ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ: ಬೆಂಗಳೂರಿನಲ್ಲಿ ಯುವಕನ ಭೀಕರ ಕೊಲೆ

ವಿವಾಹಿತ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದಲ್ಲಿ ಬೆಂಗಳೂರಿನ ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ಯುವಕನೊಬ್ಬನನ್ನು ಮಹಿಳೆಯ ಸಂಬಂಧಿಕರು ಮನಸೋಇಚ್ಛೆ ಥಳಿಸಿ, ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಸದ್ಯ ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನವಾಗಿಲ್ಲ. ಇದಕ್ಕೆ ಯುವಕನ ಕುಟುಂಬದವರಿಂದ ಆಕ್ಷೇಪ ವ್ಯಕ್ತವಾಗಿದೆ. ಘಟನೆಯ ವಿವರ ಇಲ್ಲಿದೆ.

ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ: ಬೆಂಗಳೂರಿನಲ್ಲಿ ಯುವಕನ ಭೀಕರ ಕೊಲೆ
ಮೃತ ಯುವಕ ನರಸಿಂಹರಾಜು (ಎಡ ಚಿತ್ರ). ಹಲ್ಲೆ ಮಾಡುತ್ತಿರುವ ಸಿಸಿಟಿವಿ ದೃಶ್ಯದ ಸ್ಕ್ರೀನ್​ಶಾಟ್ (ಬಲ ಚಿತ್ರ)

Updated on: Nov 25, 2025 | 10:53 AM

ಬೆಂಗಳೂರು, ನವೆಂಬರ್ 25: ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ಅಕ್ರಮ ಸಂಬಂಧ ಹಿನ್ನೆಲೆ ಯುವಕನೊಬ್ಬನನ್ನು ಮನಸೋ ಇಚ್ಛೆ ಥಳಿಸಿ ಕೊಲೆ ಮಾಡಲಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ವಿವಾಹಿತೆಯೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕ ನರಸಿಂಹರಾಜು (32) ಎಂಬಾತನನ್ನು ಮಹಿಳೆಯ ಸಂಬಂಧಿಕರು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಸದ್ಯ ಯಶವಂತಪುರ (Yeshwanthpur) ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಕಳೆದ ಶನಿವಾರ ಆ ಮಹಿಳೆ ನರಸಿಂಹರಾಜು ಮನೆಗೆ ಬಂದಿದ್ದಳು. ಅದು ಮಹಿಳೆಯ ಸಂಬಂಧಿಕರಿಗೆ ಗೊತ್ತಾಗಿತ್ತು. ತಕ್ಷಣವೇ ನರಸಿಂಹರಾಜು ಮನೆಗೆ ಬಂದ ನಾಲ್ಕೈದು ಮಂದಿ ಆತನನ್ನು ಹೊರಗೆ ಎಳೆದುಕೊಂಡು ಹೋಗಿ ರಸ್ತೆಯುದ್ದಕ್ಕೂ ಹಲ್ಲೆ ನಡೆಸಿದ್ದಾರೆ. ಮನಸೋ ಇಚ್ಛೆ ಥಳಿಸಿದ್ದಾರೆ. ಈ ವೇಳೆ, ಮಧ್ಯ ಪ್ರವೇಶಿಸಿ ತಡೆಯಲು ಬಂದ ನರಸಿಂಹರಾಜು ತಾಯಿಯ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಗೊಳಗಾಗಿ ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಅಸ್ವಸ್ಥನಾದ ನರಸಿಂಹರಾಜುವನ್ನು ತಕ್ಷಣವೇ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಯುವಕ ಮೃತಪಟ್ಟಿದ್ದಾನೆ.

ನರಸಿಂಹರಾಜು ಸಾವಿಗೆ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಕಾರಣ ಎಂದು ಆತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ. ಇದು ನರಸಿಂಹರಾಜು ಕುಟುಂಬಸ್ಥರ ಆಕ್ಷೇಪಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ತಲ್ವಾರ್ ದಾಳಿ ಮಾಡಿ ಓಡ್ತಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದಿದ್ಹೇಗೆ ನೋಡಿ! ಇಲ್ಲಿದೆ ವಿಡಿಯೋ

ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದು, ವರದಿ ಆಧರಿಸಿ ಆರೋಪಿಗಳ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ