ಆಷಾಢ ಮುಗಿಯುತ್ತಿದ್ದಂತೆಯೇ ಮನೆ ಬದಲಿಸಲಿರುವ ಸಿದ್ದರಾಮಯ್ಯ, ಸಿಎಂ ಅದೃಷ್ಟ ನಿವಾಸಕ್ಕೆ ಡಿಕೆ ಶಿವಕುಮಾರ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಮನೆ ಬದಲಾವಣೆ ಮಾಡಲಿದ್ದು, ಸಿದ್ದರಾಮಯ್ಯನವರ ಅಧೃಷ್ಟದ ಮನೆಗೆ ಡಿಕೆ ಶಿವಕುಮಾರ್ ಶಿಫ್ಟ್ ಆಗಲಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಶೀಘ್ರದಲ್ಲೇ ಕುಮಾರಕೃಪಾ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಿಂದ ಕಾವೇರಿ ನಿವಾಸಕ್ಕೆ (Cauvery residence) ಶಿಫ್ಟ್ ಆಗಲಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಾವೇರಿ ನಿವಾಸವನ್ನು ಖಾಲಿ ಮಾಡಿ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಸ್ವಂತ ಮನೆ ಧವಳಗಿರಿಗೆ ಶಿಫ್ಟ್ ಆಗಿದ್ದಾರೆ. ಸದ್ಯ ಕಾವೇರಿ ನಿವಾಸದಲ್ಲಿ ರಿನೋವೇಷನ್ ಕಾರ್ಯ ಬಹುತೇಕ ಮುಗಿದಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಇಂದು (ಜುಲೈ 15) ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆಷಾಢ ಮಾಸ ಮುಗಿದ ಬಳಿಕ ಸಿದ್ದರಾಮಯ್ಯ ಅವರು ಕಾವೇರಿ ನಿವಾಸ ಪ್ರವೇಶ ಮಾಡಲಿದ್ದಾರೆ.
ಇನ್ನು ಈವರೆಗೆ ಸಿದ್ದರಾಮಯ್ಯ ಅವರಿದ್ದ ಸರ್ಕಾರಿ ಬಂಗಲೆ ಕುಮಾರಕೃಪಾ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಂಚಿಕೆಯಾಗಿದೆ. ಇದು ಸಿದ್ದರಾಮಯ್ಯನವರ ಅದೃಷ್ಟ ಮನೆ ಎಂದೇ ಹೇಳಲಾಗುತ್ತದೆ. ಈ ದೃಷ್ಟದ ಮನೆ ತಮಗೆ ಬೇಕೆಂದು ಡಿಕೆ ಶಿವಕುಮಾರ್ ಬೇಡಿಕೆ ಇಟ್ಟಿದ್ದರು. ಅದರಂತೆ ಸಿದ್ದರಾಮಯ್ಯ ಅವರಿದ್ದ ಅದೃಷ್ಟದ ಮನೆ ಡಿಕೆ ಶಿವಕುಮಾರ್ ಅವರಿಗೆ ಸಿಕ್ಕಿದ್ದು, ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೆ ಶಿಫ್ಟ್ ಆದ ನಂತರ, ಡಿ.ಕೆ. ಶಿವಕುಮಾರ್ ಕುಮಾರಕೃಪಾದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಕಾವೇರಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ. ಅದರ ಪಕ್ಕದಲ್ಲೇ ಸಿಎಂ ಗೃಹ ಕಚೇರಿ ಕೃಷ್ಣಾ ಇದೆ. ಸಹಜವಾಗಿ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕಾರ ಮಾಡಿದರವರು ಈ ನಿವಾಸದಲ್ಲಿ ವಾಸ್ತವ್ಯ ಹೂಡುತ್ತಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕಾವೇರಿ ನಿವಾಸದಲ್ಲೇ ಉಳಿದುಕೊಂಡಿದ್ದರು. ಬಳಿಕ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂ ಹೆಚ್ .ಡಿ ಕುಮಾರಸ್ವಾಮಿ ಖಾಸಗಿ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರೆ ಸಿದ್ದರಾಮಯ್ಯನವರು ಕಾವೇರಿ ನಿವಾಸದಲ್ಲಿ ವಾಸ್ತವ್ಯ ಮುಂದುವರಿಸಿದ್ದರು.
ಸಮ್ಮಿಶ್ರ ಸರ್ಕಾರದ ಪತನವಾದ ಬಳಿಕವೂ ಸಿದ್ದರಾಮಯ್ಯ ಅವರ ಕಾವೇರಿ ತೊರೆಯಲು ಮನಸ್ಸು ಮಾಡಿರಲಿಲ್ಲ. ಅಂದು ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಅವರು ಧವಳಗಿರಿಯಲ್ಲಿ ವಾಸ್ತವ್ಯ ಹೂಡಿ ಅಲ್ಲಿಂದಲೇ ಗೃಹ ಕಚೇರಿ ಕೃಷ್ಣಾಗೆ ಆಗಮಿಸುತ್ತಿದ್ದರು. ಆದರೆ ಇದು ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂಬ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕುಮಾರಕೃಪಾ ನಿವಾಸವನ್ನು ನೀಡಿ ಕಾವೇರಿಗೆ ಯಡಿಯೂರಪ್ಪ ಶಿಫ್ಟ್ ಆಗಿದ್ದರು. ಆದ್ರೆ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ಕಾವೇರಿ ನಿವಾಸದಲ್ಲೇ ತಮ್ಮ ವಾಸ್ತವ್ಯವನ್ನು ಮುಂದುವರಿಸಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆಯೇ ಯಡಿಯೂರಪ್ಪ ತಾವೇ ಕಾವೇರಿ ನಿವಾಸ ತೊರೆದಿದ್ದಾರೆ.