
ಬೆಂಗಳೂರು, ಡಿಸೆಂಬರ್ 24: ದೇಶದಲ್ಲಿ ಇದೇ ಮೊದಲ ಬಾರಿಗೆ ಚೈನಾದ ಹ್ಯಾಂಗ್ಜೋ ಮಾದರಿಯಲ್ಲಿ ಬೆಂಗಳೂರಿನ ಯಲಹಂಕದಲ್ಲಿ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ ಇಲಾಖೆ ಸಿದ್ದತೆ ನಡೆಸಿದೆ. ಒಟ್ಟು 20 ಎಕರೆ ವಿಸ್ತೀರ್ಣದ ಜಾಗದಲ್ಲಿ, 6 ಸಾವಿರ ಕೋಟಿ ರೂಪಾಯಿ ವೆಚ್ಚದೊಂದಿಗೆ ಮಲ್ಟಿ ಲೆವಲ್ ರೈಲ್ವೆ ಸ್ಟೇಷನ್ ನಿರ್ಮಾಣ ಮಾಡಲು ಪ್ಲ್ಯಾನ್ ನಡೆಯುತ್ತಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೀತಿಯಲ್ಲಿ ಇದು ಇರಲಿದೆ ಎನ್ನಲಾಗಿದೆ.
ಮೊದಲಿಗೆ ದೇವನಹಳ್ಳಿಯಲ್ಲಿ ಈ ಟರ್ಮಿನಲ್ ಸ್ಟೇಷನ್ ನಿರ್ಮಾಣ ಮಾಡಲು ಇಲಾಖೆ ಚಿಂತನೆ ನಡೆಸಿತ್ತು. ಆದರೆ ಅಲ್ಲಿ ಜಾಗದ ಸಮಸ್ಯೆ ಹಿನ್ನೆಲೆ ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಬಳಿ ಟರ್ಮಿನಲ್ ಸ್ಟೇಷನ್ ಮಾಡಲು ಸೌತ್ ವೆಸ್ಟರ್ನ್ ರೈಲ್ವೆ ಒಲವು ತೋರಿಸಿದೆ ಎನ್ನಲಾಗಿದ್ದು, ಈ ಬಗ್ಗೆ ಯಲಹಂಕ ನಿವಾಸಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ರೈಲ್ವೆ ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ಟಿಕೆಟ್ ಅನ್ನು ಮೊಬೈಲ್ನಲ್ಲಿ ತೋರಿಸಿದ್ರೆ ಸಾಲ್ದು
ಇನ್ನು ಈ ರೈಲ್ವೆ ಟರ್ಮಿನಲ್ನಲ್ಲಿ 16 ಫ್ಲಾಟ್ ಫಾರಂ ಇರಲಿದೆ. ಅಂಡರ್ ಗ್ರೌಂಡ್, ಫಸ್ಟ್ ಫ್ಲೋರ್ ಸೇರಿದಂತೆ ಒಟ್ಟು ಐದು ಫ್ಲೋರ್ಗಳಲ್ಲಿ ರೈಲುಗಳು ಸಂಚಾರ ಮಾಡಲಿವೆಯಂತೆ. ಆ ಮೂಲಕ ಇದು ದೇಶದ ಮೊದಲ ಸಂಪೂರ್ಣ ಎತ್ತರಿಸಿದ ರೈಲ್ವೆ ಸ್ಟೇಷನ್ ಆಗಲಿದೆ. ಜೊತೆಗೆ ಈ ಟರ್ಮಿನಲ್ ಬ್ಲ್ಯೂ ಲೈನ್ನಲ್ಲಿರುವ ಕೋಗಿಲು ಕ್ರಾಸ್ ಮೆಟ್ರೋ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಿದೆ. ಯಲಹಂಕ-ದೊಡ್ಡಬಳ್ಳಾಪುರ ಹೆದ್ದಾರಿ ಕಡೆಯಿಂದ ಟರ್ಮಿನಲ್ನ ಮುಖ್ಯದ್ವಾರ ಇರಲಿದೆ ಎನ್ನಲಾಗಿದೆ. ಈ ಬಗ್ಗೆ ರೈಲ್ವೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು, ಈ ರೈಲ್ವೆ ಟರ್ಮಿನಲ್ ನಿರ್ಮಾಣವಾದರೆ ಅಂತಾರಾಷ್ಟ್ರೀಯ ಏರ್ಪೋರ್ಟ್ಗೆ ಸಂಚಾರವೂ ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.