Zucchini: ಭಾಲ್ಕಿ ತಾಲೂಕಿನ ಈ ರೈತ ವಿದೇಶಿ ಜುಕೀನಿ ತರಕಾರಿ ಬೆಳೆಸಿ ಸ್ಥಳೀಯವಾಗಿ ಮಾದರಿಯಾಗಿದ್ದಾರೆ! ಏನಿವರ ಸಾಧನೆ?

Courgette zucchini Jukani: ಕಡಿಮೆ ಬಂಡವಾಳದಲ್ಲಿ ಬೆಳೆಯುವ ಜುಕೀನಿ ತರಕಾರಿ ಬೆಳೆಯಿಂದ ರೈತ ಗೋರಕ್ ನಾಥ್ ಅವರಿಗೆ ಒಳ್ಳೆಯ ಲಾಭ ತಂದುಕೊಡುತ್ತಿದೆ . ಈ ಜುಕೀನಿ ನೋಡಲು ಸೌತೆಕಾಯಿ ತರ ಇರುವ ಒಂದು ಹಣ್ಣಿನ ಜಾತಿಗೆ ಸೇರಿದೆ.

Zucchini: ಭಾಲ್ಕಿ ತಾಲೂಕಿನ ಈ ರೈತ ವಿದೇಶಿ ಜುಕೀನಿ ತರಕಾರಿ ಬೆಳೆಸಿ ಸ್ಥಳೀಯವಾಗಿ ಮಾದರಿಯಾಗಿದ್ದಾರೆ! ಏನಿವರ ಸಾಧನೆ?
ಭಾಲ್ಕಿ ರೈತ ವಿದೇಶಿ ಜುಕೀನಿ ತರಕಾರಿ ಬೆಳೆಸಿ ಮಾದರಿಯಾಗಿದ್ದಾರೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 09, 2022 | 4:49 PM

ಆ ಜಿಲ್ಲೆಯ ರೈತರು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುತ್ತಲೆ ಇರುತ್ತಾರೆ. ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಇಲ್ಲಿನ ರೈತರ ಗೋಳು ಹೇಳತೀರದು. ಆಗಾಗ ಸಾಲದ ಬಾಧೆಯಿಂದಾಗಿ ನೇಣಿಗೆ ಕೊರಳು ಕೋಡೋ ಇಲ್ಲಿನ ರೈತರ ಗೋಳು ಯಾರಿಗೂ ಕೇಳಿಸೋದೆ ಇಲ್ಲ. ಆದ್ರೆ ಇಂತಹ ಹತ್ತಾರು ಸಮಸ್ಯೆಯ ನಡುವೆಯೂ ಇಲ್ಲೊಬ್ಬ ರೈತ ವಿದೇಶಿ ತಳಿಯ ಜುಕೀನಿ ತರಕಾರಿ ಬೆಳೆಸಿ, ಸೈ ಎನಿಸಿಕೊಂಡಿದ್ದಾರೆ.

ವಿದೇಶಿ ತಳಿಯ ಜುಕೀನಿ ಬೆಳೆಸಿ (Courgette zucchini Jukani) ಸೈ ಎಣಿಸಿಕೊಂಡಿದ್ದಾರೆ ಗಡಿ ಜಿಲ್ಲೆಯ ಬೀದರ್ ರೈತ. ಕಡಿಮೆ ಖರ್ಚು, ಕಡಿಮೆ ಶ್ರಮ, ಹೆಚ್ಚು ಆದಾಯದ ವಾಣಿಜ್ಯ ಕೃಷಿ ಇದಾಗಿದ್ದು, ತಾಳ್ಮೆ ಇದ್ದರೆ ಜುಕೀನಿ ತರಕಾರಿ ಕೃಷಿ ಯಶಸ್ಸು ಕಂಡರೆ ನಿರಂತರ ಆದಾಯ ನಿಶ್ಚಿತ ಎನ್ನುತ್ತಾರೆ. ಹೌದು ಎರಡು ರಾಜ್ಯದ ಗಡೀ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆ ಜಾಸ್ತಿ, ನೀರಾವರಿ ಸೌಲಭ್ಯವೂ ಅಷ್ಟಕಷ್ಟೆ. ನದಿಗಳು ಜಲಾಶಯಗಳು ಇಲ್ಲದಿದ್ದರೂ ಸಹ ಜಿಲ್ಲೆಯ ರೈತರು ಇದುವರೆಗೂ ಹೆದರದೆ ಕೃಷಿಯಿಂದ ಹಿಂದೆ ಸರಿದಿಲ್ಲ.

ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಅಂತ ಈ ಭಾಗದ ರೈತರು (Farmers) ಪದೇಪದೇ ಸಾಬೀತು ಮಾಡಿದ್ದಾರೆ. ಅದೆಂತಹ ಕಷ್ಟ ಎದುರಾದರೂ ಸಹ ಹೊಸ ತರಹದ ಬೆಳೆಬೆಳೆದು ಬೇರೆ ಭಾಗಗಳಿಗೂ ರಫ್ತು ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಹೊಸ ಬೆಳೆ ಬೆಳೆಯುವ ಮೂಲಕ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವ ಮೂಲಕ ಒಳ್ಳೆಯ ಆದಾಯ ಗಳಿಸುತ್ತಿದ್ದಾರೆ. ಬೀದರ್ ಜಿಲ್ಲೆಯ (Bidar) ಭಾಲ್ಕಿ ತಾಲೂಕಿನ (Bhalki taluk) ಹಾಲಗೋರ್ಟಾ ಗ್ರಾಮದ ಪ್ರಗತಿಪರ ರೈತ ಗೋರಕ್ ನಾಥ್ ಎಂಬುವವರು ಇದೇ ಮೊದಲ ಬಾರಿಗೆ ಜುಕೀನಿ ಅನ್ನೋ ವಿದೇಶಿ ತಳಿಯ ತರಕಾರಿ ಬೆಳೆ ಬೆಳೆದು ಗಮನ ಸೆಳೆದಿದ್ದಾರೆ.

ಕಡಿಮೆ ಬಂಡವಾಳದಲ್ಲಿ ಬೆಳೆಯುವ ಜುಕೀನಿ ತರಕಾರಿ ಬೆಳೆಯಿಂದ ರೈತ ಗೋರಕ್ ನಾಥ್ ಅವರಿಗೆ ಒಳ್ಳೆಯ ಲಾಭ ತಂದುಕೊಡುತ್ತಿದೆ . ಈ ಜುಕೀನಿ ನೋಡಲು ಸೌತೆಕಾಯಿ ತರ ಇರುವ ಒಂದು ಹಣ್ಣಿನ ಜಾತಿಗೆ ಸೇರಿದೆ. ಇದನ್ನು ತರಕಾರಿ ರೂಪದಲ್ಲಿ ಬಳಸಲಾಗುತ್ತದೆ. ಕೆಲವರು ಜುಕೀನಿ ಯನ್ನು ಸಾಂಬಾರು ಹಾಗೂ ಪಲ್ಯ ಮಾಡಿಕೊಂಡು ಸೇವಿಸುತ್ತಾರೆ. ಜುಕೀನಿ ಬೆಳೆ ಹಸಿರು ಹಾಗೂ ಹಳದಿ ಬಣ್ಣದಲ್ಲಿ ಲಭ್ಯವಿದ್ದು ಮಾರುಕಟ್ಟೆಯಲ್ಲಿ ಎರಡಕ್ಕೂ ಬೇಡಿಕೆ ಇದೆ ಎನ್ನುತ್ತಾರೆ ರೈತ ಅರವಿಂದ ಅವರು.

ಸದ್ಯ ಬೇರೆ ಬೆಳೆಗಳಿಗೆ ಹೋಲಿಸಿದರೆ ಜುಕೀನಿ ತರಕಾರಿ ಬೆಳೆ ಅಲ್ಪಾವಧಿ ಬೆಳೆಯಾಗಿದೆ. ಸಸಿ ನಾಟಿ ಮಾಡಿದ 30 ರಿಂದ 40 ದಿನಗಳೊಳಗೆ ಫಸಲು ಬಿಡಲು ಶುರುವಾಗುತ್ತೆ. ನಿಗದಿತ ಕಾಲಮಿತಿಯಲ್ಲಿ ಅಂದ್ರೆ ಕೇವಲ ಒಂದು ತಿಂಗಳ ಕಾಲ ಮಾತ್ರ ಫಸಲು ನೀಡುತ್ತದೆ. ರೈತರು ಬೇರೆ ಬೆಳೆಯಂತೆ ಕಷ್ಟಪಡಬೇಕಾಗಿಲ್ಲ. ಯಾಕಂದ್ರೆ ಸುಲಭವಾಗಿ ಜುಕೀನಿ ಬೇಸಾಯ ಮಾಡಬಹುದು. ಜುಕೀನಿ ತರಕಾರಿ ಬೆಳೆ ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿ ಬೆಳೆಯುವ ಬೆಳೆಯಾಗಿದ್ದು ಪ್ರತಿ ಒಂದು ಎಕರೆಗೆ 40 ಸಾವಿರ ಖರ್ಚು ಬರುತ್ತದೆ. ಒಂದು ಎಕರೆಗೆ ಏನಿಲ್ಲ ಅಂದರೂ 10-15 ಕಾಯಿ ಬೆಳೆಯಬಹುದು.

ಅಬ್ಬಬ್ಬಾ ಅಂದರೆ ಜುಕೀನಿ ಮೂರು ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತದೆ. ಬೀಜ ಬಲಿತರೆ ಮುಗೀತು ಅಂದ್ರೆ ಕಾಯಿ ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದಲೇ ರೈತರು 15 ರಿಂದ 25 ಸೆಂಟಿ ಮೀಟರ್ ಇರುವಾಗಲೇ ಕೊಯ್ಲು ಮಾಡಬೇಕಾಗಿದೆ. ಜುಕಿನಿಯನ್ನು ತರಕಾರಿಯಾಗಿ ಸಾಂಬಾರ್ ಮಾಡಲು ಬಳಸಿದರೆ, ಕೆಲವರು ಬ್ರೆಡ್, ಕೇಕ್, ಸಲಾಡ್ ಹಾಗೂ ಮಾಂಸದ ತಿನಿಸುಗಳಲ್ಲಿ ಬಳಸುತ್ತಾರೆ.

A farmer in Bhalki taluk in Bidar grows Courgette zucchini Jukani succesfully

ಜುಕಿನಿ ಕಾಯಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯಿದ್ದು ಕೆಜಿಗೆ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಜುಕೀನಿಗೆ ಚೆನ್ನೈ ಮತ್ತು ಬೆಂಗಳೂರಿನ ಮಾಲ್​​ಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಹಾಗಾಗಿ ವ್ಯಾಪಾರಸ್ಥರು ತೋಟಕ್ಕೆ ಬಂದು ಖರೀದಿ ಮಾಡಿ ಕೊಂಡೊಯ್ಯುತ್ತಾರೆ. ಇದರಿಂದ ಸಾಗಾಣಿಕೆ ವೆಚ್ಚ ಮತ್ತು ಮಧ್ಯವರ್ತಿಗಳಿಗೆ ನೀಡುವ ಕಮಿಷನ್ ರೈತನಿಗೆ ಉಳಿಯುತ್ತದೆ.

ಇದು ಎಲ್ಲಾ ಕಡೆಗಳಲ್ಲೂ ಲಭ್ಯವಿಲ್ಲ. ಹಾಗಾಗಿ ರೈತರು ಇದರ ಬೀಜವನ್ನು ತಂದು ಅದನ್ನು ಸಸಿ ಮಾಡಿ ತೋಟಗಳಲ್ಲಿ ನಾಟಿ ಮಾಡಿ ಬಳಸಿಕೊಳ್ಳಬೇಕು. ಇನ್ನು ಈ ಜುಕೀನಿ ತರಕಾರಿ ದೊಡ್ಡ ದೊಡ್ಡ ಹೊಟೇಲ್ ಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದ್ದು ಇನ್ನೂ ಕೆಲವರಿಗೆ ಈ ಜುಕೀನಿ ತರಕಾರಿ ಬಗ್ಗೆ ಅಷ್ಟೇನೊ ಗೊತ್ತಿಲ್ಲ ಎಂದು ತೋಟಗಾರಿಕೆ ಇಲಾಕೆ ಅಧಿಕಾರಿ ವಿಶ್ವನಾಥ್ ಹೇಳುತ್ತಾರೆ.

ಒಂದು ಎಕರೆ ಜಮೀನಿನಲ್ಲಿ ಬೆಳೆದಿರುವ ಜುಕೀನಿ ತರಕಾರಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆಯಲಾಗಿದೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆ ಬೆಳೆಯುವ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಕಳೆದ ಎರಡು ದಶಕದಿಂದ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಇವರು ಜಿಲ್ಲೆ ಹಾಗೂ ರಾಜ್ಯದ ರೈತರಿಗೆ ಮಾದರಿಯಾಗಿ ನಿಂತಿದ್ದಾರೆ.

ಕಡಿಮೆ ನೀರನ್ನ ಬಳಸಿಕೊಂಡು ಹತ್ತಾರು ಎಕರೆ ನೀರಾವರಿ ಮಾಡುವುದು ಹೇಗೆ ಅನ್ನುವುದನ್ನ ಈ ಕುಟುಂಬ ತೋರಿಸಿಕೊಟ್ಟಿದೆ. ಒಟ್ಟಾರೆ ಸದಾ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ಇವರು ಮಾದರಿಯಾಗಿದ್ದಾರೆ. ಕೆಲಸ ಯಾವುದಾದರೇನು ಶ್ರದ್ದೆಯಿಂದ ಮಾಡಿದ್ದರೆ ಇನ್ನೊಬ್ಬರಿಗೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ, ಅದನ್ನ ಮಾಡಿ ತೋರಿಸಿದ್ದಾರೆ ರೈತ ಗೋರಕ್ ನಾಥ್. (ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್)

Also Read: ಎಲ್ಲ ಕಡೆ ಸೋಲುಂಡು, ಜವಾರಿ ಕೋಳಿ ಸಾಕಾಣಿಕೆ ಉದ್ಯಮಕ್ಕೆ ಕೈಹಾಕಿದ ರೈತನ ಸಕ್ಸಸ್​ ಸ್ಟೋರಿ ಇದು!