ಬೀದರ್: ಜಿಲ್ಲೆಯಲ್ಲಿ ವಿಮಾನ ಸೇವೆ ಆರಂಭಿಸಬೇಕು ಎಂದು ಬಹಳ ದಿನಗಳಿಂದ ಬೇಡಿಕೆ ಇತ್ತು. ಜಿಲ್ಲೆಯ ಜನರ ಬಹು ದಿನಗಳ ಕನಸಾದ ವಿಮಾನ ಹಾರಾಟ ಒಂದು ವರ್ಷದ ಹಿಂದೆ ಬೀದರ್ನಲ್ಲಿ ಆರಂಭವಾಯಿತು. ಆದರೆ ವಿಮಾನ ಬೀದರ್ನಿಂದ ಬೆಂಗಳೂರಿಗೆ ಮಾತ್ರ ಹಾರಾಡುತ್ತಿದ್ದು, ಬೇರೆ ಬೇರೆ ನಗರಕ್ಕೆ ವಿಮಾನ ಓಡಿಸಿ ಎಂದು ಇಲ್ಲಿನ ಜನರು ಇದೀಗ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ದಶಕಗಳ ಕನಸಿಗೆ ರೆಕ್ಕೆ ಪುಕ್ಕ ಬಂದು ಒಂದು ವರ್ಷವೇ ಕಳೆದಿದೆ. ಬಡವರು ಸಹ ವಿಮಾನ ಪ್ರಯಾಣ ಮಾಡಲಿ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಉಡಾನ್ ಯೋಜನೆ ಜಾರಿಗೆ ತಂದಿದೆ. ಅಡೆ ತಡೆಗಳ ನಡುವೆಯೂ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಒಂದು ವರ್ಷ ಕಳಿಯಿತು. ಆದರೆ ಒಂದು ವಿಮಾನ ಹಾರಾಟ ಬಿಟ್ಟರೆ ಬೇರೆ ಯಾವ ವಿಮಾನವು ಇಲ್ಲಿಗೆ ಬಂದು ಇಳಿಯಲ್ಲಿಲ್ಲ.
ಗಡಿ ನಾಡು ಬೀದರ್ ಜಿಲ್ಲೆ ಎಂದರೆ ಸಾಕು ಜನತೆಗೆ ನೆನಪಾಗುವುದು ಬಸವಣ್ಣನ ಕರ್ಮ ಭೂಮಿ, ಸೂಫಿ ಸಂತರ ನಾಡು ಅಂತಲೇ ಫೆಮಸ್ ಆಗಿದೆ. ರಾಜ್ಯದ ವಾಯುಯಾನ ತರಬೇತಿ ಕೇಂದ್ರವು ಇಲ್ಲಿದ್ದು, ಇಲ್ಲಿಂದಲ್ಲೆ ಅದೆಷ್ಟೋ ಯುದ್ಧ ವಿಮಾನಗಳಿಗೆ ಪೈಲೆಟ್ಗಳು ತರಬೇತಿ ಪಡೆದುಕೊಂಡು ಹೋಗಿದ್ದಾರೆ. ಇಂತಹ ಸ್ಥಳದಲ್ಲೇ ಒಂದು ವಿಮಾನ ನಿಲ್ದಾಣವಾಗಬೇಕು ಎನ್ನುವುದು ಇಲ್ಲಿನ ಜನತೆ ದಶಕಗಳಿಂದ ಹೋರಾಟ ನಡೆಸಿದ್ದರು. ಇದರ ಪ್ರತಿಫಲವಾಗಿ ಕೇಂದ್ರ ಸರ್ಕಾರ ಉಡಾನ್ ಯೋಜನೆಯಲ್ಲಿ ಬೀದರ್ನಲ್ಲಿ ಒಂದು ವಿಮಾನ ನಿಲ್ದಾಣ ನಿರ್ಮಾಣ ಮಾಡಿದೆ. ಕಳೆದ ವರ್ಷ ಅಂದರೆ 2020 ರ ಫೆಬ್ರವರಿ 7 ರಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರು. ಆದರೆ ಅವತ್ತಿನಿಂದ ಇವತ್ತಿನವರೆಗೆ ಬೆಂಗಳೂರಿನಿಂದ ಬೀದರ್ಗೆ ಮಾತ್ರ ವಿಮಾನ ಹಾರಾಡುತ್ತಿದ್ದು, ಬೇರೆ ನಗರಕ್ಕೆ ಯಾಕಿಲ್ಲ ಎಂದು ಇಲ್ಲಿನ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಜನರ ಅಸಮಾಧಾನ
ಒಂದು ವರ್ಷದಲ್ಲಿ ಬೆಂಗಳೂರಿನಿಂದ ಬೀದರ್ ಹಾಗೂ ಬೀದರ್ನಿಂದ ಬೆಂಗಳೂರಿಗೆ ಆ ಒಂದು ವಿಮಾನ 342 ಬಾರಿ ಹಾರಾಟವಾಗಿದೆ. ಒಟ್ಟು 14 ಸಾವಿರ ಪ್ರಯಾಣಿಕರು ಪ್ರಯಾಣ ಬೆಳಸಿದ್ದಾರೆ ಎಂದು ಸಂಸದ ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ. ಪಕ್ಕದ ಕಲಬುರಗಿಯಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ಮೂರರಿಂದ ನಾಲ್ಕು ವಿಮಾನ ಹಾಗೂ ದೆಹಲಿ, ತಿರುಪತಿ ಸೇರಿದಂತೆ ಗೋವಾ ರಾಜ್ಯಗಳಿಗೂ ವಿಮಾನ ಹಾರಾಟ ನಡೆಸುತ್ತಿದೆ. ಕಲಬುರಗಿ ಸಂಸದರಿಗೆ ಇರುವ ಹುಮ್ಮಸು ಬೀದರ್ ಸಂಸದರಿಗೆ ಯಾಕೆ ಇಲ್ಲಾ ಎನ್ನುವ ಮಾತುಗಳು ಕೇಳಿ ಬಂದಿವೆ. ಹೆಚ್ಚಿನ ವಿಮಾನಗಳ ಹಾರಾಟವಾದರೆ ಬೀದರ್ ಜಿಲ್ಲೆಯಲ್ಲಿ ಕೈಗಾರಿಕೋದ್ಯಮಗಳು ಆರಂಭವಾಗುತ್ತದೆ. ಇದರಿಂದ ಜಿಲ್ಲೆಯೂ ಸಹ ಅಭಿವೃದ್ಧಿಯಾಗುತ್ತದೆ. ಸಂಸದರು ಅದ್ಯಾಕೋ ಇಚ್ಚಾಶಕ್ತಿ ತೋರುತ್ತಿಲ್ಲಾ ಎಂದು ಇಲ್ಲಿನ ಜನರು ಆಡಿಕೊಳ್ಳುತ್ತಿದ್ದಾರೆ.
ಪಕ್ಕದ ಕಲಬುರಗಿಯಲ್ಲೂ ಬಿಜೆಪಿ ಸಂಸದರು ಇದ್ದಾರೆ. ಕೇಂದ್ರ ಸರ್ಕಾರದ ಜೊತೆ ನಿಕಟ ಸಂಪರ್ಕ ಬೆಳೆಸಿ ಕಲಬುರಗಿಗೆ ಸಾಕಷ್ಟು ವಿಮಾನ ಹಾರಾಟಕ್ಕೆ ಬೇಡಿಕೆ ಇಡುತ್ತಿದ್ದು, ಈಗಾಗಲೇ ಹತ್ತಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸುತ್ತಿವೆ. ಇತ್ತ ಬೀದರ್ನಲ್ಲೂ ಬಿಜೆಪಿಯ ಸಂಸದರೆ ಇರುವುದು. ಆದರೆ ಇಲ್ಲಿ ಯಾಕೆ ಹೆಚ್ಚಿನ ವಿಮಾನಗಳ ಹಾರಾಟಕ್ಕೆ ಬೇಡಿಕೆ ನೀಡುತ್ತಿಲ್ಲಾ ಎನ್ನುವುದು ಸಾರ್ವಜನಿಕರಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.
ಬೀದರ್ ನಾಗರಿಕ ವಿಮಾನಯಾನಕ್ಕೆ ಹಿಡಿದ ಗ್ರಹಣ ಬಿಡುವ ಲಕ್ಷಣ ಗೋಚರಿಸುತ್ತಿಲ್ಲ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿದಂತೆ ಬೀದರ್ನಿಂದ ವಿಮಾನ ಹಾರೋಡುವುದಕ್ಕೆ ಆರಂಭ ಮಾಡಿತು. ಆದರೆ ಒಂದೆ ವಿಮಾನ ಹಾರಾಟಕ್ಕೆ ಸಿಮೀತಗೊಳಿಸಲಾಗಿದ್ದು, ಇಷ್ಟಕ್ಕೆ ವಿಮಾನ ನಿಲ್ದಾಣ ನಮಗೆ ಬೇಕಾಗಿತ್ತಾ? ಎಂದು ಜನರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಇದನ್ನೂ ಓದಿ
ಮೇ 2ರ ನಂತರ ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ: ಸಿದ್ದರಾಮಯ್ಯ
ಮತ್ತೆ ಮಹಾನಾಯಕನ ಪ್ರಸ್ತಾಪ; ಮಹಾನಾಯಕ ಏಕೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ? ಬಿಜೆಪಿ ಕರ್ನಾಟಕ ಮಹಾ ಪ್ರಶ್ನೆ