ಬೆಂಗಳೂರು: ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡ್ತಿದ್ದ ಯೂ ಟ್ಯೂಬರ್ ಒಬ್ಬನನ್ನು ಬಂಧಿಸಲಾಗಿದೆ. ಪ್ರಖ್ಯಾತ ಯೂಟ್ಯೂಬರ್ ಮೋಲಾ ಅಲಿಯಾಸ್ ಜಸ್ಟಿಸ್ ಒಬೆಜೊ (Youtuber Ebazee Justice) ಮತ್ತು ಆತನ ಸ್ನೇಹಿತ ಸ್ಯಾಮುಯಲ್ ಅಲಿಯಾಸ್ ಸ್ಯಾಮ್ ನನ್ನು ಕೆ.ಜಿ ಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯ ಟೀಚರ್ಸ್ ಅಕಾಡೆಮಿ ಬಳಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸ್ತಿದ್ದರು. ಖಚಿತ ಮಾಹಿತಿ ಆಧರಿಸಿ, ದಾಳಿ ನಡೆಸಿದ ಕಾಡುಗೊಂಡನ ಹಳ್ಳಿ ಪೊಲೀಸರು (KG Halli Police) ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳನ್ನ ಬಂಧಿಸಿ 15 ಗ್ರಾಂ ಎಂಡಿಎಂಎ, ಎರಡು ಮೊಬೈಲ್ ಜಪ್ತಿ ಮಾಡಿದ್ದಾರೆ.
ಸ್ಟೂಡೆಂಟ್ಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಆರೋಪಿಗಳು
ಆರೋಪಿಗಳು ಸ್ಟೂಡೆಂಟ್ಸ್ ವೀಸಾದಡಿ ಭಾರತಕ್ಕೆ ಬಂದಿದ್ದರು. ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಿದ್ರು. ಆರೋಪಿ ಜಸ್ಟೀಸ್ ಒಬೆಜೋ ಈ ಹಿಂದೆ ಜೆ.ಬಿ. ನಗರ ಠಾಣಾ ವ್ಯಾಪ್ತಿಯಲ್ಲೂ ಸಿಕ್ಕಿಬಿದ್ದಿದ್ದ. ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿಬಿದ್ದು (drug peddler), ಜಾಮೀನಿನ ಮೇಲೆ ಹೊರ ಬಂದಿದ್ದ. ಆರೋಪಿಗಳು ಜೈಲಿನಿಂದ ಹೊರ ಬಂದು ಮತ್ತೆ ಅದೇ ಚಾಳಿ ಮುಂದುವರೆಸಿದ್ದರು. ಸದ್ಯ ಕೆ.ಜಿ. ಹಳ್ಳಿ ಪೊಲೀಸರು ಆರೋಪಿಗಳನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸ್ತಿದಾರೆ.
ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಮಹಿಳಾ ಡ್ರಗ್ ಪೆಡ್ಲರ್ಗಳ ಬಂಧನ
ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಮಹಿಳಾ ಡ್ರಗ್ ಪೆಡ್ಲರ್ಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ನಮೂಟೆಬಿ ಶಮೀರಾ, ನಫೀಕಾ ಫ್ಯೂಯೆನಿ ಬಂಧಿತ ಆರೋಪಿಗಳು. 1.5 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟಲ್, 2 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಮೆಡಿಕಲ್ ವೀಸಾ, ಟೂರಿಸ್ಟ್ ವೀಸಾದಲ್ಲಿ ಈ ಮಹಿಳೆಯರು ಬಂದಿದ್ದರು. ಬಾಣಸವಾಡಿ ಬಿಡಿಎ ಪಾರ್ಕ್ ಬಳಿ ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವೇಳೆ ಬಂಧನಕ್ಕೊಳಗಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.