ಸಿಎಂ ಹುದ್ದೆಯನ್ನೇ ನನಗೆ ಮೀಸಲಿಟ್ಟಿರಬಹುದು: ಆರ್ ವಿ ದೇಶಪಾಂಡೆ
ಹಿರಿಯ ಶಾಸಕರಾದರೂ ಸಚಿವ ಸ್ಥಾನ ನೀಡದಿರಲು ಕಾರಣ ಏನು? ಎಂಬ ಪತ್ರಕರ್ತರ ಪ್ರಶ್ನೆಗೆ ಶಾಸಕ ಆರ್.ವಿ ದೇಶಪಾಂಡೆ ಹಾಸ್ಯಭರಿತವಾಗಿ ಅಚ್ಚರಿ ಉತ್ತರ ನೀಡಿದ್ದಾರೆ.
ಕಾರವಾರ ಜು.15: ಮುಖ್ಯಮಂತ್ರಿ (Chief Minister) ಹುದ್ದೆಯನ್ನೇ ನನಗೆ ಮೀಸಲಿಟ್ಟಿರಬಹುದು. ಆ ಕಾರಣಕ್ಕೆ ಸಚಿವ ಸ್ಥಾನ ನೀಡಿಲ್ಲ ಎಂದು ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ (RV Deshapande) ಹಾಸ್ಯಭರಿತವಾಗಿ ಹೇಳಿದರು. ಹಿರಿಯ ಶಾಸಕರಾದರೂ ಸಚಿವ ಸ್ಥಾನ ನೀಡದಿರಲು ಕಾರಣ ಏನು? ಎಂಬ ಪತ್ರಕರ್ತರ ಪ್ರಶ್ನೆಗೆ ಹೀಗೆ ಉತ್ತರಿಸಿದರು. ಇಂದು (ಜು.15) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಗ್ಯಾರಂಟಿಗಳ ಮೂಲಕವೇ ಬಿಜೆಪಿಯನ್ನು (BJP) ಸೋಲಿಸಿದ್ದೇವೆ. ರಾಜ್ಯ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದೆ. ವಿರೋಧ ಪಕ್ಷದವರು ಇದನ್ನೆಲ್ಲ ಮೆಚ್ಚಬೇಕು, ಟೀಕೆ ಮಾಡಬಾರದು ಎಂದರು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅವೈಜ್ಞಾನಿಕ ಕಾಮಗಾರಿ ವಿಚಾರವಾಗಿ ಮಾತನಾಡಿದ ಅವರು ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುತ್ತಿರುವುದು ತಪ್ಪು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹಿಸಬಾರದು. ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೂ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಆಷಾಢ ಮುಗಿಯುತ್ತಿದ್ದಂತೆಯೇ ಮನೆ ಬದಲಿಸಲಿರುವ ಸಿದ್ದರಾಮಯ್ಯ, ಸಿಎಂ ಅದೃಷ್ಟ ನಿವಾಸಕ್ಕೆ ಡಿಕೆ ಶಿವಕುಮಾರ್
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಂಭವ್ಯ ಪಟ್ಟಿಯಲ್ಲಿ ಆರ್. ವಿ ದೇಶಪಾಂಡೆಯವರ ಹೆಸರೂ ಇತ್ತು. ಅಲ್ಲದೇ ಆರ್. ವಿ ದೇಶಪಾಂಡೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಯಾವಾಗ ಸಚಿವ ಸ್ಥಾನ ಸಿಗಲ್ಲ ಎಂದು ಖಾತರಿಯಾಯಿತು, ಸ್ಪೀಕರ್ ಸ್ಥಾನಕ್ಕೆ ಹೆಸರು ಕೇಳಿ ಬರುತ್ತಿತ್ತು. ಆದರೆ ದೇಶಪಾಂಡೆ ಪರೋಕ್ಷವಾಗಿ ಸ್ಪೀಕರ್ ಆಗಲು ತಯಾರಿಲ್ಲ ಎಂದು ಹೇಳಿಕೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ