ಬೀದರ್: ಖಾಲಿಯಾಗುತ್ತಿದೆ ಐತಿಹಾಸಿಕ ಪಾಪವಿನಾಶ ಮಂದಿರದ ಕೆರೆಯ ನೀರು. ಪ್ರತಿ ನಿತ್ಯ ಲಕ್ಷಾಂತರ ಲೀಟರ್ ನೀರು ಕೆರೆಯಿಂದ ಹೊರ ಹೋಗುತ್ತಿದೆ. ಇದರ ಜೊತೆ ಇಲ್ಲಿಗೆ ಬರುವ ಭಕ್ತರು ಪೂಜೆ ಪುನಸ್ಕಾರ ಮಾಡಿದ ವಸ್ತುಗಳನ್ನ ಕೆರೆಗೆ ತಂದು ಹಾಕುತ್ತಿದ್ದು, ಇದರಿಂದಾಗಿ ಕೆರೆಯ ನೀರು ಮಲೀನವಾಗುತ್ತಿದೆ. ಅದನ್ನ ಕುಡಿದು ವಿಷಕಾರಿ ಕುಡಿದು ಮೀನುಗಳು, ಪಕ್ಷಿಗಳು ಸಾವನ್ನಪ್ಪುತ್ತಿವೆ. ಆದರೂ ಕೂಡ ಜಿಲ್ಲಾಡಳಿತ, ಪುರಾತತ್ವ ಇಲಾಖೆ ಮಾತ್ರ ತಲೆಕೆಡಿಸಿಕೊಂಡಿಲ್ಲ.
ಹೌದು ಬೀದರ್ ನಗರದಲ್ಲಿರುವ ಪಾಪವಿನಾಶ ಮಂದಿರ ಒಂದು ಶತಮಾನದಷ್ಟು ಹಳೆಯದಾದ ದೇವಸ್ಥಾನ, ಶ್ರೀರಾಮಚಂದ್ರ ರಾವಣನನ್ನ ಯುದ್ದದಲ್ಲಿ ಹತ್ಯೆ ಮಾಡಿದಾಗ, ಶ್ರಿರಾಮ ತಪ್ಪಸ್ಸು ಮಾಡಿ ಈ ಕೆರೆಯಲ್ಲಿ ಸ್ನಾನ ಮಾಡಿ ಪಾಪನಾಶ ಮಾಡಿಕೊಂಡು ಹೋಗುತ್ತಾನೆ. ಇದರಿಂದ ಅಂದಿನಿಂದ ಈ ದೇವಸ್ಥಾನಕ್ಕೆ ಪಾಪನಾಶ ಮಂದಿರ ಎಂದು ಹೆಸರು ಬರುತ್ತದೆ. ಈ ದೇವಸ್ಥಾನದಲ್ಲಿ ಉದ್ಘವ ಲಿಂಗವಿದ್ದು, ರಾಜ್ಯವಷ್ಟೇ ಅಲ್ಲದೇ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹರಾಷ್ಟ್ರದಿಂದ ಈ ಶ್ರಾವಣ ಮಾಸದಲ್ಲಿ ಸಾಗೋರಾಪಾದಿಯಲ್ಲಿ ಭಕ್ತರ ದಂಡು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದುಕೊಂಡು ಹೋಗುತ್ತಾರೆ.
ಆದರೆ ಇಂತಹ ಕೆರೆಯಿಂದು ಮಲೀನವಾಗುತ್ತಿದೆ. ಜೊತೆಗೆ ಕೆರೆಯ ಲಕ್ಷಾಂತರ ಲೀಟರ್ ನೀರು ಕೂಡ ವೇಸ್ಟ್ ಆಗಿ ಹರಿದು ಹೋಗುತ್ತಿದೆ. ಸುಮಾರು 125 ಎಕರೆ ವಿಸ್ತೀರ್ಣದ ಬೃಹತ್ತಾದ ಐತಿಹಾಸಿಕ ಕೆರೆಯ ಸುತ್ತಮುತ್ತ ನೂರಾರು ಎಕರೆಯಷ್ಟೂ ಸುಂದರ ಪರಿಸರ ಕಾಡಿದೆ. ಇಲ್ಲಿನ ಮಾನವ ನಿರ್ಮಿತ ಕಾಡಿನಲ್ಲಿ ನೂರಾರು ಔಷಧಿಯ ಸಸ್ಯಗಳಿವೆ. ಇದರ ಜೊತೆಗೆ ವಿವಿಧ ಬಗೆಯ ಚಿಟ್ಟೆಗಳು, ಪಕ್ಷಗಳು, ನವಿಲುಗಳ ವಾಸಸ್ಥಾನ ಇದಾಗಿದೆ. ಆದರೆ ಇಂದು ಈ ಕೆರೆ ಮಲೀನವಾಗುತ್ತಿದ್ದು, ಜಲಚರಗಳ, ಪಕ್ಷಿಗಳ ಸಾವಿಗೆ ಕಾರಣವಾಗುತ್ತಿದೆ.
ಇನ್ನು ದೇವಸ್ಥಾನದ ಪಕ್ಕದಲ್ಲಿರುವ ಶಿವನಗರದ ಬಡಾವಣೆಯ ಸಾವಿರಾರು ಲೀಟರ್ ಡ್ರೈನೇಜ್ ನೀರು ಇಲ್ಲಿನ ಕೆರೆಗೆ ಸೇರುತ್ತಿದೆ. ಇದರಿಂದ ಕೆರೆಯ ನೀರು ಮಲೀನವಾಗುತ್ತಿದ್ದು ಮೀನುಗಳು ಸಾವನ್ನಪ್ಪುತ್ತಿವೆ. ಈ ದೇವಸ್ಥಾನಕ್ಕೆ ಬರುವ ಭಕ್ತರು ಕೂಡ ತಮ್ಮ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಿದ ವಸ್ತುಗಳನ್ನ ತಂದು ಈ ಕೆರೆಯಲ್ಲಿ ಹಾಕುತ್ತಿದ್ದಾರೆ ಇದರಿಂದ ಕೆರೆಯ ನೀರು ವಿಷವಾಗತೊಡಗಿದ್ದು ಇಂದರಿಂದಾಗಿ ಕೆರೆಯಲ್ಲಿರುವ ಜಲಚರಗಳ ಪ್ರಾಣಹಾನಿಗೂ ಕೂಡಾ ಕಾರಣವಾಗುತ್ತಿವೆ. ಇದು ಸಹಜವಾಗಿಯೇ ಇಲ್ಲಿಗೆ ಬರುವ ಭಕ್ತರಲ್ಲಿ ಅಸಮಾದಾನಕ್ಕೆ ಕಾರಣವಾಗುತ್ತಿದ್ದು ಇಲ್ಲಿನ ಕೆರೆಯನ್ನ ಸ್ವಚ್ಚಗೊಳಿಸಿ ಸುಂದರವಾದ ಪರಿಸರ ಕಾಪಾಡಿ ಎಂದು ಇಲ್ಲಿನ ಭಕ್ತರು ವಿನಂತಿಸುತ್ತಿದ್ದಾರೆ.
ಪ್ರತಿನಿತ್ಯ ಲಕ್ಷಾಂತರ ಲೀಟರ್ ನೀರು ಈ ಕೆರೆಯಿಂದ ಹರಿದುಹೋಗುತ್ತಿದ್ದು , ಇದೇ ನೀರನ್ನ ಖಾಸಗಿ ವ್ಯಕ್ತಿಗಳಿಗೆ ಸೇರಿದ ಹತ್ತಾರು ಎಕರೆಯ ಜಮೀನುಗಳಿಗೆ ಬಳಸಿಕೊಂಡು ತಮ್ಮ ಹೊಲದಲ್ಲಿ ತರಕಾರಿ ಸೇರಿದಂತೆ ಇನ್ನಿತರ ಬೆಳೆಯನ್ನ ಬೆಳೆಯುತ್ತಿದ್ದಾರೆ. ಇದರಿಂದ ಖಾಸಗಿ ವ್ಯಕ್ತಿಗಳು ಜಮೀನು ಹಸಿರಾಗಿದ್ದು ಅವರು ಬೆಳೆ ಬೆಳೆದುಕೊಂಡು ಹಣ ಗಳಿಸುತ್ತಿದ್ದಾರೆ. ಆದರೆ ಕೆರೆಯ ನೀರು ಖಾಲಿಯಾಗುತ್ತಿರುವುದರಿಂದ ಜಲಚರ, ಪಕ್ಷಿಗಳ ಸಾವಿಗೆ ಕಾರಣವಾಗಲಿದ್ದು, ಕೆರೆಯ ನೀರನ್ನ ಹೊರಗೆ ಬಿಡುವುದನ್ನ ನೀಲ್ಲಿಸಿ ಎಂದು ಇಲ್ಲಿನ ಜನರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಬೀದರ್: ಪ್ರತ್ಯೇಕ ಘಟನೆಗಳಲ್ಲಿ ತಾಯಿಯ ಕಣ್ಣೆದುರೇ ಮಗನ ಕೊಲೆ, ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಇನ್ನು ಪ್ರತಿವರ್ಷ ಈ ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ಹಣವನ್ನ ದೇಣಿಗೆ ರೂಪದಲ್ಲಿ ಕೊಡುತ್ತಿದ್ದಾರೆ. ಆದರೆ ಇಲ್ಲಿಗೆ ಬಂದಿರುವ ಹಣವನ್ನ ಸರಕಾರ ಪಡೆದುಕೊಳ್ಳುತ್ತಿದ್ದು, ದೇವಾಲಯದ ಕೆರೆಯ ಸ್ವಚ್ಚತೆಗೆ ಮಾತ್ರ ಗಮನಹರಿಸದಿರುವುದು ವಿಪರ್ಯಾಸವೇ ಸರಿ. ಲಕ್ಷಾಂತರ ಭಕ್ತರನ್ನ ಹೊಂದಿರುವ ಈ ದೇವಾಲಯಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವ ಅನಿವಾರ್ಯತೆ ಈಗ ಸರಕಾರದ ಮೇಲಿದೆ. ಏನೇ ಇರಲಿ ಕೆರೆಗೆ ಸೇರುತ್ತಿರುವ ವಿಷಕಾರಿ ನೀರನ್ನ ತಡೆದು ಸ್ವಚ್ಚವಾಗಿ ಇಡಿ ಎಂದು ಇಲ್ಲಿನ ಭಕ್ತರು ಮನವಿ ಮಾಡುತ್ತಿದ್ದಾರೆ.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Tue, 7 March 23