ಬೀದರ್: ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸೋಲಾರ್ ಚಾಲಿತ ಸೈಕಲ್ ತಯಾರಿಸಿದ್ದಾರೆ. ಬೈಕ್ ಹಾಗೆ ಕಾಣಿಸುವ ಸೈಕಲ್ ಅನ್ನು ಅಖೀಲಾ, ಉಜಾಲಾ, ವೈಷ್ಣವಿ ಹಾಗೂ ಸಚಿನ್ ರಾಥೋಡ್ ತಯಾರಿಸಿದ್ದಾರೆ. ಇವರು ಬೀದರ್ ನಗರದ ಪ್ರತಿಷ್ಠಿತ ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಫೈನಲ್ ಇಯರ್ನಲ್ಲಿ ಓದುತ್ತಿದ್ದಾರೆ.
ಈ ನಾಲ್ಕು ಜನ ವಿದ್ಯಾರ್ಥಿಗಳು ಸೇರಿಕೊಂಡು ಕಾಲೇಜಿನಲ್ಲಿ ಪ್ರೋಜೆಕ್ಟ್ ಮಾಡಿದ್ದಾರೆ. ಅದೇ ಸೋಲಾರ್ ಬೈಸಿಕಲ್. ಈ ಬ್ಯಾಟರಿ ಚಾಲಿತ ಸೋಲಾರ್ ಬೈಸಿಕಲ್ನ ವಿಶೇಷತೆಗಳೆಂದರೆ ಸೋಲಾರ್ನಿಂದ ಬೈಕ್ ಓಡಾಡುತ್ತದೆ. ಜೊತೆಗೆ ಬಿಸಿಲು ಇಲ್ಲದೆ ಇದ್ದಾಗ ಈ ಬೈಸಿಕಲ್ಗೆ ಅಳವಡಿಸಿರುವ ಬ್ಯಾಟರಿಗಳನ್ನು ಚಾರ್ಜ್ ಮಾಡಿಯೂ ಸಹ ಓಡಾಡಿಸಬಹುದು. ಒಂದು ವೇಳೆ ಸೋಲಾರ್ ಹಾಗೂ ಬ್ಯಾಟರಿಗಳು ಕೂಡಾ ಕೈಕೊಟ್ಟರೂ ಕಾಲಿನಿಂದ ತುಳಿದು ಸೈಕಲ್ ಚಲಾಯಿಸಿಕೊಂಡು ಮನೆಗೆ ಬಂದು ತಲುಪಬಹುದೆಂದು ವಿದ್ಯಾರ್ಥಿ ಸಚಿನ್ ರಾಥೋಡ್ ತಿಳಿಸಿದ್ದಾರೆ.
ಈ ಸೈಕಲ್ ತಯಾರಿಸಲು ವಿದ್ಯಾರ್ಥಿಗಳು 15 ದಿನಗಳ ವರೆಗೆ ಸಮಯ ತೆಗೆದುಕೊಂಡಿದ್ದು, ಒಟ್ಟು 25 ಸಾವಿರ ರೂಪಾಯಿ ಹಣ ಖರ್ಚುಮಾಡಿದ್ದಾರೆ. ಇದಕ್ಕೆ ಬೇಕಾದ ಕಚ್ಚಾ ವಸ್ತುಗಳುನ್ನು ಹೈದರಾಬಾದ್ ಹಾಗೂ ಗುಜರಿ ಅಂಗಡಿಗಳಿಂದ ಪಡೆದು ಸೈಕಲ್ ತಯಾರಿಸಿದ್ದಾರೆ. ಇನ್ನೂ ಇದಕ್ಕೆ ಅಳವಡಿಸಿರುವ ಸೋಲಾರ್, 12 ಓಲ್ಟ್, 25 ವ್ಯಾಟ್ ಸಾಮರ್ಥ್ಯವಿದೆ. ಜೊತೆಗೆ 12 ಓಲ್ಟ್ನ ನಾಲ್ಕು ಬ್ಯಾಟರಿಗಳನ್ನು ಸೈಕಲ್ಗೆ ಅಳವಡಿಸಲಾಗಿದೆ.
ಇನ್ನೂ ಈ ಬ್ಯಾಟರಿಗಳನ್ನು 8 ಗಂಟೆಗಳ ಕಾಲ ಚಾರ್ಜ್ ಮಾಡಿದರೆ, 25 ಕಿಲೋಮೀಟರ್ ವರೆಗೂ ಓಡಾಡಬಹುದು ಜೊತೆಗೆ ಸೋಲಾರ್ ಅಳವಡಿಸಿರುವ ಕಾರಣ ಸೈಕಲ್ ಚಾಲನೆಯಾಗುತ್ತಲೇ ಬ್ಯಾಟರಿಗಳು ಕೂಡಾ ಚಾರ್ಜ್ ಆಗುತ್ತವೆ. ಹೀಗಾಗಿ ಎಷ್ಟು ಕಿಲೋಮೀಟರ್ ಓಡಿದರೂ ತೋಂದರೆಯಾಗುವುದಿಲ್ಲ. ಇನ್ನೋಂದು ವಿಶೇಷವೆಂದರೆ ಈ ಸೈಕಲ್ ಎಂತಹ ರಸ್ತೆಯಲ್ಲಿಯೂ ಕೂಡಾ ಸಲೀಸಾಗಿ ಓಡಾಡುತ್ತದೆ.
ಸದ್ಯ ಇವರು ತಯಾರಿಸಿದ ಸೈಕಲ್ ನೋಡಲು ದಿನಕ್ಕೆ ಹತ್ತಾರು ಕಾಲೇಜು ವಿದ್ಯಾರ್ಥಿ ಬಂದು ಹೋಗುತ್ತಿದ್ದಾರೆ. ಅಷ್ಟೊಂದು ಸೊಗಸಾಗಿ ಈ ಸೈಕಲ್ ಕಾಣುತ್ತದೆ. ಒಂದು ಕ್ವಿಂಟಲ್ ಭಾರ ಹೊತ್ತುಕೊಂಡು ಸಾಗಬಲ್ಲ ಸಾಮರ್ಥ್ಯ ಇದಕ್ಕಿದೆ. ಗಂಟೆಗೆ 30 ಕಿಲೋಮಿಟರ್ ವೇಗದಲ್ಲಿ ಓಡುವ ಬ್ಯಾಟರಿ ಚಾಲಿತ ಈ ಸೈಕಲ್ ಇಡೀ ಕಾಲೇಜಿನಲ್ಲಿ ಮನ್ನಣೆ ಪಡೆದಿದೆ.
ಒಂದು ಟನ್ನಷ್ಟು ಬಾರ ಹೊತ್ತುಕೊಂಡು ಚಲಿಸುವ ಸೈಕಲ್ ತಯಾರಿಸುವುದು ಸಾಮಾನ್ಯ ಮಾತಲ್ಲ. ಆಸಕ್ತಿ, ತಾಳ್ಮೇ, ಏಕಾಗ್ರತೆ ವಹಿಸಿ ಸಾಕಷ್ಟು ಯೋಜನೆ ಮಾಡಿಕೊಂಡು ತಯಾರಿಸಬೇಕಾಗುತ್ತದೆ. ಕಾಲೇಜು ದಿನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದುಕೊಂಡ ಈ ವಿದ್ಯಾರ್ಥಿಗಳು ಸೋಲಾರ್ ಚಾಲಿತ ಸೈಕಲ್ ತಯಾರಿಸಿದ್ದು, ಕಾಲೇಜಿನಲ್ಲಿ ಮಾದರಿ ವಿದ್ಯಾರ್ಥಿಗಳಾಗಿ ಗುರುತಿಸಿಕೊಂಡಿದ್ದಾರೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ:
ಅಪ್ಪನಿಗೆ ಬ್ಯಾಟರಿ ಚಾಲಿತ ಬೈಕ್, ಮಗನಿಗೆ ಜೀಪ್; ಲಾಕ್ಡೌನ್ ಸಮಯವನ್ನು ಸದುಪಯೋಗ ಮಾಡಿಕೊಂಡ ಬೀದರ್ ವ್ಯಕ್ತಿ
ಎಂಟು ತೆಂಗಿನ ಮರದ ನಂಟು ಕಲ್ಪನೆಯೊಂದಿಗೆ ನೂತನ ಪ್ರಯೋಗ; ಮಾರುಕಟ್ಟೆಗೆ ಕಲ್ಪರಸ ಬಿಡುಗಡೆಗೊಳಿಸಲು ಉಡುಪಿಯಲ್ಲಿ ಸಿದ್ಧತೆ