ಪರಪ್ಪನ ಅಗ್ರಹಾರ: ವೃದ್ದ ದಂಪತಿ ಮನೆಯಲ್ಲಿ ಪುಡಿ ರೌಡಿಗಳು-ಜಿಪಂ ಮಾಜಿ ಸದಸ್ಯೆ ಪತಿಯ ಅಟ್ಟಹಾಸ, ಜಮೀನು ಕಬಳಿಕೆ ಯತ್ನ

| Updated By: ಸಾಧು ಶ್ರೀನಾಥ್​

Updated on: Jul 15, 2023 | 1:32 PM

Parappana Agrahara: ಜನಪ್ರತಿನಿಧಿಯಾಗಿ ಮಾದರಿಯಾಗಬೇಕಾದ ವ್ಯಕ್ತಿ ಕೋರ್ಟಿನಲ್ಲಿ ಪ್ರಕರಣ ಇರುವಾಗಲೇ ಹಿರಿಯ ದಂಪತಿಯಿದ್ದ ಮನೆಗೆ ನುಗ್ಗಿ ದಾಂಧಲೆ ಮಾಡಿರುವುದು ಎಷ್ಟು ಸರಿ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.

ಪರಪ್ಪನ ಅಗ್ರಹಾರ: ವೃದ್ದ ದಂಪತಿ ಮನೆಯಲ್ಲಿ ಪುಡಿ ರೌಡಿಗಳು-ಜಿಪಂ ಮಾಜಿ ಸದಸ್ಯೆ ಪತಿಯ ಅಟ್ಟಹಾಸ, ಜಮೀನು ಕಬಳಿಕೆ ಯತ್ನ
ಪರಪ್ಪನ ಅಗ್ರಹಾರ: ವೃದ್ದ ದಂಪತಿ ಮನೆಯಲ್ಲಿ ರೌಡಿಗಳ ಅಟ್ಟಹಾಸ
Follow us on

ಸಿಲಿಕಾನ್ ಸಿಟಿ ಬೆಂಗಳೂರು ಬೆಳೆಯುತ್ತಾ ಹೋದಂತೆಲ್ಲಾ ಒಂದೊಂದು ಅಡಿ ಜಾಗಕ್ಕೂ ಚಿನ್ನದ ಬೆಲೆ ಬಂದಿದೆ. ಹಾಗಾಗಿಯೇ ಚಿನ್ನದ ಬೆಲೆಯಿರುವ ಜಾಗ ಕಬಳಿಸಲು ಅದೆಷ್ಟೋ ಮಂದಿ ಒಂದಿಲ್ಲೊಂದು ಹುನ್ನಾರ ನಡೆಸ್ತಾನೇ ಇರ್ತಾರೆ. ಅದೇ ರೀತಿ ಇಲ್ಲೊಂದೆಡೆ ವೃದ್ಧ ದಂಪತಿಗೆ ಸೇರಬೇಕಿದ್ದ ಜಾಗದ ಮೇಲೆ ಭೂಕಬಳಿಕೆದಾರರ ಕಣ್ಣು ಬಿದ್ದಿದ್ದು ರಾತ್ರೋರಾತ್ರಿ ದಾಂಧಲೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಿರ್ಮಾಣ ಮಾಡಿದ್ದ ಮನೆಯನ್ನ ಧ್ವಂಸ ಮಾಡಿದ ಗ್ಯಾಂಗ್​.. ಈ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ನಗರದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಸಂದ್ರದಲ್ಲಿ.

ಹೌದು ಗ್ರಾಮದ ತಾಯಮ್ಮ ಹಾಗೂ ಸುಬ್ಬಪ್ಪ ಎಂಬ ವೃದ್ಧ ದಂಪತಿಗೆ ಸೇರಿದ ಮನೆಗಳನ್ನ ರಾತ್ರೋರಾತ್ರಿ ಜೆಸಿಬಿ ಮೂಲಕ ಬಂದ 12ಕ್ಕೂ ಹೆಚ್ಚು ಜನರ ತಂಡ ಮನೆಯನ್ನು ಧ್ವಂಸ ಮಾಡಿದೆ. ಅಷ್ಟೇ ಅಲ್ಲದೆ ವೃದ್ಧರು ವಾಸವಿದ್ದ ಮನೆಗೆ ನುಗ್ಗಿದ ಪುಡಿ ರೌಡಿಗಳ ಗ್ಯಾಂಗ್ ವೃದ್ದ ದಂಪತಿಗಳನ್ನ ಕಟ್ಟಿಹಾಕಿ ಮನೆಯ ಕಿಟಕಿ ಗ್ಲಾಸ್, ಟಿವಿಯನ್ನ ಹೊಡೆದು ಹಾಕಿ ಖಾರದ ಪುಡಿ ಎರಚಿ ದಾಂಧಲೆ ನಡೆಸಿದ್ದಾರೆ.

ಇನ್ನೂ ರಾಯಸಂದ್ರ ಗ್ರಾಮದ ಸರ್ವೆ ನಂ.89/5 ರಲ್ಲಿ ಮನೆ ಹಾಗೂ ನಿವೇಶನವಿದ್ದು ಒಂಬತ್ತು ಗುಂಟೆ ಜಾಗದಲ್ಲಿ ಮನೆ ಹಾಗೂ ಬಾಡಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಂಡು ತಾಯಮ್ಮ ಹಾಗೂ ಪತಿ ವಾಸವಿದ್ದರು. ಈ ಜಾಗ ನನಗೆ ಸೇರಬೇಕು ಎಂದು ಮಾಜಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಪತಿ ದೊರೆಸ್ವಾಮಿ ಕಳೆದ ಕೆಲ ದಿನಗಳಿಂದ ವೃದ್ದ ದಂಪತಿ ಹಾಗೂ ಅವರ ಪುತ್ರ ದಿನೇಶ್ ಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಆದ್ರೆ ಇದು ಯಾವುದಕ್ಕೂ ವೃದ್ಧ ದಂಪತಿ ಜಗ್ಗದೆ ಇದ್ದಾಗ ದೊರೆಸ್ವಾಮಿ ಹಾಗೂ 10ಕ್ಕೂ ಹೆಚ್ಚು ಜನರಿದ್ದ ತಂಡ ಮಧ್ಯರಾತ್ರಿ ಜೆಸಿಬಿಗಳ ಮೂಲಕ ಆಗಮಿಸಿ ಸಿಸಿಟಿವಿ ಕ್ಯಾಮರಾಗಳನ್ನ ಧ್ವಂಸಗೊಳಿಸಿ ಮನೆಗಳನ್ನ ನೆಲಸಮಗೊಳಿಸಿದ್ದಾರೆ. ಈ ವೇಳೆ ವೃದ್ದೆ ತಾಯಮ್ಮ ತಾವು ವಾಸವಿದ್ದ ಮನೆಯ ಬಾಗಿಲು ತೆರೆದು ಏನಾಗಿದೆ ಎಂದು ನೋಡಲು ಹೊರಗೆ ಹೋಗುತ್ತಿದ್ದಂತೆ ಕಿರಾತಕರು ಅವರನ್ನ ಮನೆಯಲ್ಲಿ ಕೂಡಿ ಹಾಕಿ, ದಾಂಧಲೆ ನಡೆಸಿ ಹೋಗಿದ್ದಾರೆ. ಬೆಳಿಗ್ಗೆ ಅಲ್ಲಿನ ಸುತ್ತಮುತ್ತಲಿನ ನಿವಾಸಿಗಳು ವೃದ್ದ ದಂಪತಿಯ ಚೀರಾಟ ಕೇಳಿ ಬಂದು ಮನೆಯ ಬಾಗಿಲು ತೆರದಿದ್ದಾರೆ.

ಮನೆ ಧ್ವಂಸ ಮಾಡಿರುವ ಘಟನೆ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪರಪ್ಪನ ಅಗ್ರಹಾರ ಪೊಲೀಸರು ಪ್ರಮುಖ ಆರೋಪಿ ದೊರೆಸ್ವಾಮಿ ಸಹೋದರ ರಘು ಎಂಬಾತನನ್ನು ವಶಕ್ಕೆ ಪಡೆದಿದ್ದು, 13 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಗೆ ನುಗ್ಗಿ ದಾಂಧಲೆ ಮಾಡಿರುವ ಹಿನ್ನೆಲೆ ರಾಬರಿ ಸೇರಿದಂತೆ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಅದೇನೇ ಇರಲಿ ಜನಪ್ರತಿನಿಧಿಯಾಗಿ ಇನ್ನೊಬ್ಬರಿಗೆ ಮಾದರಿಯಾಗಬೇಕಾದ ವ್ಯಕ್ತಿ ಕೋರ್ಟಿನಲ್ಲಿ ಪ್ರಕರಣ ಇರುವಾಗಲೇ ಮನೆಗೆ ನುಗ್ಗಿ ದಾಂಧಲೆ ಮಾಡಿರುವುದು ಎಷ್ಟು ಸರಿ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.