
ಬೀದರ್, ಜುಲೈ 13: ಬೀದರ್ (Bidar) ಜಿಲ್ಲೆಯ ಭಾಲ್ಕಿ (Balki) ತಾಲೂಕಿನ ಸೇವಾನಗರ ತಾಂಡಾದ ಬಳಿ ದಟ್ಟವಾದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಪುರಾತನ ಅನಂತ ಪದ್ಮನಾಭ ದೇವಸ್ಥಾನ (Vishnu Temple) ಇದೆ. ದಟ್ಟವಾದ ಕಾಯ್ದಿಟ್ಟ ಅರಣ್ಯದಲ್ಲಿ ಮರೆಯಾಗಿದ್ದ ಈ ದೇವಸ್ಥಾನ ಮೂರು ವರ್ಷಗಳ ಹಿಂದೆಯಷ್ಟೇ ಪತ್ತೆಯಾಗಿದೆ. ಇಲ್ಲಿಗೆ ಬರುವ ಭಕ್ತರು ದೇವಸ್ಥಾನವನ್ನು ಅಭಿವೃದ್ಧಿ ಪಡಿಸಿದ್ದು, ದೇವಸ್ಥಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ಸೇವಾನಗರ ತಾಂಡಾದ ನಿವಾಸಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕಾಡಿಗೆ ಹೋಗಿದ್ದರು. ಕಾಡಿನಲ್ಲಿ ಒಂದು ದೊಡ್ಡ ಆಲದ ಮರ ಅವರಿಗೆ ಕಂಡಿದೆ. ಇದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯೋಚಿಸಿ ಮರದ ಬಳಿ ಹೋದಾಗ, ಅವರಿಗೆ ಪುರಾತನ ನೀರಿನ ಹೊಂಡ ಕಂಡಿದೆ.
ಅಲ್ಲಿಗೆ ಹೋಗಿ ಅಚ್ಚರಿಯಿಂದ ನೋಡಿದಾಗ ಹೊಂಡಲ್ಲಿ ನೀರು ತುಂಬಿ ತುಳುಕುತ್ತಿತ್ತಂತೆ. ಈ ನೀರು ಕುಡಿದ ಮೇಲೆ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಹೋಯಿತಂತೆ. ನಂತರ, ವಿಷ್ಣು ಹಾವಿನ ಮೇಲೆ ಮಲಗಿರುವ ಭಂಗಿಯಲ್ಲಿ ಮೂರ್ತಿ ಕಂಡು ಅದಕ್ಕೆ ನಮಸ್ಕಾರ ಮಾಡಿದ್ದಾರೆ. ನಂತರ, ಇಲ್ಲಿ ದೇವಸ್ಥಾನವಿರುವುದು ಊರಿನವರಿಗೆ ಗೊತ್ತಾಗಿದೆ. ಪ್ರತಿನಿತ್ಯ ಗ್ರಾಮಸ್ಥರು ಅನಂತ ಪದ್ಮನಾಭ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ದೇವಸ್ಥಾನದಲ್ಲಿರುವ ವಿಷ್ಣುವಿನ ಮೂರ್ತಿ ಹಾಗೂ ನೀರಿನ ಹೊಂಡ ಸುಮಾರು ಒಂದು ಸಾವಿರ ವರ್ಷದಷ್ಟು ಹಳೆಯದು ಎಂದು ಹೇಳಲಾಗುತ್ತಿದೆ. ಈ ದೇವಸ್ಥಾನ ಇರುವ ಸುತ್ತಮುತ್ತಲಿನ ಬೆಟ್ಟ ಹಲವಾರು ವಿಸ್ಮಯಗಳನ್ನೊಳಗೊಂಡಿದೆ ಎಂದು ಇಲ್ಲಿನ ಭಕ್ತರು ಹೇಳುತ್ತಾರೆ. ಅಮಾವಾಸ್ಯೆ ಹಾಗೂ ಹುಣ್ಣಿಯಂದು ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಈ ದೇವಸ್ಥಾನದ ಸುತ್ತ ಅರಣ್ಯ ಪ್ರದೇಶವಿದೆ. ದೇವಸ್ಥಾನದಲ್ಲಿರುವ ನೀರಿನ ಹೋಂಡದಲ್ಲಿನ ನೀರು ಇದುವರೆಗೂ ಬತ್ತಿರುವ ಉದಾಹರಣೆ ಇಲ್ಲ. ಈ ನೀರನ್ನು ಪ್ರತಿನಿತ್ಯ ಕುಡಿಯುವುದರಿಂದ ದೇಹದಲ್ಲಿರುವ ಖಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ನೀರಿನ ಹೊಂಡ ಸುಮಾರು ಹದಿನೈದು ಅಡಿಯಷ್ಟು ಆಳವಾಗಿದ್ದು, ವರ್ಷವಿಡೀ ಇಲ್ಲಿನ ನೀರು ಬತ್ತುವುದಿಲ್ಲ.
ಇದನ್ನೂ ಓದಿ: ಬೀದರ್ ಬಡ ರೈತನ ಕೈ ಹಿಡಿದ ನರೇಗಾ: ಬರಡು ಭೂಮಿಯಲ್ಲಿ ತೋಡಿದ್ದ ಬಾವಿಯಲ್ಲಿ ಉಕ್ಕಿದ ಗಂಗೆ
ಕಾಡು ಒಂದು ರೀತಿಯ ಕುತೂಹಲ ಮೂಡಿಸುವ, ಪ್ರಕೃತಿ ಸೌಂದರ್ಯದಿಂದ ತುಂಬಿರುವ ತಾಣವಾಗಿದೆ. ಪುರಾತನ ಕಾಲದ ಹೊಂಡದಲ್ಲಿರುವ ವಿಷ್ಣುವಿ ಮೂರ್ತಿ, ಭಕ್ತರನ್ನ ಸೆಳೆಯುತ್ತಿದೆ. ದಟ್ಟ ಕಾಡಿನ ನಡುವೆ ಶತಮಾನದಿಂದಲೂ ಇಲ್ಲಿ ಅನಂತ ಪದ್ಮನಾಭ ದೇವರು ನೆಲೆಸಿದ್ದಾನೆ. ಇಲ್ಲಿನ ಹೊಂಡವು ಬರಗಾಲದಲ್ಲಿಯೂ ಬತ್ತದೆ ಇರುವುದು ವಿಶೇಷವಾಗಿದೆ.
Published On - 4:30 pm, Sun, 13 July 25