ಮೃತ PSI ಅವಿನಾಶ್ 2 ವರ್ಷದಿಂದ IAS ತಯಾರಿಯಲ್ಲಿದ್ದರು, ಇಂದು ಅಂತ್ಯಕ್ರಿಯೆ ಆಯ್ತು
ಐಪಿಎಸ್ ಆಗೋ ಕನಸು ಕಂಡಿದ್ದ ಅವಿನಾಶ್ ಯಾದವ್ ದೆಹಲಿಯಲ್ಲಿ ಎರಡು ವರ್ಷಗಳ ಕಾಲ ಕೊಚಿಂಗ್ ಸಹ ಪಡೆದುಕೊಂಡಿದ್ದರು. ಯುಪಿಎಸ್ಸಿ ಪರೀಕ್ಷೆ ತಯ್ಯಾರಿಗಾಗಿ ದೆಹಲಿಯಲ್ಲಿ ಕೋಚಿಂಗ್ ತೆಗೆದುಕೊಂಡಿದ್ದರು.
ಬೀದರ್: ಆಂಧ್ರಪ್ರದೇಶದ ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತದಲ್ಲಿ(Andhra Pradesh Accident) ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರೋಳಾವಾಡಿ ಗ್ರಾಮದ ಪಿಎಸ್ಐ ಅವಿನಾಶ್(PSI Avinash) ಮೃತಪಟ್ಟಿದ್ದು ರೋಳಾವಾಡಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗನನ್ನು ಕಳೆದುಕೊಂಡ ಪೋಷಕರು ವಿಧಿಯಾಟಕ್ಕೆ ಕಣ್ಣೀರಿಡುತ್ತಿದ್ದಾರೆ. ಇಂದು ಮುಂಜಾನೆ ಹುಟ್ಟೂರಿಗೆ ಪಾರ್ಥಿವ ಶರೀರ ಆಗಮಿಸಿದ್ದು ರೋಳಾವಾಡಿ ಗ್ರಾಮದ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿದೆ. ಸಕಲ ಸರ್ಕಾರಿ ಗೌರವದೊಂದಿಗೆ PSI ಅಂತ್ಯಸಂಸ್ಕಾರ ನೆರವೇರಿದೆ. ಬಸವಕಲ್ಯಾಣ ಶಾಸಕ ಶರಣು ಸಲಗರ ಸೇರಿ ಸಾವಿರಾರು ಗ್ರಾಮಸ್ಥರು ಭಾಗಿಯಾಗಿದ್ರು.
2016ರಲ್ಲಿ ಪಿಎಸ್ಐ ಆಗಿ ನೇಮಕಗೊಂಡಿದ್ದ ಅವಿನಾಶ್, ಬೆಂಗಳೂರಿನ ಜ್ಜಾನ ಭಾರತಿ ಪೊಲೀಸ್ ಠಾಣೆಯಲ್ಲಿ ಮೊದಲ ಪೊಸ್ಟಿಂಗ್ ಪಡೆದಿದ್ದರು. ಮುಂದೆ ಐಪಿಎಸ್ ಆಗೋ ಕನಸು ಕಂಡಿದ್ದ ಅವಿನಾಶ್ ಯಾದವ್ ದೆಹಲಿಯಲ್ಲಿ ಎರಡು ವರ್ಷಗಳ ಕಾಲ ಕೊಚಿಂಗ್ ಸಹ ಪಡೆದುಕೊಂಡಿದ್ದರು. ಯುಪಿಎಸ್ಸಿ ಪರೀಕ್ಷೆ ತಯ್ಯಾರಿಗಾಗಿ ದೆಹಲಿಯಲ್ಲಿ ಕೋಚಿಂಗ್ ತೆಗೆದುಕೊಂಡಿದ್ದರು. ಅಷ್ಟರಲ್ಲೇ ಪಿಎಸ್ಐ ನೇಮಕವಾದ ಬಳಿಕ ದೆಹಲಿಯಿಂದ ಹಿಂದುರುಗಿದ್ದರು. ಸದ್ಯ ವಾರದ ಹಿಂದೆಯಷ್ಟೇ ಶಿವಾಜಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ರು. ಅಲ್ಲದೆ ಮದುವೆ ಸಿದ್ಧತೆಯಲ್ಲಿದ್ದ ಅವಿನಾಶ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಪಿಎಸ್ಐ ದೀಕ್ಷಿತ್ ಆರೋಗ್ಯ ವಿಚಾರಿಸಿದ ಕಮಿಷನರ್ ಪ್ರತಾಪ್ ರೆಡ್ಡಿ
ಇನ್ನು ಮತ್ತೊಂದೆಡೆ ಇದೇ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಪಿಎಸ್ಐ ದೀಕ್ಷಿತ್ ಅವರ ಆರೋಗ್ಯ ವಿಚಾರಿಸಲು ಬೆಂಗಳೂರಿನ ಹಾಸ್ಮ್ಯಾಟ್ ಆಸ್ಪತ್ರೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ್ದಾರೆ. ಪಿಎಸ್ಐ ದೀಕ್ಷಿತ್ ಬಲಗೈ ಮುರಿದಿದ್ದು ಸರ್ಜರಿ ಮಾಡಲಾಗಿದೆ. ಸದ್ಯ ದೀಕ್ಷಿತ್ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು ಸಮಸ್ಯೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಪಿಎಸ್ಐ ದೀಕ್ಷಿತ್ ತಂದೆ ಲಿಂಗೇಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ದೀಕ್ಷಿತ್ ಚೆನ್ನಾಗಿದ್ದಾನೆ. ಯಾವುದೇ ಸಮಸ್ಯೆ ಇಲ್ಲ. ಕೈ ಮುರಿದಿತ್ತು ಬೆಳ್ಳಗ್ಗೆ ಅಪರೇಷನ್ ಮಾಡಿದ್ದಾರೆ. ವೈದ್ಯರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಚಿತ್ತೂರಿಗೆ ಹೋಗುವಾಗ ಈ ಘಟನೆ ನಡೆದಿದೆ. ಅವತ್ತಿನ ದಿನ ನನಗೆ ಫೋನ್ ಮಾಡಿ ಚಿತ್ತೂರಿಗೆ ಹೋಗ್ತಾ ಇದೀನಿ ಅಂತ ಹೇಳಿದ್ದ. ನಾನು ಆಲ್ ದಿ ಬೆಸ್ಟ್ ಅಂತಾನು ಹೇಳಿದ್ದೆ. ಆದ್ರೆ ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ನಮಗೆ ನಿನ್ನೆ ಬೆಳ್ಳಗ್ಗೆ 4 ಗಂಟೆಗೆ ವಿಷಯ ಗೊತ್ತಾಯ್ತು. ಡ್ರೈವರ್ ನಿದ್ದೆಗೆ ಜಾರಿದ್ದೆ ಈ ಘಟನೆಗೆ ಕಾರಣ. ನನ್ನ ಮಗ ಬದುಕಿದ್ದಾನಲ್ಲ ಅಂತ ಖುಷಿಯಾದ್ರೆ, ಮತ್ತೊಂದು ಕಡೆ ಸಹದ್ಯೋಗಿಗಳು ಸತ್ತೋದ್ರಲ್ಲ ಅಂತ ದುಃಖ ಆಗ್ತಿದೆ ಎಂದು ಕಣ್ಣೀರು ಹಾಕಿದ್ದಾರೆ.
ಘಟನೆ ಹಿನ್ನೆಲೆ
ಆಂಧ್ರದಿಂದ ಬೆಂಗಳೂರಿಗೆ ಮೂಟೆಗಟ್ಟಲೇ ಗಾಂಜಾ ಸಪ್ಲೈ ಆಗ್ತಿದೆ ಅನ್ನೋ ಮಾಹಿತಿ ಶಿವಾಜಿನಗರ ಪೊಲೀಸರಿಗೆ ಸಿಕ್ಕಿತ್ತು. ರಾತ್ರೋರಾತ್ರಿ ಬಾಡಿಗೆ ಕಾರು ಪಡೆದು 8 ಸಿಬ್ಬಂದಿ ಸ್ಟೇಷನ್ನಿಂದ ಹೊರಟಿದ್ರು. ಆದ್ರೆ, ಆಂಧ್ರ ಬಳಿಯ ಚಿತ್ತೂರು ಸಮೀಪದ ಪಿ.ಪೂತಾಲ್ಲಪಟ್ಟು ಬಳಿ ಐವರು ಸಿಬ್ಬಂದಿಯಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಅಪಘಾತದ ರಭಸಕ್ಕೆ 29 ವರ್ಷದ ಪಿಎಸ್ಐ ಅವಿನಾಶ್, 26 ವರ್ಷದ ಕಾನ್ಸ್ಟೇಬಲ್ ಅನಿಲ್ ಮುಳಿಕ್ ಮತ್ತು 28 ವರ್ಷದ ಡ್ರೈವರ್ ಮ್ಯಾಕ್ಸ್ ವೆಲ್ ಸ್ಥಳದಲ್ಲೇ ಸಾವನ್ನಪ್ಪಿದ್ರು. ಪಿಎಸ್ಐ ದೀಕ್ಷಿತ್ ಮತ್ತು ಕಾನ್ಸ್ ಟೇಬಲ್ ಶರಣಬಸವಗೆ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತ ವಿಷ್ಯ ಕೇಳಿ ಇಡೀ ನಗರದ ಪೊಲೀಸ್ ಸಿಬ್ಬಂದಿ ಆಘಾತಗೊಂಡಿದ್ದಾರೆ.
Published On - 2:51 pm, Mon, 25 July 22