ಬೀದರ್​​: ಹೈವೇನಲ್ಲಿ ಸಿನಿಮೀಯ ಶೈಲಿಯಲ್ಲಿ ದರೋಡೆ; 23 ಲಕ್ಷ ರೂ ಮೌಲ್ಯದ ಚಿನ್ನಾಭರಣ ಲೂಟಿ

ಬೀದರ್​ ಜಿಲ್ಲೆಯ ಬಸವಕಲ್ಯಾಣದ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಸಿನಿಮೀಯ ಶೈಲಿಯಲ್ಲಿ ದರೋಡೆಯೊಂದು ನಡೆದಿದ್ದು, 23 ಲಕ್ಷ ರೂ ಮೌಲ್ಯದ ಚಿನ್ನಾಭರಣ ಸೇರಿದಂತೆ ನಗದು ದೋಚಿ ದರೋಡೆಕೋರರು ಪರಾರಿ ಆಗಿದ್ದಾರೆ. ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಪತ್ತೆಗೆ ಶೋಧ ನಡೆದಿದೆ.

ಬೀದರ್​​: ಹೈವೇನಲ್ಲಿ ಸಿನಿಮೀಯ ಶೈಲಿಯಲ್ಲಿ ದರೋಡೆ; 23 ಲಕ್ಷ ರೂ ಮೌಲ್ಯದ ಚಿನ್ನಾಭರಣ ಲೂಟಿ
ಬಸವಕಲ್ಯಾಣ ನಗರ ಪೊಲೀಸ್ ಠಾಣೆ
Updated By: ಗಂಗಾಧರ​ ಬ. ಸಾಬೋಜಿ

Updated on: Nov 20, 2025 | 3:19 PM

ಬೀದರ್, ನವೆಂಬರ್​ 20: ಜಿಲ್ಲೆಯ ಬಸವಕಲ್ಯಾಣ ನಗರದ ರಾಷ್ಟ್ರೀಯ ಹೆದ್ದಾರಿ 65ರ ಮಂಠಾಳ ಕ್ರಾಸ್ ಹತ್ತಿರ ದರೋಡೆ (robbery) ನಡೆದಿದೆ. ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಜೀವ ಬೆದರಿಕೆ ಹಾಕಿ ಬರೋಬ್ಬರಿ 23 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು (Gold) ದರೋಡೆಕೋರರು ಲೂಟಿ ಮಾಡಿ ಪರಾರಿಯಾಗಿರುವಂತಹ ಘಟನೆ ನಡೆದಿದೆ. ಸದ್ಯ ದೂರು ದಾಖಲಿಸಿಕೊಂಡು ಬಸವಕಲ್ಯಾಣ ನಗರ ಠಾಣೆ ಪೊಲೀಸರು ದರೋಡೆಕೋರರ ಪತ್ತೆಗೆ ಜಾಲ ಬೀಸಿದ್ದಾರೆ.

ನಡೆದದ್ದೇನು?

ಬುಧವಾರ ಸೊಲ್ಲಾಪುರ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಮೇಲೆ ಸಿನಿಮೀಯ ಶೈಲಿಯಲ್ಲಿ ದರೋಡೆ ನಡೆದಿದೆ. 8 ಜನ ಮುಸುಕುದಾರಿಗಳು ರಸ್ತೆ ಮೇಲೆ ಚೂಪಾದ ಮೊಳೆ ಹಾಕಿ ಕಾರೊಂದನ್ನು ತಡೆದಿದ್ದಾರೆ. ಕಾರು ನಿಲ್ಲಿಸಿದ ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಚಾಕು ತೋರಿಸಿ, ಜೀವ ಬೆದರಿಕೆ ಹಾಕಿ ಕಾರಿನಲ್ಲಿದ್ದವರ ಮೈಮೇಲಿನ 23 ಲಕ್ಷ ರೂ.ಮೌಲ್ಯದ 223 ಗ್ರಾಂ ಬಂಗಾರ ಹಾಗೂ 1 ಲಕ್ಷ 60 ಸಾವಿರ ರೂ. ನಗದು ದೋಚಿ ಪರಾರಿ ಆಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 7 ಕೋಟಿ ದರೋಡೆ: ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್​​ ಹೇಳಿದ್ದೇನು?

ಸದ್ಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಯೇಥಗಾಂವ್ ಗ್ರಾಮದ ಪ್ರವೀಣ್​​ ಎಂಬುವವರು ಬಸವಕಲ್ಯಾಣ ನಗರ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದು, ದರೋಡೆಕೋರರ ಪತ್ತೆಗೆ ಖಾಕಿ ಪಡೆ ಮುಂದಾಗಿದೆ.

ಅಂತರರಾಜ್ಯ ದರೋಡೆಕೋರರ ಬಂಧನ 

ಕಲಬುರಗಿಯಲ್ಲಿ ಹಾಡುಹಗಲೇ ಬಂಗಾರದ ಅಂಗಡಿ ದರೋಡೆ ಮಾಡಿದ್ದ ಮೂವರು ಅಂತರರಾಜ್ಯ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಕಲಬುರಗಿ ಪೊಲೀಸರು ದರೋಡೆ ಪ್ರಕರಣವನ್ನ ಭೇದಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಅಯೋಧ್ಯಾ ಚವ್ಹಾಣ್, ಫಾರುಕ್ ಹಾಗೂ ಸೋಹೆಲ್ ಅರೆಸ್ಟ್​ ಆದವರು. ಸದ್ಯ ಬಂಧಿತರಿಂದ ಬರೋಬ್ಬರಿ 2.15 ಕೋಟಿ ರೂ. ಮೌಲ್ಯದ 2.86 KG ಚಿನ್ನ ಹಾಗೂ 4.80 ಲಕ್ಷ ರೂ ಹಣ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಹುದೊಡ್ಡ ದರೋಡೆ: 3 ಕಾರು, ಮೂವರ ಗ್ಯಾಂಗ್: ಜಸ್ಟ್ 7 ನಿಮಿಷದಲ್ಲೇ 7 ಕೋಟಿ ರೂ. ಲೂಟಿ

ಇದೇ ವರ್ಷ ಜುಲೈ 11ರಂದು ಕಲಬುರಗಿಯ ಸರಾಫ್ ಬಜಾರ್​ನ ಮಲಿಕ್ ಜುವೆರ್ಲಸ್​​ಗೆ ನುಗ್ಗಿದ್ದ ಪಶ್ಚಿಮ ಬಂಗಾಳದ ದರೋಡೆಕೋರರು ಹಾಡಹಗಲೇ ದರೋಡೆ ಮಾಡಿದ್ದರು. ಕಲಬುರಗಿಯ ಬ್ರಹ್ಮಪೂರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.