Aditi Veershetty Bakka: ಭಾಲ್ಕಿ ಪಟ್ಟಣದ ಹಳ್ಳಿ ಹುಡುಗಿ ಅದಿತಿ ಬಿಸಿಸಿಐ ತಂಡಕ್ಕೆ ಆಯ್ಕೆ, ಈ ಬಾಲೆ ಬ್ಯಾಟ್ ಬೀಸಿದರೆ ಎದುರಾಳಿ ತಂಡ ಮೈದಾನದಿಂದ ಹೊರಕ್ಕೆ!

| Updated By: ಸಾಧು ಶ್ರೀನಾಥ್​

Updated on: Dec 29, 2022 | 11:15 AM

BCCI: ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಗಾಂಧಿ ಗಂಜ್ ಬಕ್ಕಾ ಗಲ್ಲಿಯ ನಿವಾಸಿ, ರೈತನ ಮಗಳು ಕ್ರಿಕೆಟ್ ಅಂಗಳಕ್ಕೆ ಸೇರ್ಪಡೆಯಾಗಿದ್ದಾಳೆ. 19 ವರ್ಷದೊಳಗಿವರ ಮಹಿಳಾ ಏಕದಿನ ಕ್ರಿಕೆಟ್ ಗೆ ಅದಿತಿ ವೀರಶೆಟ್ಟಿ ಬಕ್ಕಾ ಆಯ್ಕೆ...

Aditi Veershetty Bakka: ಭಾಲ್ಕಿ ಪಟ್ಟಣದ ಹಳ್ಳಿ ಹುಡುಗಿ ಅದಿತಿ ಬಿಸಿಸಿಐ ತಂಡಕ್ಕೆ ಆಯ್ಕೆ, ಈ ಬಾಲೆ ಬ್ಯಾಟ್ ಬೀಸಿದರೆ ಎದುರಾಳಿ ತಂಡ ಮೈದಾನದಿಂದ ಹೊರಕ್ಕೆ!
ಭಾಲ್ಕಿ ಪಟ್ಟಣದ ಹಳ್ಳಿ ಹುಡುಗಿ ಅದಿತಿ ಬಿಸಿಸಿಐ ತಂಡಕ್ಕೆ ಆಯ್ಕೆ!
Follow us on

ಆಕೆ ಗಡಿ ಜಿಲ್ಲೆಯ ಅಪ್ಪಟ ದೇಸಿ ಪ್ರತಿಭೆ. ಸಣ್ಣ ಪಟ್ಟಣದಲ್ಲಿದ್ದರೂ ದೊಡ್ಡದೊಡ್ಡ ಕನಸು ಕಂಡಿದ್ದ ಪ್ರತಿಭಾನ್ವಿತೆ. ರಾಷ್ಟ್ರೀಯ ಕ್ರಿಕೆಟ್ (Cricket) ನಲ್ಲಿ ಸ್ಥಾನ ಪಡೆಯಲೇ ಬೇಕೆಂದು ಹಗಲಿರುಳು ಶ್ರಮಪಟ್ಟ ಬಾಲಕಿಯವಳು. ರಾಷ್ಟ್ರೀಯ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ನಿತ್ಯ ಕ್ರೀಡಾಂಗಣದಲ್ಲಿ ಬೆವರು ಸುರಿಸುತ್ತಿದ್ದಳು. ತಾನು ಕಂಡ ಕನಸು ಈಡೇರಿಸಿಕೊಳ್ಳಲು ಕಠಿಣ ಶ್ರಮ ಪಡುತ್ತಲಿದ್ದಳು. ಈಕೆಯ ಹುಚ್ಚಾಟ ಕಂಡು ಹಲವರು ಇದು ಆಗೋದಲ್ಲ ಹೋಗೋದಲ್ಲ ಅಂತಾ ಕಾಲೆಳೆದವರೇ ಹೆಚ್ಚು. ಆದರೆ ಛಲ ಬಿಡದೇ ಈಕೆ ಕೊನೆಗೂ ತಾನೂ ಕಂಡ ಕನಸು ಈಡೇರಿಸಿಕೊಂಡಿದ್ದು, ಬಿಸಿಸಿಐನ ಅಂಡರ್ 19 ರಲ್ಲಿ ಬಾಲಕಿಯರ ವಿಭಾಗದಲ್ಲಿ ಸ್ಥಾನ ಪಡೆಯುವುದರ ಮೂಲಕ ಆಡಿಕೊಳ್ಳುವವರ ಮುಂದೆ ತಾನು ಎಂತಾ ಪ್ರತಿಭಾನ್ವಿತೆ ಅನ್ನೋದನ್ನ ಸಾಬೀತು ಪಡಿಸಿದ್ದಾಳೆ. ಬಿಸಿಸಿಐ (BCCI) ತಂಡಕ್ಕೆ ಆಯ್ಕೆಯಾದ ಗಡಿನಾಡಿನ (Bhalki, Bidar) ಕುವರಿ..! ರೈತನ ಮಗಳು 19 ವರ್ಷದೊಳಗಿವರ ಮಹಿಳಾ ಏಕದಿನ ಕ್ರಿಕೆಟ್ ಗೆ ಆಯ್ಕೆ.. ಅದಿತಿ ವೀರಶೆಟ್ಟಿ ಬಕ್ಕಾ (Aditi Veershetty Bakka) ಬಿಸಿಸಿಐ ನಡೆಸುವ 19 ವರ್ಷದೊಳಗಿನ ಮಹಿಳಾ ಏಕದಿನ ಪಂದ್ಯಕ್ಕೆ ಆಯ್ಕೆಯಾಗಿದ್ದಾಳೆ.

ಹೌದು ಅವಳು ಗಡಿನಾಡಿನ ಕುವರಿ ಸಾಧನೆಗೆ ಸಾವಿರ ದಾರಿಗಳು ಅನ್ನೊದಕ್ಕೆ ಇಲ್ಲಿ ಅಕ್ಷರಶಃ ಸತ್ಯವಾಗಿ ಹೋಗಿದೆ ಸಾಧನೆ ಹಿಂದೆ ಬೆನ್ನು ಬಿದ್ದರೆ ಎನನ್ನಾದ್ರು ಸಾಧಿಸಬಹುದು ಅನ್ನೋದಕ್ಕೆ ಕಲ್ಯಾಣ ಕರ್ನಾಟಕ ಭಾಗದ ಪೋರಿ ಮಾಡಿ ತೋರಿಸಿದ್ದಾಳೆ. ಬಿಸಿಸಿಐ ತಂಡಕ್ಕೆ ಆಯ್ಕೆಯಾಗುವ ಮೂಲಕ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಗಾಂಧಿ ಗಂಜ್ ಬಕ್ಕಾ ಗಲ್ಲಿಯ ನಿವಾಸಿ ರೈತನ ಮಗಳು ಕ್ರಿಕೆಟ್ ಅಂಗಳಕ್ಕೆ ಸೇರ್ಪಡೆಯಾಗಿದ್ದಾಳೆ. ಬಿಸಿಸಿಐ ನಡೆಸುವ 19 ವರ್ಷದೊಳಗಿವರ ಮಹಿಳಾ ಏಕದಿನ ಕ್ರಿಕೆಟ್ ಗೆ ಅದಿತಿ ವೀರಶೆಟ್ಟಿ ಬಕ್ಕಾ ಆಯ್ಕೆಯಾಗಿದ್ದು, ಎಲ್ಲರನ್ನೂ ತಿರುಗಿ ನೋಡುವಂತೆ ಮಾಡಿದೆ.

ಚಿಕ್ಕವಳಿಂದಲೇ ಕ್ರಿಕೆಟ್ ಹುಚ್ಚು, ಸತತ ಪ್ರಯತ್ನದಿಂದ ಸಿಕ್ಕ ಫಲ

ಅದಿತಿಗೆ ದಿನ ಕಳೆದಂತೆ ಕ್ರಿಕೆಟ್ ನಲ್ಲಿ ಆಸಕ್ತಿ ಜಾಸ್ತಿಯಾಯ್ತು. ಕ್ರಿಕೆಟನ್ನು ಪ್ರೀತಿಸಲು ಶುರುಮಾಡಿದಳು. ಕ್ರಿಕೆಟ್ ಜೀವನವಾಯ್ತು. ಪ್ರತಿಭೆ ಜೊತೆ ಅಭ್ಯಾಸ, ಉತ್ಸಾಹ, ಸಾಧಿಸಬೇಕೆಂಬ ಛಲ ಮೈದಾನದಲ್ಲಿ ಆಕೆಯನ್ನು ಸಾಕಷ್ಟು ದಾಖಲೆ ಮಾಡಲು ನೆರವಾಯ್ತು. ಅದಿತಿಯ ಸತತ ಪ್ರಯತ್ನ ದಿಂದ ಬಿಸಿಸಿಐ ಕ್ರಿಕೆಟ್ ಟೂರ್ನಮೆಂಟ್ ಗೆ ಆಯ್ಕೆಯಾಗಿದ್ದಾರೆ.

ನಾಲ್ಕು ವರ್ಷದವಳಿದ್ದಾಗಲೆ ಕ್ರಿಕೆಟ್ ತರಬೇತಿ ಪ್ರಾರಂಭಿಸಿದ ಅದಿತಿ ಬೆಂಗಳೂರಿನ ದಿ ಜೈನ್ ಗ್ರುಪ್ ಆಫ್ ಇನ್ಸ್ಟಿಟ್ಯೂಟ್ ಸ್ಪೋರ್ಟ್ಸ್ ಸ್ಕೂಲ್ ಸೇರಿಸಲಾಗಿತ್ತು. ಹನ್ನೆರಡು ವರ್ಷದಿಂದ ಅಲ್ಲಿ ತರಬೇತಿ ಪಡೆದು ಸದ್ಯ ಈ ಟೂರ್ನಮೆಂಟ್ ಗೆ ಆಯ್ಕೆಯಾಗಿದ್ದಾಳೆ. ತರಬೇತಿಯ ವೇಳೆ ಹಲವಾರು ಟೂರ್ನಮೆಂಟ್ ವೇಳೆ ವಿಜೇತಳಾಗಿದ್ದಾಳೆ ಮೊದಲು ಎನ್ ಸಿಎ ಟ್ರಯಲ್ಸ್ ನಲ್ಲಿ ಆಯ್ಕೆಯಾಗಿದ್ದಳು, ಅಲ್ಲಿಂದ ಬಿಸಿಸಿಐ ಟೂರ್ನಮೆಂಟ್ ಗೆ ಆಯ್ಕೆಯಾಗಿ ಗಡಿನಾಡಿನ ಕೀರ್ತಿ ತಂದಿದ್ದಾಳೆ.

ಇದನ್ನೂ ಓದಿ: Success Story: ಬೀದರ್ ಇಸ್ಲಾಂಪುರದ ರೈತ ಕಲರ್ ಕಲರ್ ಕ್ಯಾಪ್ಸಿಕಂ ಬೆಳೆದು ಬದುಕನ್ನು ಸಿಹಿಯಾಗಿಸಿಕೊಂಡಿದ್ದಾರೆ!

ಇನ್ನು ತಂದೆ ವೀರಶೆಟ್ಟಿ -ತಾಯಿ ಅನಿತಾ ಅವರ ಮಗಳೆ ಈ ಅದಿತಿ. ಬ್ಯಾಟಿಂಗ್- ಬೌಲಿಂಗ್- ಫೀಲ್ಡಿಂಗ್ ಹೀಗೆ ಆಲ್​ ರೌಂಡರಾಗಿ ಹೊರ ಹೊಮ್ಮಿದ್ದಾಳೆ. ಮಗಳ ಸಾಧನೆ ಗೆ ತಂದೆ ತಾಯಿಯೇ ಸ್ಪೂರ್ತಿ. ಚಿಕ್ಕ ವಯಸ್ಸಿನಲ್ಲಿಯೇ ಮಗಳ ಕ್ರಿಡಾಸಕ್ತಿಯನ್ನ ಗುರುತಿಸಿದ ಮಾತಾಪಿತರು ಅವಳನ್ನ ಕ್ರೀಡಾ ಶಾಲೆಗೆ ಸೇರಿಸಿದ್ದರು. ಇದೀಗ ಬಿಸಿಸಿಐ ನಡೆಸುವ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿರುವುದು ತಂದೆ ತಾಯಿಗೆ ಖುಷಿ ಕೊಟ್ಟಿದೆ.

ಗಡಿನಾಡಿನ ಕುವರಿ ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಆಲ್​ ರೌಂಡರ್ ಆಗಿದ್ದಾಳೆ. ಈ ಅದಿತಿ ಗಡಿ ಜಿಲ್ಲೆಯ ಅಪ್ಪಟ ಪ್ರತಿಭೆ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು ಜಿಲ್ಲೆಯ ಜನರಿಗೆ ಖುಷಿ ತಂದಿದೆ ಅನ್ನುತ್ತಾರೆ ಸ್ಥಳೀಯರು. ಹೀಗೆಯೇ ಇನ್ನಷ್ಟು ಪ್ರತಿಭೆಗಳು ಹೊರ ಬರಲಿ ಎನ್ನುತ್ತಾರೆ.

ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದವರೂ ಇದ್ದಾರೆ. ಹೀಗಾಗಿ ತಾನೂ ಕ್ರಿಕೆಟ್ ನಲ್ಲಿ ಹೆಸರು ಮಾಡಬೇಕು ಅನ್ನೋದು ಅದಿತಿ ಬಕ್ಕಾ ಅವರ ಅಭಿಲಾಷೆ. ಅದೇನೇ ಇರಲಿ ಗಡಿನಾಡಿನ ಮಣ್ಣಿನ ಮಗಳು ಬಿಸಿಸಿಐ ತಂಡಕ್ಕೆ ಆಯ್ಕೆಯಾಗಿರೋದು ಜಿಲ್ಲೆಯ ಜನರಿಗೆ ಸಂತೋಷ ತಂದಿದೆ. ಅದಿತಿಯ ಕ್ರಿಕೆಟ್ ಪಯಣ ಹೀಗೆಯೇ ಮುಂದುವರಿದು ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಲಿ ಎನ್ನುವುದು ನಮ್ಮ ನಿಮ್ಮೆಲ್ಲರ ಆಶಯ.

ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್

ಹೆಚ್ಚಿನ ಕ್ರಿಕೆಟ್​ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:05 am, Thu, 29 December 22