Agnipath Sena Bharti Rally: ಬೀದರ್ ಜಿಲ್ಲೆಯಲ್ಲಿ ಇಂದಿನಿಂದ ಅಗ್ನಿಪಥ್ ಸೇನಾ ಭರ್ತಿ ರ‍್ಯಾಲಿ
Agnipath Entry: ಬೀದರ್ ನಗರದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ. ಇದಕ್ಕೆ ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಒಟ್ಟು 70,357 ಯುವಕರು ನೊಂದಣಿ ಮಾಡಿಕೊಂಡಿದ್ದಾರೆ.
ಬೀದರ್: ಇಂದಿನಿಂದ ಡಿಸೆಂಬರ್ 22 ರವರೆಗೆ ಬೀದರ್ ನಲ್ಲಿ ಅಗ್ನಿಪಥ್ ಸೇನಾ ಭರ್ತಿ ರ‍್ಯಾಲಿ ನಡೆಯಲಿದೆ. ಇದರಲ್ಲಿ ರಾಯಚೂರು, ಕೊಪ್ಪಳ, ಕಲ್ಬುರ್ಗಿ, ಯಾದಗಿರಿ, ಬೆಳಗಾವಿ, ಬೀದರ್ ಯುವಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೀದರ್ ನಗರದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ. ಇದಕ್ಕೆ ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಒಟ್ಟು 70,357 ಯುವಕರು ನೊಂದಣಿ ಮಾಡಿಕೊಂಡಿದ್ದಾರೆ.
ಸಾಮಾನ್ಯ ಕೆಡರ್, ಟೆಕ್ನಿಕಲ್, ಕ್ಲರ್ಕ್, ಹೌಸ್ ಕಿಪರ್, ಬಾರ್ಬರ್, ಕುಕ್ ಸೈನಿಕ ಹುದ್ದೆಗಳ ನೇಮಕಾತಿಗಾಗಿ ಈ ರ‍್ಯಾಲಿ ನಡೆಯಲಿದೆ. ಅಗ್ನಿಪಥ್ ಯೋಜನೆಯಡಿ ನಡೆಯುತ್ತಿರುವ ಮೊದಲ ರ‍್ಯಾಲಿ ಇದಾಗಿದ್ದು, ಸಾಮಾನ್ಯ ಕೆಡರ್‌ನ 63,825 ಮತ್ತು ಇತರೆ ಕೆಡರ್‌ಗಳ 6550 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಭಾರತೀಯ ಸೇನೆ ನೇಮಕಾತಿ ವಿಭಾಗದ ಅಧಿಕಾರಿಗಳು ಕ್ರೀಡಾಂಗಣವನ್ನು ಎರಡು ದಿನಗಳ ಹಿಂದೆಯೇ ತಮ್ಮ ಸುಪರ್ದಿಗೆ ಪಡೆದು, ಶಿಸ್ತು ಮತ್ತು ವ್ಯವಸ್ಥಿತವಾಗಿ ರ‍್ಯಾಲಿ ನಡೆಸುತ್ತಿದ್ದು ಇಂದು ರಾಯಚೂರು ಜಿಲ್ಲೆಯ ಯುವಕರಿಗೆ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.
ಅಗ್ನಿಪಥ್ ನೇಮಕಾತಿ ರ‍್ಯಾಲಿಯಲ್ಲಿ ಅತಿ ಹೆಚ್ಚು ಬೆಳಗಾವಿ ಜಿಲ್ಲೆಯಿಂದ 50,646 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಇನ್ನುಳಿದಂತೆ ಬೀದರ 2772, ರಾಯಚೂರು 2049, ಕೊಪ್ಪಳ 3349, ಕಲ್ಬುರ್ಗಿ 3856 ಮತ್ತು ಯಾದಗಿರಿ ಜಿಲ್ಲೆಯಿಂದ 1153 ಅಭ್ಯರ್ಥಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ರಾಯಚೂರಿನಿಂದ ಬಂದಿದ್ದವರು ಸ್ಥಳೀಯ ನಿವಾಸಿ ಪ್ರಮಾಣ ಪತ್ರ ತರದಂತಾ ಶೇಕಡಾ 50 ರಷ್ಟು ಯುವಕರು ರ‍್ಯಾಲಿಯಿಂದ ಔಟ್ ಆಗಿದ್ದಾರೆ.
ಜಿಲ್ಲಾಡಳಿತ ವತಿಯಿಂದ ಸಕಲ ಸಿದ್ಧತೆ
ನಿತ್ಯ ಕನಿಷ್ಠ 4 ಸಾವಿರದಿಂದ ಗರಿಷ್ಠ 4,500 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾಗಲಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಬ್ಯಾರಿಕೇಡ್, ಶಾಮಿಯಾನ, ಕುಡಿಯುವ ನೀರು, ಶೌಚಾಲಯ ಹಾಗೂ ಸೇನಾ ನೇಮಕಾತಿ ರ‍್ಯಾಲಿಗೆ ಬೇಕಾಗುವ ಅಗತ್ಯ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗಾಗಿ ಶಿಕ್ಷಣ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ. ಹಾಘೂ ನಗರಸಭೆ, ಲೋಕೋಪಯೋಗಿ, ಕ್ರೀಡಾ, ಪೊಲೀಸ್ ಇಲಾಖೆ, ಶಿಕ್ಷಣ ಮತ್ತು ಸೈನಿಕ ಕಲ್ಯಾಣ ಇಲಾಖೆ ಸಿಬ್ಬಂದಿ ಸಹ ಸೇನಾ ನೇಮಕಾತಿ ರ‍್ಯಾಲಿಗೆ ಸಹಕಾರ ನೀಡಿವೆ.
ಗುರುದ್ವಾರದ ವತಿಯಿಂದ ರ‍್ಯಾಲಿಗೆ ಬರುವ ಅಭ್ಯರ್ಥಿಗಳಿಗಾಗಿ ಉಚಿತ ಊಟದ ವ್ಯವಸ್ಥೆ. ಕಡಿಮೆ ವೆಚ್ಚದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಡಿಸೆಂಬರ್ 5ರ ಬೆಳಿಗ್ಗೆ 3 ಗಂಟೆಯಿಂದ ಅಭ್ಯರ್ಥಿಗಳು ಕ್ರೀಡಾಂಗಣಕ್ಕೆ ಬರಲಿದ್ದಾರೆ. ಬೆಳಿಗ್ಗೆ 6ಕ್ಕೆ ರನ್ನಿಂಗ್ ಆರಂಭವಾಗಿ 8 ಗಂಟೆಗೆ ಮುಕ್ತಾಯವಾಗಲಿದೆ. ನಂತರ ಇತರೆ ಪ್ರಕ್ರಿಯೆಗಳು ನಡೆಯಲಿವೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:13 am, Mon, 5 December 22