ಚಳಿಗೆ ನಲುಗಿದ ಗಡಿ ಜಲ್ಲೆ ಬೀದರ್; ಶೀತಗಾಳಿ ಮಿಶ್ರಿತ ವಾತಾವರಣದಿಂದ ಜನ ಹೈರಾಣು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 21, 2023 | 6:37 PM

ಸದಾಕಾಲ ಬಿಸಿಲಿನ ಕಾವು ನೋಡುತ್ತಿದ್ದ ಬೀದರ್​ ಜಿಲ್ಲೆಯ ಜನರು ಮೈಕೊರೆಯುವ ಥಂಡಿಗೆ ತತ್ತರಿಸಿದ್ದಾರೆ. ಕಳೆದೊಂದು ವಾರದಿಂದ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು, ಜನರು ಮನೆಯಿಂದ ಹೊರಬರುವುದಾದರೆ ಟೋಪಿ, ಸ್ವೆಟ್ಟರ್‌, ಜರ್ಕಿನ್‌ ಹಾಕಿಕೊಂಡೇ ಹೊರ ಬರುತ್ತಿದ್ದಾರೆ.

ಚಳಿಗೆ ನಲುಗಿದ ಗಡಿ ಜಲ್ಲೆ ಬೀದರ್; ಶೀತಗಾಳಿ ಮಿಶ್ರಿತ ವಾತಾವರಣದಿಂದ ಜನ ಹೈರಾಣು
ಬೀದರ್​
Follow us on

ಬೀದರ್​, ಡಿ.21: ಎರಡು ರಾಜ್ಯದ ಗಡೀ ಹಂಚಿಕೊಂಡಿರುವ ಗಡೀ ಜಿಲ್ಲೆ ಬೀದರ್‌(Bidar) ನಲ್ಲೀಗ ಮೈ ಕೊರೆಯುವ ಚಳಿ ಶುರುವಾಗಿದೆ. ಬೆಳಗ್ಗೆ ಬೇಗ ಎದ್ದೇಳಲು ಬಿಡದಷ್ಟು ಥಂಡಿ ವಾತಾವರಣವಿದೆ. ಕಳೆದ ನಾಲ್ಕು ದಿನದಿಂದ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್​ವರೆಗೆ ತಾಪಮಾನ ದಾಖಲಾಗುತ್ತಿದೆ. ಚಳಿಗಾಲ ಆರಂಭದಲ್ಲಿಯೇ ಇಷ್ಟು ಪ್ರಮಾಣದಲ್ಲಿ ಚಳಿ ದಾಖಲಾಗುತ್ತಿರುವುದು ಮುಂದೆ ಹೇಗೆ ಎಂದು ಜನ ಚಿಂತೆಯಲ್ಲಿದ್ದಾರೆ. ರಾಜ್ಯದಲ್ಲಿ ಈ ಸಲ ಮಳೆಯ ಕೊರೆತೆ ಇತ್ತು. ಆದರೆ, ಬೀದರ್​ನಲ್ಲಿ ಮಾತ್ರ ವಾಡಿಕೆಯಷ್ಟು ಮಳೆಯಾಗಿದ್ದು, ಜಿಲ್ಲೆಯ ಏಕೈಕ ಕಾರಂಜಾ ಡ್ಯಾಂ ಕೂಡ ತುಂಬಿದೆ. ಇದರ ಜೊತೆಗೆ ಕೆರೆಗಳಲ್ಲಿಯೂ ನೀರು ಇದ್ದು, ಹೀಗಾಗಿ ಮೈ ನಡುಗಿಸುವ ಚಳಿ ಶುರುವಾಗಿದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ.

ಸ್ವೆಟ್ಟರ್‌ ಇಲ್ಲದೆ ಮನೆಯಿಂದ ಹೊರ ಬಾರದಂತಹ ವಾತಾವರಣ

ಬೆಳಗ್ಗೆ ಮಕ್ಕಳು ಹೊರಗಡಗೆ ಸ್ವೆಟ್ಟರ್‌ ಇಲ್ಲದೆ ಹೋಗಲಾಗುತ್ತಿಲ್ಲ. ಜನರೂ ಟೋಪಿ, ಸ್ವೆಟ್ಟರ್‌, ಜರ್ಕಿನ್‌ ಹಾಕಿಕೊಂಡೇ ಮನೆಯಿಂದ ಹೊರ ಬರುತ್ತಿದ್ದಾರೆ. ಸಂಜೆ ವೇಳೆಯೂ ಸ್ವೆಟ್ಟರ್‌ ಇಲ್ಲದೆ ಮನೆಯಿಂದ ಹೊರ ಬಾರದಂತಹ ವಾತಾವರಣ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿ ಜಾಸ್ತಿಯಿದ್ದು, ಈ ಚಳಿ ಓಲ್ಡ್ ಏಜ್​ನವರಿಗೆ ಸ್ವಲ್ಪ ತೊಂದರೆ ಕೊಡುತ್ತಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಅತಿಯಾದ ಮೈ ಕೊರೆಯುವ ವಾತಾವರಣದಿಂದ ಕೆಲಸಕ್ಕೆ ತೆರಳುವ ಸ್ಥಳಿಯರಿಗೆ, ವ್ಯಾಪಾರಿಗಳಿಗೆ ಅನಾನುಕೂಲವಾಗಿದೆ. ಚುಮು ಚುಮು ಚಳಿಗೆ ಮನೆ ಬಿಟ್ಟು ಹೊರ ಬಾರದ ನಗರ ಪ್ರದೇಶದ ಜನ, ಚಳಿಗೆ 9 ಗಂಟೆಯ ಒಳಗಡೆ ಗೂಡು ಸೇರುತ್ತಿದ್ದಾರೆ.

ಇದನ್ನೂ ಓದಿ:Karnataka Weather: ರಾಜ್ಯದ ಹಲವೆಡೆ ಹೆಚ್ಚಿದ ಚಳಿ, ಮಳೆ ಮುನ್ಸೂಚನೆಯಿಲ್ಲ

ಕೆಲವು ಕಡೆಗಳಲ್ಲಿ ದಟ್ಟ ಇಬ್ಬನಿಯಿಂದಾಗಿ ಬೈಕ್ ಸವಾರರು, ವ್ಯಾಯಾಮ ಮಾಡುವರು ಸೇರಿದಂತೆ ಜನರು ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ. ಚಳಿಗೆ ಜನರು ರಸ್ತೆ ಬದಿ ಬೆಂಕಿ ಕಾಯಿಸುತ್ತ ಕುಳಿತಿರುವ ದೃಶ್ಯ ಈಗ ಸರ್ವೇ ಸಾಮಾನ್ಯವಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಒಂದೆರಡು ದಿನದಲ್ಲಿ ಚಳಿಯ ಪ್ರಮಾಣ ಏರಿಕೆಯಾಗಿದೆ. ಜನರು ಈ ಚಳಿಗೆ ನಡುಗುತ್ತಿದ್ದು, ಚಳಿ ಕಡಿಮೆ ಮಾಡಿಕೊಳ್ಳಲು ರಸ್ತೆ ಬದಿ ಬೆಂಕಿ ಕಾಯಿಸುತ್ತಿದ್ದಾರೆ. ಮಳೆರಾಯನ ಶಾಪದಿಂದ ಮಳೆಯಿಲ್ಲದೆ ಕೊರಗುತ್ತಿದ್ದ ಜಿಲ್ಲೆಯ ಜನರು, ಈ ವರ್ಷ ಬರಪುರ ಮಳೆಯಾಗಿದೆ. ಇದರ ಜೊತೆಗೆ ಕಳೆದ ಎರಡು ದಿನದಿಂದ ಚಳಿಯಿಂದ ನಡುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಡಿಸೆಂಬರ್‌ 25ರ ನಂತರ ಹೆಚ್ಚು ಚಳಿ ಎಂದ ಹವಾಮಾನ ಇಲಾಖೆ

ಇನ್ನೂ ಆಗಾಗ ಬಿಳುವ ದಟ್ಟವಾದ ಇಬ್ಬನಿಯಿಂದಲೂ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಚಳಿಗಾಲ ಆರಂಭದಲ್ಲಿಯೇ ಇಷ್ಟೂ ಪ್ರಮಾಣದ ಚಳಿ ಕಂಡು ಬಂದಿದ್ದು, ಇದೀಗ ಜಿಲ್ಲೆಯ ವಿವಿಧೆಡೆ ಕನಿಷ್ಠ ತಾಪಮಾನಕ್ಕೆ ಇಳಿಯುತ್ತಿದೆ. ಇದು ಚಳಿಯ ಆರಂಭವಷ್ಟೇ. ಡಿಸೆಂಬರ್‌ ಅಂತ್ಯ ಅಥವಾ ಜನವರಿ ತಿಂಗಳ ಮೊದಲ ವಾರದಲ್ಲಿ ಕನಿಷ್ಠ 10 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಲಿದೆ. ಈ ಬಾರಿ ಮಳೆ ಕಡಿಮೆ ಇರುವುದರಿಂದ ಸದ್ಯಕ್ಕೆ ಅಂದುಕೊಂಡಷ್ಟು ಚಳಿ ಇಲ್ಲ. ಡಿಸೆಂಬರ್‌ 25ರ ನಂತರ ಚಳಿ ಹೆಚ್ಚಿಗೆ ಇರಲಿದೆ ಎನುತ್ತಿದ್ದಾರೆ ಹವಾಮಾನ ಇಲಾಖೆ ಅಧಿಕಾರಿಗಳು.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ