ಮದುವೆ ಆಮಿಷವೊಡ್ಡಿ ಯುವತಿಯ ಮತಾಂತರ: ಬೆಂಗಳೂರಿನಲ್ಲಿ ಯುವಕನ ಬಂಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 14, 2022 | 2:59 PM

ಯುವತಿಯ ಪೋಷಕರು ನೀಡಿದ್ದ ದೂರಿನ ಅನ್ವಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮದುವೆ ಆಮಿಷವೊಡ್ಡಿ ಯುವತಿಯ ಮತಾಂತರ: ಬೆಂಗಳೂರಿನಲ್ಲಿ ಯುವಕನ ಬಂಧನ
ಡಿಸಿಪಿ ವಿನಾಯಕ್ ಪಾಟೀಲ್ ಮತ್ತು ಆರೋಪಿ ಸೈಯದ್ ಮೊಯಿನ್
Follow us on

ಬೆಂಗಳೂರು: ಮದುವೆಯ ಆಮಿಷವೊಡ್ಡಿ ಯುವತಿಯನ್ನು ಮತಾಂತರ ಮಾಡಿದ ಆರೋಪದ ಮೇಲೆ ಯುವಕನೊಬ್ಬನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಮೊಯಿನ್ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಬಳಿಕ ಬಂಧಿತನಾದ ಮೊದಲ ಆರೋಪಿಯಾಗಿದ್ದಾರೆ. ಆರೋಪಿಯ ವಿರುದ್ಧ ಮತಾಂತರ ನಿಷೇಧ ಕಾಯ್ದೆಯ ಸೆಕ್ಷನ್ 5ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನು ಮದುವೆಯಾಗಲು ಮತಾಂತರ ಆಗಬೇಕು ಎಂದು ಷರತ್ತು ಒಡ್ಡಿ ಮತಾಂತರ ಮಾಡಿದ್ದ ಎಂದು ದೂರಲಾಗಿದೆ. ಯುವತಿ ಆಕ್ಟೋಬರ್ 5ರಂದು ಮನೆಯಿಂದ ಕಾಣೆಯಾಗಿದ್ದರು.

ಯುವತಿಯ ಪೋಷಕರು ನೀಡಿದ್ದ ದೂರಿನ ಅನ್ವಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿಯು ಬುರ್ಖಾ ಧರಿಸಿ ಪೊಲೀಸ್ ಠಾಣೆಗೆ ಬಂದ ಮೇಲೆ ಯುವತಿಯ ಪೋಷಕರು ಬಲವಂತದ ಮತಾಂತರ ನಡೆದಿದೆ ಎಂದು ಮತ್ತೊಂದು ದೂರು ನೀಡಿದರು. ಈ ದೂರು ಆಧರಿಸಿ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಡಿಸಿಪಿ ಪ್ರತಿಕ್ರಿಯೆ

ಮದುವೆ ಆಮಿಷವೊಡ್ಡಿ ಮತಾಂತರ ಮಾಡಿದ ಆರೋಪದ ಮೇಲೆ ಯುವಕನನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅ 6ರಂದು 19 ವರ್ಷದ ಯುವತಿ ಕಾಣೆಯಾಗಿದ್ದಾರೆ ಎಂದು ಪೋಷಕರು ದೂರು ನೀಡಿದ್ದರು. ಬಳಿಕ ಅ 8ರಂದು ಯುವತಿ-ಯುವಕ ಠಾಣೆಗೆ ಬಂದ ನಂತರ ಯುವತಿಯ ತಾಯಿ ಮತಾಂತರದ ದೂರು ನೀಡಿದರು. ಅದರ ಅನ್ವಯ ಎಫ್ಐಆರ್ ದಾಖಲಿಸಿ ಮತಾಂತರ ನಿಷೇಧ ಕಾಯ್ದೆಯಡಿ ಯುವಕನನ್ನ ಬಂಧಿಸಲಾಗಿದೆ ಎಂದು ಹೇಳಿದರು.

ಯುವತಿಯನ್ನು ಆಂಧ್ರಪ್ರದೇಶದ ಪೆನುಕೊಂಡದಲ್ಲಿ ಮತಾಂತರ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯುವತಿ ಪರಿಚಯ ಹೇಗಾಯಿತು? ಮತಾಂತರ ಹೇಗಾಯಿತು ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ವಿನಾಯಕ ಪಾಟೀಲ್ ಹೇಳಿದರು.

Published On - 1:22 pm, Fri, 14 October 22