Success Story: ಬೀದರ್ ಇಸ್ಲಾಂಪುರದ ರೈತ ಕಲರ್ ಕಲರ್ ಕ್ಯಾಪ್ಸಿಕಂ ಬೆಳೆದು ಬದುಕನ್ನು ಸಿಹಿಯಾಗಿಸಿಕೊಂಡಿದ್ದಾರೆ!
ಸದಾ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ಇಸ್ಲಾಂಪುರ ಗ್ರಾಮದ ರೈತ ಅಮರನಾಥ್ ಮಾದರಿಯಾಗಿದ್ದಾರೆ. ಕೆಲಸ ಯಾವುದಾದರೇನು ಶ್ರದ್ದೆಯಿಂದ ಮಾಡಿದರೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ. ಅದನ್ನ ಮಾಡಿ ತೋರಿಸಿದ್ದಾರೆ ಈ ರೈತ.
ಕೃಷಿ ಎಂದರೆ ನಷ್ಟದ ಹಾದಿ ಎಂದು ವಲಸೆ ಹೋಗುತ್ತಿರುವ ರೈತರ ಸಂಖ್ಯೆಯೇ ಹೆಚ್ಚು. ಆದರೆ ಕೃಷಿಯಲ್ಲೂ ನಿರಂತರ ಗಳಿಕೆ ಸಾಧ್ಯ ಎಂಬುದನ್ನು ಇಲ್ಲಿನ ರೈತರೊಬ್ಬರು ಸಾಧಿಸಿ ತೋರಿಸಿದ್ದಾರೆ. ಒಂದು ಎಕರೆಯಷ್ಟು ಜಮೀನಿನಲ್ಲಿ ಪಾಲಿಹೌಸ್ ನಿರ್ಮಿಸಿಕೊಂಡು ಕಲರ್ ಕಲರ್ ಕ್ಯಾಪಿಸಿಕಂ ಬೆಳೆದು ಆದಾಯ ಗಳಿಸಿದ್ದಾರೆ. ಇಲ್ಲಿ ಬೆಳೆದ ಕ್ಯಾಪ್ಸಿಕಂ ರಾಜ್ಯದಲ್ಲಷ್ಟೇ ಅಲ್ಲಾ ನೆರೆಯ ತೆಲಂಗಾಣ-ಮಹಾರಾಷ್ಟ್ರ ರಾಜ್ಯಕ್ಕೂ ರವಾನೆ ಆಗುತ್ತಿದೆ. ನೆರಳು ಪರದೆಯಲ್ಲಿ ಕಲರ್ ಕಲರ್ ಕ್ಯಾಪ್ಸಿಕಂ (ದೊಣ್ಣೆ ಮೆಣಸಿನಕಾಯಿ -capsicum) ಬೆಳೆಸಿ ಆದಾಯ ಗಳಿಸುತ್ತಿರುವ ಈ ರೈತನ ಮೂಲವೃತ್ತಿ ಬ್ಯುಸಿನೆಸ್. ಆದರೂ, ಕೃಷಿಯಲ್ಲಿ ಮಾಡುತ್ತಿದ್ದಾರೆ ಚಮತ್ಕಾರ. ವರ್ಷಕ್ಕೆ ಮೂರು ಬೆಳೆ ಬೆಳೆದು ಗಳಿಸುತ್ತಿದ್ದಾರೆ ವರ್ಷಕ್ಕೆ ಲಕ್ಷ ಲಕ್ಷ ಹಣ. ಬರದ ನಾಡಿನಲ್ಲಿ ಬಂಗಾರದ ಬೆಳೆಬೆಳೆಯುತ್ತಿರುವ ರೈತನೀತ (success story). ಹೌದು ಗಡಿ ಜಿಲ್ಲೆ ಬೀದರ್ (Bidar) ಅಂದ್ರೆ ಸಾಕು ಮೊದಲಿಗೆ ನೆನಪಿಗೆ ಬರೋದು ಬರ ಬರ ಬರ…. ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಇಲ್ಲಿನ ರೈತರ ಗೋಳು ಹೇಳತೀರದು. ಜೊತೆಗೆ ಆಗಾಗ ಸಾಲದ ಬಾಧೆಗೆ ನೇಣಿಗೆ ಕೊರಳೊಡ್ಡುವ ಇಲ್ಲಿನ ರೈತರ ಗೋಳು ಜನಪ್ರತಿಧಿನಿಧಿಗಳಿಗೆ ಕೇಳಿಸೋದೆ ಇಲ್ಲ.
ಆದ್ರೆ ಇಲ್ಲೊಬ್ಬ ರೈತ ಇಂಥಾ ಹತ್ತಾರು ಸಮಸ್ಯೆಗಳ ಮಧ್ಯೆ ಒಂದು ಎಕರೆ ಜಮೀನಿನಲ್ಲಿ ನೆರಳು ಪರದೇ ಮೂಲಕ ಕ್ಯಾಪ್ಸಿಕಂ ಬೆಳೆದು ಈಗ ತಿಂಗಳಿಗೆ ಬರೋಬ್ಬರಿ ಐದರಿಂದ ಆರು ಲಕ್ಷ ಹಣ ಗಳಿಸುತ್ತಿದ್ದಾನೆ. ಅಷ್ಟೆ ಅಲ್ಲದೆ ಉನ್ನತ ದರ್ಜೆಯ ಸರಕಾರಿ ನೌಕರ ತೆಗೆದುಕೊಳ್ಳೋ ಸಂಬಳಕ್ಕಿಂತ ನಾನೇನು ಕಮ್ಮಿ ಇಲ್ಲ ಅನ್ನೋದನ್ನ ಸಾಬೀತು ಪಡಿಸಿದ್ದಾರೆ.
ಬೀದರ್ ತಾಲೂಕಿನ ಜನವಾಡ ಹೂಬಳ್ಳಿ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದ ರೈತ ಅಮರನಾಥ್ ಫುಲೇಕರ್ ಅವರು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಲಾಭ ಪಡೆದು 40 ಗುಂಟೆಯಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿಕೊಂಡು ಅಲ್ಲಿ ಕಲರ್ ಕ್ಯಾಪ್ಸಿಕಂ ಬೆಳೆಯುತ್ತಿದ್ದಾರೆ. ತಾಜಾ ಆಗಿ ಬೆಳೆ ನಾಟಿ ಮಾಡಿ 2 ತಿಂಗಳು ಕಳೆದಿದ್ದು, ಕ್ಯಾಪ್ಸಿಕಂ ಕಟಾವಿಗೆ ಬಂದಿದೆ. ಈ ಹಿಂದೆ, ಕೆಜಿಗೆ ನೂರು ರೂಪಾಯಿ ಯಂತೆ 10 ಟನ್ ಗೆ 2 ಲಕ್ಷದವರೆಗೆ ಹಣ ಗಳಿಸಿದ್ದಾರೆ. ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಅಲ್ಪಾವಧಿ ಬೆಳೆಗಳಾಗಿ ಕೆಂಪು, ಹಳದಿ, ಹಸಿರು ಕ್ಯಾಪ್ಸಿಕಂ ಬೆಳೆಯುವುದರ ಮೂಲಕ ಲಾಭ ಗಳಿಸಬಹುದು ಎಂಬುದು ಅವರ ಖಚಿತ ಅಭಿಪ್ರಾಯ.
ಅಮರನಾಂಥ್ ಫುಲೇಕರ್ ಅವರು ಮೂಲತಃ ವ್ಯಾಪಾರಿಯಾಗಿದ್ದು ವ್ಯಾಪಾರದ ಜೊತೆ ಜೊತೆಗೆ ಹೆಚ್ಚಿನ ಸಮಯವನ್ನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ತರಹೇವಾರಿ ಬೆಳೆಯನ್ನ ಬೆಳೆಯುವುದರ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಒಂದು ಎರಕೆಯಷ್ಟು ಪಾಲಿಹೌಸ್ ನಿರ್ಮಾಣ ಮಾಡಿದ್ದರಿಂದ ಪಾಲಿ ಹೌಸ್ ನಲ್ಲಿ ಬೆಳೆಯನ್ನ ಯಾವುದು ಬೆಳೆದರೆ ಉತ್ತಮ ಮತ್ತು ಯಾವ ಬೆಳೆಗೆ ರೋಗ ಬಾಧೆ ಕಡಿಮೆಯಿದೆ ಅನ್ನುವುದನ್ನ ನೋಡಿಕೊಂಡು ಇವರು ಬೆಳೆ ಬೆಳೆಯುತ್ತಾರೆ.
ಇದನ್ನೂ ಓದಿ:
Zucchini: ಭಾಲ್ಕಿ ತಾಲೂಕಿನ ಈ ರೈತ ವಿದೇಶಿ ಜುಕೀನಿ ತರಕಾರಿ ಬೆಳೆಸಿ ಸ್ಥಳೀಯವಾಗಿ ಮಾದರಿಯಾಗಿದ್ದಾರೆ! ಏನಿವರ ಸಾಧನೆ?
ಇನ್ನು ನೀರಿನ ಸಮಸ್ಯೆಯನ್ನ ಹೋಗಲಾಡಿಸುವ ಉದ್ದೇಶದಿಂದ ನೂರು ಅಡಿ ಸುತ್ತಳತೆಯ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ನೀರಿನ ಸಮಸ್ಯೆ ಇವರಿಗೆ ಬಾಧಿಸಿಲ್ಲ. ಅಮರನಾಂಥ್ ಫುಲೇಕರ್ ಅವರು ಯಾವುದೇ ಬೆಳೆಯನ್ನ ಬೆಳೆಯಬೇಕು ಅಂದರೆ ಆ ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಪಡೆದುಕೊಂಡು ಕಡಿಮೆ ಅವಧಿಗೆ ಹೆಚ್ಚಿನ ಲಾಭ ಕೊಡುವ ಬೆಳೆಯನ್ನ ಆಯ್ಕೆ ಮಾಡಿಕೊಂಡು, ಬೆಳೆಯುತ್ತಾರೆ.
ಇವರಿಗೆ ಇಂಟರ್ ನೆಟ್ ಬಗ್ಗೆ ಗೊತ್ತಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಕೃಷಿಯ ಬಗ್ಗೆ ಸಮಗ್ರ ಮಾಹಿತಿಯನ್ನ ಪಡೆದುಕೊಂಡು ಮೂರು ತಿಂಗಳಿಗೆ ಯಾವ ಬೆಳೆ ಬರುತ್ತದೆ ಅನ್ನುವುದನ್ನ ನೋಡಿಕೊಂಡು ಬೆಳೆ ನಾಟಿ ಮಾಡುತ್ತಾರೆ. ಈತನ ಸಾಧನೆಯನ್ನ ನೋಡಿದ ಗ್ರಾಮದ ಜನರು ಕೂಡಾ ನಾವು ಕೂಡಾ ಈತನಂತೆ ಆಗಬೇಕೆಂದು ಹಂಬಲಿಸುತ್ತಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಕೂಡಾ ಅಮರನಾಥ್ ಫುಲೇಕರ್ ಅವರ ಕೃಷಿ ಕಾಯಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಸರಕಾರದಿಂದ ಹಲವಾರು ಸೌಲಭ್ಯಗಳನ್ನ ಮಾಡಿಕೊಟ್ಟಿದ್ದಾರೆ.
ಒಟ್ಟಾರೆ ಸದಾ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ಇವರು ಮಾದರಿಯಾಗಿದ್ದಾರೆ. ಕೆಲಸಕ್ಕೆ ಬರೋ ಕೂಲಿ ಆಳುಗಳು ಕೂಡಾ ಇವರ ಕುಟುಂಬದ ಸದಸ್ಯರ ಜೊತೆ ಕೆಲಸ ಮಾಡುವುದರಿಂದ ಕೆಲಸದ ಹೊರೆ ಕಡಿಮೆಯಾಗುತ್ತಿದೆ. ಕೆಲಸ ಯಾವುದಾದರೇನು ಶ್ರದ್ದೆಯಿಂದ ಮಾಡಿದ್ದರೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ. ಅದನ್ನ ಮಾಡಿ ತೋರಿಸಿದ್ದಾರೆ ರೈತ ಅಮರನಾಥ್ ಫುಲೇಕರ್. ಒಂದೊಮ್ಮೆ ಇಲ್ಲಿಗೆ ಬಂದು ನೀವು ಭೇಟಿ ನೀಡಿ ಇದನ್ನ ನಿಮ್ಮ ಹೊಲದಲ್ಲಿ ಅಳವಡಿಸಿಕೊಂಡರೆ ಕಡಿಮೆ ಸಮಯದಲ್ಲೆ ಭರ್ಜರಿ ಲಾಭವನ್ನ ಪಡೆಯಬಹುದು.
ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.