ಬೀದರ್​ನಲ್ಲೂ ವಕ್ಫ್​ ಗುಮ್ಮ: ಜಮೀನು ಉಳಿಸಿಕೊಳ್ಳಲು 11 ವರ್ಷದಿಂದ ಹೋರಾಟ

| Updated By: ರಮೇಶ್ ಬಿ. ಜವಳಗೇರಾ

Updated on: Oct 31, 2024 | 7:35 PM

ಕರ್ನಾಟಕದಲ್ಲಿ ವಕ್ಫ್ ಬೋರ್ಡ್‌ನಿಂದ ಭೂ ಕಬಳಿಕೆ ಆರೋಪ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಜಿಲ್ಲೆಯಿಂದ ಜಿಲ್ಲೆಗೆ ವ್ಯಾಪಿಸುತ್ತಿದೆ. ನಮ್ಮ ಜಮೀನಿಗೂ ಕುತ್ತು ಬರುತ್ತಾ ಎಂದು ರೈತರು ಆತಂಕಗೊಂಡಿದ್ದಾರೆ. ಭೂಮಿ ಕೈ ತಪ್ಪಿಹೋಗುತ್ತೆಂಬ ಭಯದಿಂದ ಗಲಾಟೆಗಳೂ ಆಗುತ್ತಿವೆ. ಇನ್ನು ಬೀದರ್​ನಲ್ಲಿ ವಕ್ಫ್ ಬೋರ್ಡ್​ನಿಂದ ತಮ್ಮ ಜಮೀನು ಉಳಿಸಿಕೊಳ್ಳಲು ರೈತರು ಒಂದು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಬರೋಬ್ಬರಿ 11 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಸಹ ಇನ್ನೂ ಬಗೆಹರಿದಿಲ್ಲ.

ಬೀದರ್​ನಲ್ಲೂ ವಕ್ಫ್​ ಗುಮ್ಮ: ಜಮೀನು ಉಳಿಸಿಕೊಳ್ಳಲು 11 ವರ್ಷದಿಂದ ಹೋರಾಟ
ವಕ್ಫ್ ಬೋರ್ಡ್
Follow us on

ಬೀದರ್, (ಅಕ್ಟೋಬರ್ 31): ಒಂದು ದಶಕದ ಹಿಂದೆ ಆ ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಆಸ್ತಿ ಮೊಹರು ಬಿದ್ದಿದೆ. ಪಹಣಿಯಲ್ಲಿನ ವಕ್ಫ್ ಬೋರ್ಡ್ ಹೆಸರು ತೆಗೆಸಲು ಒಂದು ದಶಕದಿಂದ ಹೋರಾಟ ಮಾಡುತ್ತಲೇ ಇದ್ದಾರೆ. ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ನಾಯಕರ ಮನೆಗೆ ಅಲೆದು ಸುಸ್ತಾಗಿರುವ ರೈತ ನ್ಯಾಯಕ್ಕಾಗಿ ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ. 360 ರೈತರ 960 ಎಕರೆಯಷ್ಟು ರೈತರ ಆಸ್ತಿ ವಕ್ಫ್ ಬೋರ್ಡ್ ಹೆಸರಿಗೆ ವರ್ಗಾವಣೆಯಾಗಿದೆ. ಇದರಿಂದ ಆತಂಕಗೊಂಡಿರುವ ರೈತರು ತಮ್ಮ ಜಮೀನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಹನ್ನೊಂದು ವರ್ಷವಾದರೂ ಬೀದರ್ ರೈತರ ವಕ್ಫ್ ಸಮಸ್ಯೆ ನೀಗಿಲ್ಲ.

ಒಂದು ದಶಕದಿಂದ ಹೋರಾಟ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪಹಣಿಯಲ್ಲಿ ವಕ್ಫ್ ಬೋರ್ಡ್ ಆಸ್ತಿ ಆವಾಂತರ ಭುಗಿಲೆದ್ದ ಬೆನ್ನಲ್ಲೇ ಬೀದರ್ ತಾಲೂಕಿನ ಚಟ್ಟನಳ್ಳಿ ಗ್ರಾಮದ ಖಾಜಾ ನಗರದಲ್ಲಿ ದಶಕದ ಹಿಂದೆಯೇ ಇಂಥ ಘಟನೆ ನಡೆದಿದೆ. ಸುಮಾರು 360 ರೈತರು ಒಂದು ದಶಕದಿಂದಲೂ ಹೋರಾಟ ಮಾಡುತ್ತಿದ್ದರೂ ಯಾವುದೇ ಫಲ ಕೊಟ್ಟಿಲ್ಲ. 2013ರಲ್ಲಿ ಬೀದರ ತಾಲೂಕಿನ ಚಟನಳ್ಳಿ ಗ್ರಾಮದ 960 ಎಕರೆ ಕೃಷಿ ಭೂಮಿಗೆ ವಕ್ಫ್ ಆಸ್ತಿಯ ಮೊಹರು ಬಿದ್ದಿದೆ. ಅವತ್ತಿನಿಂದ ಇವತ್ತಿನವರೆಗೂ ಕೂಡ ಈ ಗ್ರಾಮದ ರೈತರು ತಮ್ಮ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ನ ಹೆಸರು ತೆಗೆಸಲು ಹೋರಾಟ ಮಾಡುತ್ತಿದ್ದರೂ ಇಂದಿನವರೆಗೂ ಏನು ಪ್ರಯೋಜನವಾಗಿಲ್ಲ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಸೇರಿದಂತಾ ಹಾಲಿ ಹಾಗೂ ಮಾಜೀ ಸಚಿವರಿಗೆ ಮನವಿ ಮಾಡಿದ್ದಾರೆ. ಇನ್ನೂ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ಬೆಳಗಾವಿಯ ಸುವರ್ಣ ಸೌಧ ಮುಂದೆ ಪ್ರತಿಭಟನೆ ಮಾಡಿದ್ದರೂ ಸಹ ರೈತರ ಪಹಣಿಯಲ್ಲಿನ ವಕ್ಫ್ ಬೋರ್ಡ್ ಹೆಸರು ಇಂದಿನವರೆಗೂ ತೆಗೆಯಲು ಸಾಧ್ಯವಾಗಿಲ್ಲ. ಇಲ್ಲಿನ ರೈತರು ತಲೆ ತಲಾಂತರದಿಂದಲೂ ಇದೇ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಈಗ ದಿಕ್ಕು ತೋಚದಂತಾಗಿದೆ. ತಮ್ಮ ಭೂಮಿ ಉಳಿಸಿಕೊಳ್ಳಲು ಹಗಲಿರುಳು ರಾಜಕಾರಣಿಗಳ ಮನೆಯ ಮುಂದೆ ಅಲೆಯುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ನಮ್ಮ ಪಹಣಿಯಲ್ಲಿ ನಮ್ಮ ಹೆಸರು ಸೇರಿಸಿ ಎಂದು ಸರಕಾರಕ್ಕೆ ಇಲ್ಲಿನ ರೈತರು ಮನವಿ ಮಾಡುತ್ತಿದ್ದಾರೆ.

ನೋಟೀಸ್ ಕೊಡದೇ ಭೂಮಿ ವಕ್ಫ್​ ಬೋರ್ಡ್ ಹೆಸರಿಗೆ

ಇನ್ನೂ ಚಟನಳ್ಳಿ ಗ್ರಾಮದಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಕೃಷಿ ಭೂಮಿಯಿದೆ. ಅದರಲ್ಲಿನ ಸುಮಾರು 960 ಎಕರೆಯಷ್ಟು ಭೂಮಿಯನ್ನ ವಕ್ಫ್ ಬೋರ್ಡ್ ರೈತರಿಗೆ ಯಾವುದೇ ರೀತಿಯ ನೋಟೀಸ್ ಕೊಡದೇ ತನ್ನ ಹೆಸರಿಗೆ ಮಾಡಿಕೊಂಡಿದೆ. ಇದರಿಂದಾಗಿ ರೈತರು ಆ ಜಮೀನು ಅಡವಿಟ್ಟು ಯಾವುದೇ ರೀತಿಯ ಬ್ಯಾಂಕ್ ಲೋನ್ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಕಷ್ಟ ಇದೆ ಎಂದು ಜಮೀನು ಕೂಡಾ ಮಾರಾಟ ಮಾಡುದಂತ ಸ್ಥಿತಿಯಲ್ಲಿ ಇದ್ದಾರೆ.

ಏಕಾಏಕಿ 2013ರಲ್ಲಿ ಜಮೀನು ವಕ್ಫ್ ಬೋರ್ಡ್​ಗೆ ವರ್ಗ

ಇನ್ನೂ ವಕ್ಫ್ ಬೋರ್ಡ್ ರೈತರ ಜಮೀನನ್ನ ತನ್ನ ಹೆಸರಿಗೆ ಮೊಹರು ಹಾಕಿಸುವ ಮುನ್ನ ರೈತರಿಗೆ ಯಾವುದೇ ನೋಟೀಸ್ ಕೊಟ್ಟಿಲ್ಲ. ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿಸಿದ ನಂತರವೂ ಸಹ ಒಂದು ಯಾವುದೇ ನೋಟೀಸ್ ಕೊಟ್ಟಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇನ್ನೂ ನೂರಾರು ವರ್ಷದಿಂದ ಈ ಜಮೀನನ್ನ ರೈತರು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಉಳುವವನೆ ಭೂಮಿಯ ಒಡೆಯ ಎಂದು ಕಾನೂನು ಜಾರಿಯಾದ ಬಳಿಕ ಈ ಜಮೀನು ಆಯಾ ರೈತರ ಹೆಸರಿಗೆ ವರ್ಗಾ ವಣೆಯಾಗಿದೆ. ಆ ಅಂದಿನಿಂದಲೂ ಆ ಜಮೀನಿಗೆ ಕಟ್ಟಬೇಕಾದ ಶುಲ್ಕವನ್ನ ಕಾಲ ಕಾಲಕ್ಕೆ ಸರಕಾರಕ್ಕೆ ಕಟ್ಟುತ್ತಲೇ ಬಂದಿದ್ದಾರೆ. ಆದರೆ ಏಕಾಏಕಿ 2013 ರಲ್ಲಿ ಈ ಜಮೀನು ಹೇಗೆ ವಕ್ಫ್ ಬೋರ್ಡ್ ಹೆಸರಿಗೆ ವರ್ಗಾವಣೆಯಾಯಿತು ಎಂದು ರೈತರು ಆಕ್ರೋಶಗೊಂಡಿದ್ದಾರೆ.

ಸರಕಾರ ಆದಷ್ಟು ಬೇಗ ನಮ್ಮ ಪಹಣಿಯಲ್ಲಿ ನಮ್ಮ ಹೆಸರು ಸೇರಿಸಿ ವಕ್ಫ್ ಬೋರ್ಡ್ ಹೆಸರನ್ನ ತೆಗೆಯಿರಿ ಎಂದು ಮನವಿ ಮಾಡುತ್ತಿದ್ದಾರೆ. ಬಿಜಾಪುರದಲ್ಲಿ ಇದೆ ರೀತಿ ಸಮಸ್ಯೆಯಾಗಿದೆ. ಆ ರೈತರ ಪಹಣಿಯಲ್ಲಿನ ಹೆಸರು ತೆಗೆದಿದ್ದಾರಂತೆ ನಾವು ಹತ್ತು ವರ್ಷದಿಂದ ಈ ಸಮಸ್ಯೆಯಿದೆ. ನಮ್ಮ ಪಹಣಿಯಲ್ಲಿನ ವಕ್ಫ್ ಬೋರ್ಡ್ ಹೆಸರು ತೆಗೆಯಿರಿ ಎಂದು ರೈತರು ಮನವಿ ಮಾಡುತ್ತಿದ್ದಾರೆ.

ವಕ್ಫ್​ ಭೂ ವಿವಾದ ಮೂಲಕ ಚಟನಳ್ಳಿಯ ರೈತರು ಕಳೆದ 10 ವರ್ಷಗಳಿಂದ ವಕ್ಫ್ ಭೀತಿಯಿಂದ ನಲುಗಿದ್ದಾರೆ. ವಕ್ಫ್ ಸಚಿವರು ಸಿಎಂ ಇತ್ತ ಕಡೆಗೆ ಗಮನಹರಿಸಿ ಸರಿಪರಿಸುವ ಕೆಲಸವನ್ನ ಮಾಡಬೇಕಾಗಿದೆ.

ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ