ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಬಂಧನ: ಇಡಿ ಅಧಿಕಾರಿಗಳಿಗೆ ಕೋರ್ಟ್ ತರಾಟೆ, ಇಲ್ಲಿದೆ ವಾದ ಪ್ರತಿವಾದ

ಅಕ್ರಮ ಬೆಟ್ಟಿಂಗ್ ಕಂಪನಿ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಇಡಿ ಬಂಧನದಲ್ಲಿದ್ದು, ಕೋರ್ಟ್​ ಸಹ ಇಂದು ವಿರೇಂದ್ರ ಪಪ್ಪಿ ಅವರನ್ನು ಮತ್ತೆ ಆರು ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಆದ್ರೆ, ವಿಚಾರಣೆ ವೇಳೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಗಜಾನನನ ಭಟ್ ಅವರು ಇಡಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗಾದ್ರೆ, ವಾದ ಪ್ರತಿವಾದ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಬಂಧನ: ಇಡಿ ಅಧಿಕಾರಿಗಳಿಗೆ ಕೋರ್ಟ್ ತರಾಟೆ, ಇಲ್ಲಿದೆ ವಾದ ಪ್ರತಿವಾದ
Veerendra Pappi
Updated By: ರಮೇಶ್ ಬಿ. ಜವಳಗೇರಾ

Updated on: Aug 28, 2025 | 6:08 PM

ಬೆಂಗಳೂರು, ಆಗಸ್ಟ್ 28): ಆನ್​ಲೈನ್ ಮನಿ ಗೇಮ್ಸ್ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ (Betting racket Case) ಮಾಡಿದ ಮತ್ತು ಅಕ್ರಮವಾಗಿ ಆನ್‌ಲೈನ್‌ ಬೆಟ್ಟಿಂಗ್‌ ಕಂಪನಿ ನಡೆಸುತ್ತಿದ್ದ ಆರೋಪದಲ್ಲಿ ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ (Chitradurga Congress MLA Veerendra Pappi) ಅವರನ್ನು ಇಡಿ (ED) ಬಂಧಿಸಿದ್ದು, ಇದೀಗ ಕೋರ್ಟ್ ವಿರೇಂದ್ರ ಪಪ್ಪಿ ಅವರನ್ನು ಆರು ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ವಾದ ಪ್ರತಿವಾದ ವೇಳೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಗಜಾನನ ಭಟ್ ಅವರು ಇಡಿ ಪರ ವಕೀಲರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತಿವಾಗಿ ವಾದ ಪ್ರತಿವಾದ ಆಲಿಸಿ ಆರೋಪಿ ವಿರೇಂದ್ರ ಅವರಿಗೆ ನಿದ್ದೆಗೆ ಸಮಯ ನೀಡಬೇಕು, ಶುದ್ಧ ಕುಡಿಯುವ ನೀರು, ಔಷಧ, ವಿಶ್ರಾಂತಿಗೆ ಅವಕಾಶ ಸೇರಿದಂತೆ ಮೂಲಸೌಕರ್ಯ ಒದಗಿಸಬೇಕೆಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇಡಿಗೆ ಸೂಚನೆ ನೀಡಿದೆ. ಅಲ್ಲದೇ ಪ್ರತಿದಿನ 30 ನಿಮಿಷ ವಕೀಲರ ಭೇಟಿಗೆ ಅವಕಾಶ ನೀಡುವಂತೆ ಸೂಚಿಸಿದೆ.

ಕಸ್ಟಡಿ ಇಂದಿಗೆ ಅಂತ್ಯವಾಗಿದ್ದರಿಂದ ಇಡಿ ಅಧಿಕಾರಿಗಳು, ಶಾಸಕ ವಿರೇಂದ್ರ ಪಪ್ಪಿ ಅವರನ್ನು ಇಂದು(ಆಗಸ್ಟ್ 28) ಬೆಂಗಳೂರಿನ ಜನಪ್ರತಿನಿಧಿ ವಿಶೇಷ ಕೋರ್ಟ್​ ಗೆ ಹಾಜರುಪಡಿಸಿದ್ದು, ಈ ವೇಳೆ ಮತ್ತೆ 15 ದಿನ ಕಸ್ಟಡಿಗೆ ನೀಡುವಂತೆ ಇಡಿ ಅಧಿಕಾರಿಗಳ ಪರ ಎಸ್‌ಪಿಪಿ ಪ್ರಮೋದ್ ಚಂದ್ರ ವಾದ ಮಂಡಿಸಿದರು. ಇದಕ್ಕೆ ಆಕ್ಷೇಪಿಸಿದ ವಿರೇಂದ್ರ ಪಪ್ಪಿ ಪರ ಹಿರಿಯ ವಕೀಲ ಕಿರಣ್ ಜವಳಿ, ಇಡಿ ಅಧಿಕಾರಿಗಳು ಯಾವುದೇ ಸೌಲಭ್ಯ ನೀಡದೇ ಕಿರುಕುಳ ನೀಡಿದ್ದಾರೆ. ಹೀಗಾಗಿ ಜಾಮೀನು ನೀಡುವಂತೆ ಮನವಿ ಮಾಡಿದರು. ಹಾಗಾದ್ರೆ, ವಾದ ಪ್ರತಿವಾದ ಹೇಗಿತ್ತು ಎನ್ನುವುದು ಈ ಕೆಳಗಿನಂತಿದೆ.

ಇದನ್ನೂ ಓದಿ: ಶಾಸಕ ವೀರೇಂದ್ರ ಪಪ್ಪಿ ಬಂಧನ: ಇಡಿ ದಾಳಿ ವೇಳೆ ಕೋಟ್ಯಂತರ ರೂ ನಗದು ಸೇರಿ ವಿದೇಶಿ ಕರೆನ್ಸಿ ಪತ್ತೆ

ವಾದ ಪ್ರತಿವಾದ ಹೇಗಿತ್ತು?

ಇಡಿ ಪರ ವಕೀಲ: ಆರೋಪಿ ಕಾನೂನುಬಾಹಿರ ಬೆಟ್ಟಿಂಗ್ ದಂಧೆಯನ್ನು ನಡೆಸುತ್ತಿದ್ದಾರೆ.ವಿದೇಶಿ ವ್ಯವಹಾರ ದಾಖಲೆಗಳು ಲಭ್ಯವಾಗಿವೆ. ದಾಳಿ ವೇಳೆ ಮಹತ್ವದ ದಾಖಲೆ ಲಭ್ಯವಾಗಿದ್ದು ತನಿಖೆ ಮಾಡಬೇಕಿದೆ. ಬೆಟ್ಟಿಂಗ್ ಆ್ಯಪ್ ಅವ್ಯವಹಾರದಲ್ಲಿ ಸಾಕಷ್ಟು ಜನ ಭಾಗಿಯಾಗಿದ್ದು, ಇಡಿ ಅಧಿಕಾರಿಗಳ ದಾಳಿ ನಡೆಸಿದಾಗ ಕೆಲವರು ಪರಾರಿಯಾಗಿದ್ದಾರೆ. ಸಾಕಷ್ಟು ಅವ್ಯವಹಾರ ನಡೆದಿದ್ದು, ವಶದಲ್ಲಿಟ್ಟುಕೊಂಡು ತನಿಖೆ ಅಗತ್ಯವಿದೆ. ಹಣದ ಮೂಲದ ಬಗ್ಗೆಯೂ ತನಿಖೆ ಮಾಡಬೇಕಿದೆ. ಹೀಗಾಗಿ 15 ದಿನ ಇಡಿ ವಶಕ್ಕೆ ನೀಡುವಂತೆ SPP ಪ್ರಮೋದ್ ಚಂದ್ರ ವಾದ ಮನವಿ ಮಾಡಿದರು.

ವೀರೇಂದ್ರ ಪಪ್ಪಿ ಪರ ವಕೀಲ: ಸಿಕ್ಕಿಂನಲ್ಲಿ ವೀರೇಂದ್ರ ಪಪ್ಪಿ ಬಂಧಿಸಿ ಗ್ರೌಂಡ್ಸ್ ಆಫ್ ಅರೆಸ್ಟ್ ನೀಡಿದ್ದಾರೆ. ಗ್ಯಾಂಗ್ಟಾಕ್‌ನ ರಮಡಾ ಹೋಟೆಲ್‌ನಲ್ಲಿ ವೀರೇಂದ್ರ ಪಪ್ಪಿ ಬಂಧಿಸಲಾಗಿದೆ. ಆದ್ರೆ ಯಾವ ಕೇಸ್‌ನ ಆಧರಿಸಿ ಇಡಿ ತನಿಖೆಗೆ ಆರಂಭಿಸಿದೆ ಎಂದು ತಿಳಿಸಿಲ್ಲ. ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳನ್ನು ಇಡಿ ಅನುಸರಿಸಿಲ್ಲ.2016ರಲ್ಲಿ ಚಳ್ಳಕೆರೆ ಠಾಣೆಯಲ್ಲಿ ಸೆ.420ರ ಅಡಿಯಲ್ಲಿ ಸಿಬಿಐನಲ್ಲಿ ದಾಖಲಾಗಿದ್ದ ಕೇಸ್ ಉಲ್ಲೇಖಿಸಲಾಗಿದೆ ಎಂದು ಇಡಿ ಪರ ವಕೀಲ ಕಿರಣ್ ಜವಳಿ ವಾದ ಮಂಡಿಸಿದರು.

ಜಡ್ಜ್​: ಸಿಬಿಐ ಕೇಸ್ ಏನಾಗಿದೆ ?

ವೀರೇಂದ್ರ ಪಪ್ಪಿ ಪರ ವಕೀಲ: ಸಿಬಿಐ ಕೇಸ್ ಕ್ಲೋಸ್ ಆಗಿದೆ . ಹೀಗಾಗಿ ಗ್ರೌಂಡ್ಸ್ ಆಫ್‌ ಅರೆಸ್ಟ್‌ನ್ನು ತಪ್ಪಾಗಿ ನೀಡಿದ್ದಾರೆ. ಇಡಿ ಅಧಿಕಾರಿಗಳ ಗ್ರೌಂಡ್ಸ್ ಆಫ್‌ ಅರೆಸ್ಟ್‌ನಲ್ಲಿ ಏನೂ ಇಲ್ಲ. ಇಡಿ ಅಧಿಕಾರಿಗಳು ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದಾರೆ. ಇಡಿ ಅಧಿಕಾರಿಗಳು ಮುಂಜಾನೆ 3 ಗಂಟೆಯವರೆಗೆ ವಿಚಾರಣೆ ನಡೆಸಿದ್ದಾರೆ.ಮುಂಜಾನೆಯವರೆಗೂ ವಿಚಾರಣೆ ನಡೆಸಿ ಟಾರ್ಚರ್ ಕೊಡಲಾಗಿದೆ. ಹೀಗಾಗಿ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ನೀಡುವಂತೆ ಮನವಿ ಮಾಡಿದರು.

ಇಡಿ ಅಧಿಕಾರಿಗಳಿಗೆ ಜಡ್ಜ್ ತರಾಟೆ

ಬಂಧಿಸುವಾಗ ಆರೋಪಿ ವಿರುದ್ಧ ಯಾವ ಕೇಸ್‌ಗಳನ್ನ ಉಲ್ಲೇಖಿಸಿದ್ದೀರಿ? 2011ರ ಕೇಸ್‌ ರದ್ದಾಗಿದೆ, 2016ರ ಸಿಬಿಐ ಕೇಸ್ ಸಹ ಕ್ಲೋಸ್‌ ಆಗಿದೆ. ಆರೋಪಿ ಬಂಧನ ನಂತರ ಯಾವುದೋ ಕೇಸ್‌ಗಳನ್ನ ಉಲ್ಲೇಖಿಸುತ್ತಿದ್ದೀರಿ. ಯಾವ ಪ್ರಕರಣ ಆಧರಿಸಿ ಇಸಿಐಆರ್ ದಾಖಲಿಸಿದ್ದೀರಿ? ಕೋರ್ಟ್‌ನ್ನು ಏಕೆ ಮಿಸ್ ಲೀಡ್‌ ಮಾಡುತ್ತಿದ್ದೀರಿ ಎಂದು ಇಡಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಕೋರ್ಟ್‌ನ ಜಡ್ಜ್‌ ಗಜಾನನ ಟ್ ತರಾಟೆಗೆ ತೆಗೆದುಕೊಂಡರು. ಬಳಿಕ ಇಡಿ ಪರ ವಕೀಲ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.

ಅಂತಿಮವಾಗಿ ವಾದ ಪ್ರತಿವಾದ ಆಲಿದ ನ್ಯಾಯಾಧಿಶ ಗಜಾನನ ಭಟ್, ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಕೆಲ ಸೂಚನೆಗಳೊಂದಿಗೆ ಆರೋಪಿ ವಿರೇಂದ್ರ ಪಪ್ಪಿ ಅವರನ್ನು 15 ದಿನ ಬದಲಾಗಿ 6 ದಿನ ಮಾತ್ರ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Thu, 28 August 25