ಅರ್ಧ ಶತಕ ಕಳೆದರೂ ಈ ಜನಾಂಗಕ್ಕೆ ಸಿಕ್ಕಿಲ್ಲ ಸೂರು! ಮೂಲಭೂತ ಹಕ್ಕುಗಳಿಲ್ಲದೆ ಗುಡಿಸಲಲ್ಲಿ ಬದುಕುತ್ತಿದೆ ಹಕ್ಕಿಪಿಕ್ಕಿ ಸಮುದಾಯ

ಬೀದರ್‌ನ ಔರಾದ್‌ನಲ್ಲಿ ಹಕ್ಕಿಪಿಕ್ಕಿ ಅಲೆಮಾರಿ ಸಮುದಾಯವು ದಶಕಗಳಿಂದ ಸೂರುರಹಿತರಾಗಿ ಗುಡಿಸಲುಗಳಲ್ಲಿ ವಾಸಿಸುತ್ತಿದೆ. 50 ವರ್ಷಗಳಿಂದ ಮನೆ, ವಿದ್ಯುತ್, ನೀರು, ಶೌಚಾಲಯವಿಲ್ಲದೆ ಬವಣೆ ಪಡುತ್ತಿದ್ದು, ಮಕ್ಕಳ ಆರೋಗ್ಯ, ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದೆ. ವಸತಿ ಹಕ್ಕಿಗಾಗಿ ಸಮುದಾಯದವರು ಪ್ರತಿಭಟನೆ ನಡೆಸಿದ್ದು, ಸರ್ಕಾರ ಕೂಡಲೇ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.

ಅರ್ಧ ಶತಕ ಕಳೆದರೂ ಈ ಜನಾಂಗಕ್ಕೆ ಸಿಕ್ಕಿಲ್ಲ ಸೂರು! ಮೂಲಭೂತ ಹಕ್ಕುಗಳಿಲ್ಲದೆ ಗುಡಿಸಲಲ್ಲಿ ಬದುಕುತ್ತಿದೆ ಹಕ್ಕಿಪಿಕ್ಕಿ ಸಮುದಾಯ
ಅರ್ಧ ಶತಕ ಕಳೆದರೂ ಈ ಜನಾಂಗಕ್ಕೆ ಸಿಕ್ಕಿಲ್ಲ ಸೂರು!
Edited By:

Updated on: Jan 20, 2026 | 1:57 PM

ಬೀದರ್, ಜನವರಿ 20: ದಶಕಗಳಿಂದ ಸ್ವಂತ ಸೂರಿಲ್ಲದೆ ಗುಡಿಸಲಿನಲ್ಲೇ ಬದುಕು ಸಾಗಿಸುತ್ತಿರುವ ಅಲೆಮಾರಿ ಹಕ್ಕಿಪಿಕ್ಕಿ ಜನಾಂಗದ ಸ್ಥಿತಿ ಮಾನವೀಯತೆ ಪ್ರಶ್ನಿಸುವಂತಾಗಿದೆ. ಬೀದರ್ (Bidar) ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕುಟುಂಬಗಳು ಕಳೆದ 50 ವರ್ಷಗಳಿಂದ ಚಿಕ್ಕ ಚಿಕ್ಕ ಗುಡಿಸಲುಗಳಲ್ಲಿ ವಾಸಿಸುತ್ತಿವೆ. ಚಳಿ, ಮಳೆ, ಬೇಸಿಗೆ ಎನ್ನದೆ ಅದೇ ಗುಡಿಸಲುಗಳು ಇವರಿಗೆ ಏಕೈಕ ಆಸರೆಯಾಗಿವೆ.

ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು

ಮತದಾರರ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಇದ್ದರೂ ಈ ಕುಟುಂಬಗಳಿಗೆ ಇದುವರೆಗೂ ಸ್ವಂತ ಮನೆ ಅಥವಾ ನಿವೇಶನ ದೊರಕಿಲ್ಲ. ವಿದ್ಯುತ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಚರಂಡಿ ದುರ್ವಾಸನೆ, ಅಸ್ವಚ್ಛ ಪರಿಸರದಿಂದಾಗಿ ಮಕ್ಕಳು ಮತ್ತು ಮಹಿಳೆಯರು ನಿತ್ಯವೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪೌಷ್ಠಿಕ ಆಹಾರದ ಕೊರತೆಯಿಂದ ಅನೇಕ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.

ಮರಗೆಮ್ಮ ದೇವಿಯ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಭಿಕ್ಷೆ ಬೇಡುವುದೇ ಈ ಸಮುದಾಯದ ಪ್ರಧಾನ ಜೀವನೋಪಾಯವಾಗಿದೆ. ಬಡತನದ ಕಾರಣ ಸಾವಿರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಸಮುದಾಯದಲ್ಲಿ ಶಿಕ್ಷಣ ಪಡೆದವರೇ ಇಲ್ಲ ಎನ್ನುವುದು ಮತ್ತೊಂದು ಕಟುವಾಸ್ತವ. ಸೂರಿಗಾಗಿ ಹಲವು ಬಾರಿ ಪುರಸಭೆ, ತಹಶಿಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ಸ್ಥಳೀಯರ ಆರೋಪ. ವಸತಿ ಹಕ್ಕು ಆಗ್ರಹಿಸಿ ಇಂದು ಔರಾದ್ ತಹಶಿಲ್ದಾರ್ ಕಚೇರಿ ಮುಂದೆ ಹಕ್ಕಿಪಿಕ್ಕಿ ಜನಾಂಗ ಪ್ರತಿಭಟನೆ ನಡೆಸಿದ್ದು, ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂಬ ಆಗ್ರಹ ಹೆಚ್ಚುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.