ಮೀಸಲು ಅರಣ್ಯ ಪ್ರದೇಶದ ಜಮೀನು ಸೈಟ್​ ಮಾಡಿ ಮಾರಾಟ; ಒತ್ತುವರಿದಾರರಿಗೆ ಶಾಕ್ ಕೊಟ್ಟ ಅರಣ್ಯ ಇಲಾಖೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 24, 2024 | 11:01 PM

ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಮೀಸಲು ಅರಣ್ಯ ಪ್ರದೇಶದ ಜಮೀನು ಒತ್ತುವರಿಯಾಗಿತ್ತು. ಆ ಒತ್ತುವರಿ ಜಮೀನಿನಲ್ಲಿ ಕೆಲವರು ಕೃಷಿ, ಕೆಲವರು ಸೈಟ್ ನಿರ್ಮಿಸಿ ಮಾರಾಟ ಕೂಡ ಮಾಡಿದ್ದರು. ಈಗ ಅರಣ್ಯ ಇಲಾಖೆಯ ಅಧಿಕಾರಿಗಳು ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನ ತೆರವು ಮಾಡಿದ್ದು, ಅರಣ್ಯ ಭೂಮಿ ಒತ್ತುವರಿದಾರರಿಗೆ ಶಾಕ್ ಕೊಟ್ಟಿದ್ದಾರೆ.

ಮೀಸಲು ಅರಣ್ಯ ಪ್ರದೇಶದ ಜಮೀನು ಸೈಟ್​ ಮಾಡಿ ಮಾರಾಟ; ಒತ್ತುವರಿದಾರರಿಗೆ ಶಾಕ್ ಕೊಟ್ಟ ಅರಣ್ಯ ಇಲಾಖೆ
ಬೀದರ್​ ಡಿಎಫ್​ಒ
Follow us on

ಬೀದರ್, ಏ.24: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ ಬಿಟ್ಟರೆ ಅತೀ ಹೆಚ್ಚು ಅರಣ್ಯ ಪ್ರದೇಶ ಬೀದರ್(Bidar) ಜಿಲ್ಲೆಯಲ್ಲಿದೆ. ಜೊತೆಗೆ ಅತಿ ಹೆಚ್ಚು ಅರಣ್ಯ ಭೂಮಿ ಒತ್ತುವರಿ (Forest area)ಕೂಡ ಆಗಿದೆ. ಈಗ ಕಳೆದ ಒಂದೂವರೆ ವರ್ಷದ ಹಿಂದೆ ಬೀದರ್ ಜಿಲ್ಲೆಗೆ ಡಿಎಫ್​ಓ ಆಗಿ ವಾನಂತಿ ಎಂ.ಎಂ ಅವರು ಬಂದಾಗಿನಿಂದ ಅರಣ್ಯ ಜಮೀನನ್ನ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿದಿದ್ದು, ಕಳೆದ ಒಂದೂವರೆ ವರ್ಷದಲ್ಲಿ ಒಂದು ಸಾವಿರದ ಎರಡು ನೂರಾ ಹದಿಮೂರು ಎಕರೆಯಷ್ಟು ಒತ್ತೂವರಿಯಾಗಿದ್ದ ಜಮೀನನ್ನ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆಯುವುದರ ಮೂಲಕ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಉಳುಮೆ ಹಾಗೂ ಕೃಷಿಯೇತರ ಕೆಲಸ ಕಾರ್ಯದಲ್ಲಿ ತೊಡಗಿದ್ದವರಿಗೆ ಶಾಕ್ ಮುಟ್ಟಿಸಿದ್ದಾರೆ.

ಬೀದರ್ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಅರಣ್ಯ ಭೂಮಿಯನ್ನ ಒತ್ತುವರಿ ಮಾಡಿಕೊಂಡು ಹತ್ತಾರು ವರ್ಷದಿಂದ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದರು. ಅರಣ್ಯ ಇಲಾಖೆಗೆ ಸೇರಿದ ಜಮೀನು ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಅಧಿಕಾರಿಗಳು ಕಂಡು ಕಾಣದಂತೆ ಕುಳಿತಿದ್ದರು. ಆದರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನಂತಿ ಎಂ.ಎಂ ಅವರು ಒತ್ತುವರಿದಾರರಿಂದ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನ ವಶಕ್ಕೆ ಪಡೆದುಕೊಂಡು ಆ ಜಮೀನಿನಲ್ಲಿ ಸಸಿಗಳನ್ನ ನಾಟಿ ಮಾಡುವುದರ ಮೂಲಕ ಹಸಿರೀಕರಣಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ:ದೇವನಹಳ್ಳಿ: ಕೋಟಿ ಬೆಲೆ ಬಾಳುವ ಜಾಗ ಒತ್ತುವರಿ; ಸರ್ಕಾರಿ ಶಾಲೆ ಜಾಗ ಉಳಿಸುವಂತೆ ಗ್ರಾಮಸ್ಥರ ಒತ್ತಾಯ

ಇನ್ನು ಅರಣಾಧಿಕಾರಿ ವಾನಂತಿ ಅವರು ಮಾಡಿದ ದೊಡ್ಡ ಕಾರ್ಯಾಚರಣೆ ಅಂದರೆ ಬೀದರ್ ನಗರಕ್ಕೆ ಹೊಂದಿಕೊಂಡಿರುವ ಶಹಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶದ ಜಮೀನು ಒತ್ತುವರಿ ತೆರವು ಮಾಡಿದ್ದು. ಈ ಅರಣ್ಯ ಭೂಮಿಯೂ ಬೀದರ್ ನಗರಕ್ಕೆ ಹೊಂದಿಕೊಂಡಿದ್ದು ಈ ಜಮೀನಿಗೆ ಇಲ್ಲಿ ಒಂದು ಎಕರೆಗೆ ಕನಿಷ್ಟವೇಂದರೂ ಎರಡರಿಂದ ಮೂರು ಕೋಟಿ ರೂಪಾಯಿ ಬೆಲೆ ಇದೆ. ಇದನ್ನೆ ಬಂಡಾವಾಳ ಮಾಡಿಕೊಂಡಿದ್ದ ಭೂಮಿ ಕಬಳಿಕೆದಾರರು ಅರಣ್ಯ ಪ್ರದೇಶದ ಜಮೀನನ್ನೇ ಒತ್ತುವರಿ ಮಾಡಿಕೊಂಡು ಅಲ್ಲಿ ಸೈಟ್ ನಿರ್ಮಿಸಿ ಒಂದು ಸೈಟ್ ಗೆ 20 ರಿಂದಾ 25 ಲಕ್ಷದವರೆಗೆ ಮಾರಾಟ ಮಾಡಿದ್ದಾರೆ.

ಇದು ಅರಣ್ಯ ಜಮೀನಿದೆ ಎಂದು ಗೊತ್ತಿದ್ದರೂ ಕೂಡ ಅಲ್ಲಿ ಸಾರ್ವಜನಿಕರು ಸೈಟ್ ಖರಿಧಿಸಿದ್ದು, ಕೆಲವರು ಮನೆ ಕೂಡ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ, ಈಗ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಮೀಸಲು ಅರಣ್ಯ ಪ್ರದೇಶವನ್ನ ಒತ್ತುವರಿ ಮಾಡಿಕೊಂಡಿದ್ದ ಜನರನ್ನ ಒಕ್ಕಲೆಬ್ಬಿಸಿ, ಆ ಅರಣ್ಯ ಭೂಮಿಯನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನು ಈ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿರುವ ಆಸ್ತಿ ಮೌಲ್ಯವನ್ನ ನೋಡಿದರೆ ಸುಮಾರು ಇನ್ನೂರು ಕೋಟಿ ರೂಪಾಯಿಗೂ ಅಧಿಕ ಮೌಲದ್ಯ ಅರಣ್ಯ ಇಲಾಕೆಯ ಆಸ್ತಿಯನ್ನ ಅರಣ್ಯ ಇಲಾಖೆಗೆ ತೆಗೆದುಕೊಳ್ಳುವುದರ ಮೂಲಕ ಡಿಎಫ್ ಓ ವಾನಂತಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಖಡಕ್ ಐಎಫ್​ಎಸ್ ಅಧಿಕಾರಿ ವಾನಂತಿ ಅವರು ಬೀದರ್ ಜಿಲ್ಲೆಗೆ ಬಂದಿದ್ದರಿಂದಾಗಿ ಒಂದು ಸಾವಿರಕ್ಕೂ ಹೆಚ್ಚು ಅರಣ್ಯ ಇಲಾಖೆಯ ಒತ್ತುವರಿ ಜಮೀನು ಅರಣ್ಯ ಇಲಾಖೆಯ ಪಾಲಾಗಿದೆ. ಯಾರ ಒತ್ತಡಕ್ಕೂ ಮಣಿಯದೆ ಒತ್ತೂವರಿ ತೆರವು ಕಾರ್ಯಾಚರಣೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದು ಸರಿಯಾದ ಬೆಳೆವಣಿಗೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ