ಈಗಲೋ ಆಗಲೋ ಬೀಳುವಂತಿದೆ ಪಶು ಚಿಕಿತ್ಸಾಲಯಗಳು, ದುರಸ್ತಿ ಗೋಜಿಗೆ ಹೋಗದ ಇಲಾಖೆ
ಬೀದರ್ ಜಿಲ್ಲೆಯಲ್ಲಿ 114 ಪಶು ಚಿಕಿತ್ಸಾ ಕೇಂದ್ರಗಳಿದ್ದು, ಅವುಗಳ ಪೈಕಿ ಬಹುತೇಕ ಕಟ್ಟಡಗಳು ಬಿರುಕು ಬಿಟ್ಟಿದ್ದು ಈಗಲೋ ಆಗಲೋ ಬೀಳುವ ಹಂತಕ್ಕೆ ತಲುಪಿವೆ.
ಬೀದರ್: ಜಿಲ್ಲೆಯಲ್ಲಿ ಇರುವ 114 ಪಶು ಚಿಕಿತ್ಸಾ ಕೇಂದ್ರಗಳ ಪೈಕಿ ಬಹುತೇಕ ಕಟ್ಟಡಗಳು ಬಿರುಕು ಬಿಟ್ಟಿದ್ದು, ಈಗಲೋ ಆಗಲೋ ಬೀಳುವ ಹಂತಕ್ಕೆ ತಲುಪಿವೆ. ಅದರಲ್ಲಿಯೂ ವಿಶೇಷವಾಗಿ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ, ಧನ್ನೂರು ಎಚ್, ಕೋಣ ಮೇಳಕುಂದಾ, ಕಣಜಿ, ಇನ್ನೂ ಔರಾದ್ ತಾಲೂಕಿನ ವಡಗಾಂವ್, ಔರಾದ್ ಬಿ ಹೀಗೆ ವಿವಿಧ ತಾಲೂಕಿನಲ್ಲಿ ಅರ್ಧದಷ್ಟು ಪಶು ಆಸ್ಪತ್ರೆಯ ಕಟ್ಟಡಗಳು ಬಿರುಕು ಬಿಟ್ಟಿವೆ. ಇಂಥಹ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿಯೇ ಪಶು ವೈದ್ಯರು ಸಿಬ್ಬಂದಿಗಳು ಕುಳಿತುಕೊಳ್ಳುವಂತಹ ಸ್ಥಿತಿ ಇದೆ. ಪಶು ಸಂಗೋಪನ ಇಲಾಖೆಯು ಇಂತಹ ಕಟ್ಟಡಗಳನ್ನ ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಲು ಮುಂದಾಗದಿರುವುದು ದುರ್ದೈವವೇ ಸರಿ.
ದುಸ್ತಿತಿಗಳನ್ನು ಕಂಡು ಸಹಜವಾಗಿಯೇ ಪಶು ಆಸ್ಪತ್ರೆಗೆ ಚಿಕಿತ್ಸೆಗೆಂದು ಜಾನುವಾರುಗಳನ್ನ ತೆಗೆದುಕೊಂಡು ಬರುವ ರೈತರಲ್ಲಿ ಆಕ್ರೋಶ ಹೆಚ್ಚಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಪಶು ಆಸ್ಪತ್ರೆಗಳು ಗಲೀಜು ತುಂಬಿದ ಸ್ಥಳದಲ್ಲಿದ್ದು, ಚಿಕಿತ್ಸೆಗಾಗಿ ಜಾನುವಾರು, ಕುರಿ, ಕೋಳಿ, ಸಾಕು ನಾಯಿಗಳನ್ನ ತೆಗೆದುಕೊಂಡು ಬರುವ ಮಾಲೀಕರು ತಮ್ಮ ಮೂಗು ಮುಚ್ಚಿಕೊಂಡೆ ಬರುತ್ತಾರೆ ಎಂದು ರೈತರು ಹೇಳಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಮಳೆಗಾಲದಲ್ಲಿ ಇನ್ನೂ ಹೆಚ್ಚಿನ ಸಮಸ್ಯೆಯನ್ನ ತಂದೊಡ್ಡುತ್ತಿವೆ. ಮಳೆಯಾದರೆ ಕಟ್ಟಡಗಳು ಸೋರಲಾರಂಭಿಸುತ್ತವೆ, ಜಾನುವಾರುಗಳಿಗೆ ಔಷಧಿಗಳನ್ನ ಸಂಗ್ರಹ ಮಾಡಿಟ್ಟುಕೊಳ್ಳಲು ಕೂಡಾ ಸಾಧ್ಯವಾಗದಷ್ಟು ಮಳೆ ನೀರು ಆಸ್ಪತ್ರೆಯ ಒಳಗೆ ಬರುತ್ತದೆ. ಹೀಗಾಗಿ ಔಷಧಿಗಳನ್ನ ಸಂಗ್ರಹ ಮಾಡುವುದು ಕೂಡಾ ವೈದ್ಯರಿಗೆ, ಸಿಬ್ಬಂದಿಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಅಲ್ಲದೆ ಪಶು ಆಸ್ಪತ್ರೆಯ ಕಟ್ಟಡದ ಜೊತೆಗೆ ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಇಲ್ಲಿ ಕಾಡುತ್ತಿದೆ. ಇದು ಕೂಡಾ ರೈತರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ವೈದ್ಯ ಹುದ್ದೆಗಳು ಖಾಲಿ
114 ಪಶು ಆಸ್ಪತ್ರೆಯಲ್ಲಿ ಸುಮಾರು 76 ವೈದ್ಯ ಸೇದಂತೆ ಹುದ್ದೆಗಳು ಖಾಲಿ ಇವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ, ಚಳಿಗಾಲದಲ್ಲಿ ಜಾನುವಾರುಗಳಿಗೆ ವಿವಿಧ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಆರೈಕೆ ಮತ್ತು ಚಿಕಿತ್ಸೆಗೆ ಪಶು ಇಲಾಖೆ ಪಾತ್ರ ಬಹಳ ಮುಖ್ಯವಾಗಿದೆ. ಆದರೆ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯಿಂದ ಎಮ್ಮೆ, ಆಕಳು, ಕುರಿ, ಮೇಕೆ ಸೇರಿದಂತೆ ಲಕ್ಷಾಂತರ ಜಾನುವಾರುಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ. ಇದರ ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪಶು ಸಂಗೋಪನಾ ಇಲಾಖೆ ಜಾರಿಗೆ ತರುತ್ತಿರುವ ನಾನಾ ಯೋಜನೆಗಳ ಅನುಷ್ಠಾನ ಕೂಡ ಕಷ್ಟಕರವಾಗುತ್ತಿದೆ.
ಪಶು ಆಧಾರ ಯೋಜನೆಯ ಲಾಭ ಜಾನುವಾರುಗಳಿಗೆ ತಲುಪದಂತಾಗಿದೆ. ಪಶು ಆಸ್ಪತ್ರೆಗಳ ನಿರ್ವಹಣೆ, ಚಿಕಿತ್ಸೆ ಕಚೇರಿ ಕೆಲಸ ಕಾರ್ಯಗಳನ್ನು ಇರುವ ಸಿಬ್ಬಂದಿಗಳೇ ನೋಡಿಕೊಳ್ಳಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ನಾನಾ ಯೋಜನೆಗಳ ಅನುಷ್ಠಾನಕ್ಕೂ ಕೂಡ ಹಿನ್ನಡೆಯಾಗುತ್ತಿದೆ. ಪಶು ಸಂಗೋಪನಾ ಇಲಾಖೆ ಸಚಿವರಾಗಿರುವ ಪ್ರಭು ಚವ್ಹಾಣ್ ಅವರ ಕ್ಷೇತ್ರದಲ್ಲಿಯೇ ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಶಿಥಿಲಾವಸ್ಥೆಯ ಕಟ್ಟಡಗಳಿಂದ ರೈತರು ರೋಷಿಹೋಗಿದ್ದಾರೆ.
ಶಿಥಿಲಾವಸ್ಥೆಗೆ ತಲುಪಿರುವ ಪಶು ಆಸ್ಪತ್ರೆಯ ಕಟ್ಟಡಗಳು ಜೊತೆಗೆ ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರೆತೆಯಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಬೀದರ್ ಜಿಲ್ಲೆಯವರೇ ಪಶು ಸಂಗೋಪನಾ ಸಚಿವರಾಗಿದ್ದರೂ ಪಶು ಆಸ್ಪತ್ರೆಗೆ ಒಳ್ಳೆಯ ಕಟ್ಟಡ, ಸಿಬ್ಬಂದಿಗಳ ನೇಮಕ ಮಾಡದೆ ಇರುವುದು ಈ ಭಾಗದ ರೈತರನ್ನ ಕೆರೆಳಿಸುವಂತೆ ಮಾಡಿದೆ.
ವರದಿ: ಸುರೇಶ್ ನಾಯಕ್, ಟಿವಿ9 ಬೀದರ್
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Thu, 3 November 22