Bidar Earthquake: ಪ್ರತಿದಿನವೂ ಭೂಮಿಯೊಳಗಿಂದ ಕೇಳಿಬರುತ್ತಿದೆ ಶಬ್ದ, ಜನರಲ್ಲಿ ಮನೆಮಾಡಿದ ಆತಂಕ
ಪ್ರತಿದಿನವೂ ಭೂಮಿಯೊಳಗಿಂದ ಬರುವ ಶಬ್ದದಿಂದಾಗಿ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನಲ್ಲಿರುವ ಬರುವ ಗ್ರಾಮಗಳ ಜನರು ಭಯಬೀತರಾಗಿದ್ದಾರೆ. ಹೀಗಾಗಿ ಅಧಿಕಾರಿಗಳ ತಂಡ ಜನರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ.
ಬೀದರ್: ಜಿಲ್ಲೆಯ ಹುಮ್ನಾಬಾದ್ ತಾಲೂಕಿನಲ್ಲಿರುವ ಐದು ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಭೂಮಿ ಅಡಿಯಿಂದ ಕೇಳಿಬರುವ ಶಬ್ದದಿಂದಾಗಿ ಜನರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ. ಒಂದು ಶಬ್ದ ಕೇಳಿಬಂದರೆ ಸಾಕು ಭೂಕಂಪನವೆಂದು ಭಾವಿಸಿ ಮನೆಯೊಳಗಿದ್ದ ಜನರೆಲ್ಲರೂ ಹೊರಗೆ ಓಡಿ ಬರುತ್ತಿದ್ದಾರೆ. ಈ ನಡುವೆ ಸಂಭವಿಸಿದ ಭೂಕಂಪನ (Earthquake) ದಿಂದಾಗಿ ಶ್ರೀಕಟನಳ್ಳಿ, ಹಿಲಾಲಪುರ, ವಡ್ಡನಕೇರಾ, ಸಕ್ಕರಗಂಜ್, ಮದರಗಾಂವ ಗ್ರಾಮಗಳಲ್ಲಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಭೂಮಿ ನಡುಗುವಂತಾದಾಗ ಜನರ ಮನೆಯಿಂದ ಹೊರ ಓಡಿಬರುತ್ತಿದ್ದಾರೆ. ಭೀತಿಗೊಳಗಾಗಿರುವ ಜನರನ್ನು ಭೇಟಿಯಾದ ಅಧಿಕಾರಿಗಳ ತಂಡ ಧೈರ್ಯ ತುಂಬುವ ಕೆಲಸ ಮಾಡಿದೆ.
ಹುಮ್ನಾಬಾದ್ ತಾಲೂಕಿನಲ್ಲಿರುವ ಶ್ರೀಕಟನಳ್ಳಿ, ಹಿಲಾಲಪುರ, ವಡ್ಡನಕೇರಾ, ಸಕ್ಕರಗಂಜ್, ಮದರಗಾಂವ ಗ್ರಾಮಗಳಲ್ಲಿ ಎರಡು ದಿನದ ಹಿಂದೆ 3.5 ತೀವ್ರತೆಯ ಭೂಕಂಪನವಾಗಿದ್ದು, ಭೂಮಿಯ 5 ಕಿಲೋಮೀಟರ್ ಆಳದಲ್ಲಿ ಭೂಕಂಪವಾಗಿದೆ ಎಂದು ಭೂ ವಿಜ್ಜಾನ ಇಲಾಖೆಯ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಹೀಗಾಗಿ ಈ ಐದು ಗ್ರಾಮದ ಜನರಿಗೆ ಆತಂಕ ಎದುರಾಗಿದ್ದು ಮತ್ತೆ ಭೂಕಂಪವಾದರೆ ಹೇಗೆ ಎಂದು ಚಿಂತೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
ರಾತ್ರಿ ಮನೆಯಲ್ಲಿ ನಿದ್ರಿಸಲೂ ಜನರು ಹೆದರುವಂತಾಗಿದೆ. ಭೂಕಂಪದ ಜೊತೆಗೆ ನಿರಂತರವಾಗಿ ಭೂಮಿಯಿಂದ ಒಂದು ರೀತಿಯ ಶಬ್ದ ಕೇಳಿಬರುತ್ತಿದೆ. ಈ ರೀತಿಯ ಶಬ್ದ ಬಂದಾಗ ಭೂಮಿ ಕಂಪನವಾಗುತ್ತದೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟಿದ್ದಾರೆ.
ಈ ಹಿಂದೆಯೂ ಕೇಳಿಬಂದಿತ್ತು ಇಂತಹ ಶಬ್ದ
ಈ ಗ್ರಾಮಗಳಲ್ಲಿ ಭೂಮಿಯಡಿಯಿಂದ ಶಬ್ಧ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಕಳೆದ ಜನವರಿಯಲ್ಲಿಯೂ ಇಂತಹ ಶಬ್ಧ ಕೇಳಿಬಂದಿತ್ತು. ಹೀಗಾಗಿ ಈ ವಿಚಾರವನ್ನ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಪಿಡಿಓ, ತಹಶೀಲ್ದಾರ್, ತಾಲೂಕು ಪಂಚಾಯತ್ ಇಓ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದ್ದಿದ್ದರು. ಅಧಿಕಾರಿಗಳು ಗ್ರಾಮಕ್ಕೆ ಭೆಟ್ಟಿಕೊಟ್ಟಾಗಲೂ ಎರಡು ಸಲ ಭುಮಿಯಿಂದ ಶಬ್ದಕೇಳಿ ಬಂದಿತ್ತು. ಸ್ವತಃ ಶಬ್ಧದ ಅನುಭವವನ್ನು ಪಡೆದ ಅಧಿಕಾರಿಗಳು ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದರು.
ಭೂಮಿಯಡಿ ಕೇಳಿಬರುವ ಶಬ್ದಕ್ಕೆ ಕಾರಣವೇನು?
ಇದಾದನಂತರ ಹಿರಿಯ ಭೂವಿಜ್ಞಾನಿಗಳು ಗ್ರಾಮಕ್ಕೆ ಭೇಟಿ ನೀಡಿ ವರ್ಟಿಕಲ್ ಎಲೆಕ್ಟ್ರಿಕಲ್ ಸೌಂಡಿಂಗ್ ಮೆಥಡ್‌ದಿಂದ 1500 ಅಡಿವರೆಗೆ ಪರಿಶೀಲನೆ ನಡೆಸಿದ್ದರು. ಈ ವೇಳೆಯಲ್ಲಿ ಯಾವುದೇ ದೋಷ ಕಂಡು ಬಂದಿರಲಿಲ್ಲ. ಆದರೆ ಭೂಮಿಯಲ್ಲಿ ನೀರು ಜಾಸ್ತಿಯಾದರೆ ಈ ರೀತಿಯ ಶಬ್ಧ ಕೇಳಿಬರುತ್ತದೆ. ನೀವು ಯಾವುದೇ ರೀತಿಯಲ್ಲಿ ಭಯಗೊಳ್ಳುವ ಅವಶ್ಯಕತೆಯಿಲ್ಲ ಎಂದು ಹೇಳಿ ಭೂವಿಜ್ಞಾನಿಗಳು ಹೋಗಿದ್ದರು. ಆದರೆ ಈಗ ಮತ್ತೆ ಅಂತಹದ್ದೇ ಶಬ್ದ ಕೇಳಿಬರಲು ಆರಂಭವಾಗಿದ್ದು, ಸಹಜವಾಗಿಯೇ ಗ್ರಾಮಸ್ಥರನ್ನ ಭಯದ ವಾತಾವಣರಣಕ್ಕೆ ತಳ್ಳಿದೆ.
ಭೂಮಿ ಕಂಪನದ ಜೊತೆಗೆ ಭೂಮಿಯಿಂದ ಬರುತ್ತಿರುವ ಶಬ್ದದಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅಧಿಕಾರಿಗಳು ಗ್ರಾಮಕ್ಕೆ ಬಂದು ಜನರಿಗೆ ದೈರ್ಯ ತುಂಬಿಹೋಗಿದ್ದರು ಗ್ರಾಮಸ್ಥರಿಗೆ ಭಯ ಮಾತ್ರ ಕಡಿಮೆಯಾಗಿಲ್ಲ.
ವರದಿ: ಸುರೇಶ್ ನಾಯಕ್, ಟಿವಿ9 ಬೀದರ್
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ