ಕರಿಮಣಿ ಮಾಲೀಕ ನೀನಲ್ಲ.. ವರನ ಬಿಟ್ಟು ಪ್ರಿಯಕರನೊಂದಿಗೆ ತಾಳಿ ಕಟ್ಟಿಸಿಕೊಂಡ ವಧು
ಮಂಗಳ ವಾದ್ಯ ಮೊಳಗಿತ್ತು, ಧಾರಾ ಮುಹೂರ್ತಕ್ಕಾಗಿ ಶಾಸ್ತ್ರಗಳು ನೆರವೇರಿತ್ತು, ಮುತ್ತೈದೆಯರು ಹರಸಿ ಹಾರೈಸಿಯೂ ಆಗಿತ್ತು, ಇನ್ನೇನು ತಾಳಿಕಟ್ಟಲು ವರ ಮಂಗಳ ಸೂತ್ರ ಕೈಗೆತ್ತಿಕೊಂಡಿದ್ದ, ಆದರೆ ವಧು ಮಾತ್ರ ಮದುವೆಗೆ ನಿರಾಕರಿಸಿದ್ದಳು. ತಾನು ಮತ್ತೊಬ್ಬನನ್ನು ಪ್ರೀತಿಸುವುದಾಗಿ ಹೇಳಿದ್ದಳು. ಇದೀಗ, ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹಾಕಿದ್ದರೆ ಏನದು ಟ್ವಿಸ್ಟ್? ವಿವರ ಇಲ್ಲಿದೆ.

ಹಾಸನ, ಮೇ 23: ತಾಳಿ ಕಟ್ಟುವ ವೇಳೆ ನಂಗೆ ಮದುವೆ ಬೇಡ ಎಂದಿದ್ದ ವಧು ಕಡೆಗೂ ತನ್ನ ಪ್ರಿಯಕರನ ಜೊತೆ ವಿವಾಹವಾಗಿದ್ದಾರೆ. ತನ್ನ ಪ್ರಿಯಕರ ರಘು ಜೊತೆ ಪಲ್ಲವಿ (ಮದುವೆ ಬೇಡ ಅಂತ ನಿರಾಕರಿಸಿದ್ದ ವಧು) ವಿವಾಹವಾಗಿದ್ದಾರೆ. ಹಾಸನದ (Hassan) ಆದಿಚುಂಚನಗಿರಿ ಕಲ್ಯಾಣಮಂಟಪದಲ್ಲಿರುವ ಗಣಪತಿ ದೇವಾಲಯದಲ್ಲಿ ಪಲ್ಲವಿ ಹಾಗೂ ರಘು ಪೋಷಕರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಪಲ್ಲವಿ ಪತಿ ರಘು ಹಾಸನ ತಾಲೂಕಿನ ಬಸವನಹಳ್ಳಿ ನಿವಾಸಿಯಾಗಿದ್ದಾರೆ.
ಏನಿದು ಪ್ರಕರಣ
ಹಾಸನ ಹೊರವಲಯ ಬೂವನಹಳ್ಲಿಯ ಪಲ್ಲವಿ ಮತ್ತು ಆಲೂರು ತಾಲ್ಲೂಕಿನ ಸರ್ಕಾರಿ ಶಾಲೆಯ ಶಿಕ್ಷಕ ನಡುವೆ ವಿವಾಹ ನಿಶ್ಚಯವಾಗಿತ್ತು. ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ (ಮೇ.23) ಬೆಳಗ್ಗೆ 9 ಗಂಟೆಗೆ ವರ, ವಧು ಪಲ್ಲವಿಗೆ ತಾಳಿ ಕಟ್ಟಬೇಕಿತ್ತು. ಆದ್ರೆ, ತಾಳಿ ಕಟ್ಟುವ ವೇಳೆ ವಧು ಪಲ್ಲವಿ ತಲೆ ಅಲ್ಲಾಡಿಸಿ ನನಗೆ ಈ ಮದುವೆ ಬೇಡ ಎಂದಿದ್ದರು.
ತಾಳಿ ಕಟ್ಟೋ ಮುಹೂರ್ತಕ್ಕೂ ಮುನ್ನ ಯುವತಿಗೆ ಒಂದು ಫೋನ್ ಕರೆ ಬಂದಿತ್ತು. ಆಗ ವಧು ಪಲ್ಲವಿ ತಕ್ಷಣವೇ ನನಗೆ ಈ ಮದುವೆ ಬೇಡ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೆತ್ತವರು, ಸಂಬಂಧಿಕರು ಯಾರು ಏನೇ ಹೇಳಿದರು ಕೇಳದ ವಧು ಪಲ್ಲವಿ ರೂಂಗೆ ಹೋಗಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದರು.
ಇದನ್ನೂ ಓದಿ: ತಾಳಿ ಕಟ್ಟುವ ವೇಳೆ ಮದ್ವೆ ಬೇಡ ಎಂದ ವಧು, ಮದುಮಗ ಕಣ್ಣೀರು: ಹಾಸನದಲ್ಲಿ ಆಗಿದ್ದೇನು?
ತಾಳಿ ಕೈಯಲ್ಲಿ ಹಿಡಿದು ಮಧುಮಗ ಮಾಡಿದ ಮನವೊಲಿಕೆಗೂ ಪಲ್ಲವಿ ಮನಸ್ಸು ಕರಗಲಿಲ್ಲ. ವರ ಯಾಕೆ ಮದುವೆ ಬೇಡ ಎಂದು ವರ ಕೇಳಿದ್ದರು. ಕೊನೆಗೆ ಹಠ ಹಿಡಿದ ಬೆನ್ನಲ್ಲೇ ವರ ಕೂಡ ನನಗೂ ಮದುವೆ ಬೇಡ ಎನ್ನುತ್ತಾ ಕಣ್ಣೀರು ಹಾಕಿದ್ದರು. ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಸಹ ಕಣ್ಣೀರಿಟ್ಟಿದ್ದರು. ಕೊನೆಗೆ ಗೊತ್ತಾಗಿದ್ದು, ರಘು ಎಂಬಾತನನ್ನು ಪಲ್ಲವಿ ಪ್ರೀತಿಸುತ್ತಿರುವ ವಿಚಾರ. ಇದೀಗ, ಪಲ್ಲವಿ ತಾನು ಇಷ್ಟಪಟ್ಟ ಹುಡುಗನ ಜೊತೆಗೆನೇ ವಿವಾಹವಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 pm, Fri, 23 May 25