿದೆ. ಮಾಹಿತಿ ಹಕ್ಕು ಕಾಯಿದೆಯಡಿ ನಾಗರಾಜ್ ಹಾಗೂ ನಂದಿನಿ ಎಂಬುವವರು ಅರ್ಜಿ ಹಾಕಿದ್ದರು.
ಮಾಜಿ ಅಧ್ಯಕ್ಷ ನಾಗರಾಜ್ ಹಾಗೂ ಸದಸ್ಯ ಸುಬ್ರಮಣಿ ಎಂಬುವವರ ಬಗ್ಗೆ ಮಾಹಿತಿ ನೀಡುವಂತೆ ಅರ್ಜಿ ಹಾಕಿದ್ದರು. ಚುನಾವಣೆ ಸಂದರ್ಭದಲ್ಲಿ ನೀಡಿರುವ ಅಫಿಡವಿಟ್ ದಾಖಲೆಗಳನ್ನ ನೀಡುವಂತೆ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಲಾಗಿತ್ತು. ಆರ್ಟಿಐ ಕಾರ್ಯಕರ್ತರು ತಮ್ಮ ಅರ್ಜಿಯಲ್ಲಿ ಮಾಜಿ ಅಧ್ಯಕ್ಷ ನಾಗರಾಜ್ ಅವಧಿಯಲ್ಲಿ ಕಾಮಗಾರಿಗಳ ಬಗ್ಗೆಯೂ ಮಾಹಿತಿ ಕೇಳಿದ್ದರು.
ಆದರೆ ಸರಿಯಾದ ದಾಖಲೆ ಮಾಹಿತಿ ನೀಡಿಲ್ಲ ಎಂದು ನಂದಿನಿ ಗ್ರಾಮ ಪಂಚಾಯಿತಿಗೆ ಬಂದಿದ್ದರು. ಈ ವೇಳೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹಲ್ಲೆ ನಡೆಸಿದ್ದಾರೆಂದು ನಂದಿನಿ ಆರೋಪ ಮಾಡಿದ್ದಾರೆ. ಪಂಚಾಯಿತಿಯಲ್ಲಿದ್ದ ಸದಸ್ಯರು ಹಾಗೂ ಕೆಲ ರೌಡಿಗಳಿಂದ ಹಲ್ಲೆ ನಡೆಸಿದ್ದಾರೆಂದು ಆರೋಪ ಮಾಡಲಾಗಿದೆ. ವಾಸು, ಯಲ್ಲಪ್ಪ ಇತರೆ ಪಂಚಾಯಿತಿ ಸದಸ್ಯರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಮೊಬೈಲ್ ಕಿತ್ತೆಸೆದು, ಹೊಡೆದು ಹಾಕಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕೊಲೆ ಮಾಡುವುದಾಗಿ ಕೆಲ ರೌಡಿಗಳು ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಲಾಗಿದೆ.
ಪಂಚಾಯಿತಿ ಪಿಡಿಓ ವಿಜೇತ ಹಾಗೂ ಸೆಕ್ರಟರಿ ಎದುರಿಗೆ ಗಲಾಟೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರ್ಟಿಐ ಕಾರ್ಯಕರ್ತೆ ನಂದಿನಿ ಆರೋಪಕ್ಕೆ ಪಂಚಾಯಿತಿ ಅಧಿಕಾರಿಗಳೂ ಸಹ ಪ್ರತ್ಯಾರೋಪ ಮಾಡಿದ್ದಾರೆ. ಸರಿಯಾದ ಮಾಹಿತಿ ನೀಡಿಲ್ಲ ಎಂದು ಆರ್ಟಿಐ ಕಾರ್ಯಕರ್ತೆ ನಂದಿನಿ ಕೂಗಾಡಿ ಪಂಚಾಯಿತಿಯಲ್ಲಿ ಗಲಾಟೆ ಮಾಡಿದ್ರು. ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ಎಫ್ಐಆರ್ ದಾಖಲಿಸೋದಾಗಿ ಹೆದರಿಸಿದ್ದಾರೆ.
ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಅತ್ತಿಬೆಲೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಪಂಚಾಯಿತಿಯಲ್ಲಿ ಯಾವುದೇ ಗಲಾಟೆಯೂ ಆಗಿಲ್ಲ, ಯಾರ ಮೇಲೆಯೂ ಹಲ್ಲೆ ನಡೆಸಿಲ್ಲ. ಅವರು ನೀಡಿರುವ ದೂರು ಸುಳ್ಳು ಎಂದು ಪಿಡಿಓ ವಿಜೇತ ದೂರಿನಲ್ಲಿ ಹೇಳಿದ್ದಾರೆ. ಅತ್ತಿಬೆಲೆ ಪೋಲೀಸ್ ಠಾಣೆಯಲ್ಲಿ ಎರಡು ಕಡೆಯವರಿಂದ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ