ದೇವನಹಳ್ಳಿ: ಕೋಟಿ ಬೆಲೆ ಬಾಳುವ ಜಾಗ ಒತ್ತುವರಿ; ಸರ್ಕಾರಿ ಶಾಲೆ ಜಾಗ ಉಳಿಸುವಂತೆ ಗ್ರಾಮಸ್ಥರ ಒತ್ತಾಯ
ಅದು ಏರ್ಪೋಟ್ ಪಕ್ಕದಲ್ಲೆ ಇರುವ ದ್ಯಾವರಹಳ್ಳಿ ಎನ್ನುವ ಗ್ರಾಮ, ಹೀಗಾಗೆ ಆ ಗ್ರಾಮದ ಒಂದಿಂಚ್ಚು ಜಮೀನು ಸಹ ಕೋಟಿ ಕೋಟಿ ಬೆಲೆ ಬಾಳುತ್ತದೆ. ಆದ್ರೆ, ಇಷ್ಟೆಲ್ಲ ಬೆಲೆ ಬಾಳುತ್ತಿದ್ದರೂ ಮುಂದಿನ ಪೀಳಿಗೆಗೆ ಉಳಿಸಬೇಕಿದ್ದ ಸರ್ಕಾರಿ ಶಾಲೆಯ ಜಾಗಕ್ಕೆ ಕೆಲವರು ಕಾಂಪೌಂಡ್ ಹಾಕಿದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು, ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು ಗ್ರಾಮಾಂತರ, ಮಾ.15: ಜಿಲ್ಲೆಯ ದೇವನಹಳ್ಳಿ(Devanahalli) ತಾಲೂಕಿನ ದ್ಯಾವರಹಳ್ಳಿ ಎನ್ನುವ ಈ ಗ್ರಾಮ, ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೂಗಳತೆ ದೂರದಲ್ಲಿದ್ದು, ಇಲ್ಲಿನ ಜಮೀನುಗಳು ಕೋಟ್ಯಾಂತರ ರೂ ಬೆಲೆ ಬಾಳುತ್ತಿದೆ. ಹೀಗಾಗೆ ಸಾಕಷ್ಟು ಜನ ಬಿಲ್ಡರ್ಗಳು ಈ ಗ್ರಾಮದಲ್ಲಿ ನೂರಾರು ಎಕರೆ ಜಮೀನು ತೆಗೆದು ಬಡಾವಣೆಗಳನ್ನ ಮಾಡುತ್ತಿದ್ದಾರೆ. ಜೊತೆಗೆ ನೂರಾರು ಎಕರೆ ಜಮೀನಿನ ಜೊತೆಗೆ ಸರ್ಕಾರಿ ಶಾಲೆ ಸೇರಿದಂತೆ ಗ್ರಾಮ ಠಾಣಾ ಜಾಗವನ್ನು ಕೂಡ ಒತ್ತುವರಿ ಮಾಡಿ ಕಾಂಪೌಂಡ್ ಹಾಕಿರುವ ಆರೋಪ ಕೇಳಿ ಬಂದಿದೆ.
ಗ್ರಾಮದ ಸರ್ಕಾರಿ ಶಾಲೆ ಮುಂಭಾಗದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಶಾಲೆಯ ಮಕ್ಕಳ ಆಟದ ಮೈದಾನಕ್ಕೆ ಎಂದು 100 ಹಾಗೂ 250 ಅಡಿ ಜಾಗವನ್ನ ಪಂಚಾಯ್ತಿಯಲ್ಲಿ ರೆಸುಲ್ಯೂಷನ್ ಮಾಡಿ ಇಟ್ಟಿದ್ದರಂತೆ. ಅಲ್ಲದೆ ಹಲವು ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳು ಇಲ್ಲಿಯೇ ಆಟವಾಡಿ ಬೆಳೆದಿದ್ದು, ಇದೀಗ ಏಕಾಏಕಿ ಕೆಲವರು ಜಾಗ ನಮ್ಮದು ಎಂದು ಶಾಲೆ ಜಾಗಕ್ಕೆ ಕಾಂಪೌಂಡ್ ಹಾಕಿದ್ದಾರೆ. ಹೀಗಾಗಿ ಶಾಲೆ ಜಾಗವನ್ನ ಉಳಿಸಿ ಮಕ್ಕಳ ಆಟದ ಮೈದಾನಕ್ಕೆ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಒತ್ತುವರಿಯಾಗಿದೆ ಎನ್ನಲಾದ ಸರ್ಕಾರಿ ಶಾಲೆಯ ಜಾಗ ಕೋಟಿ ಕೋಟಿ ಬೆಲೆ ಬಾಳುತ್ತಿದೆ. ಒತ್ತುವರಿ ತೆರವು ಮಾಡುವಂತೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ದೂರು ನೀಡಿದರೂ, ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಂಚಾಯ್ತಿ ಪಿಡಿಒ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಇದೀಗ ಜಮೀನು ಒತ್ತುವರಿಯಿಂದ ಮಕ್ಕಳು ಪ್ರಾರ್ಥನೆ ಮಾಡಲು. ಆಟವಾಡಲು ಜಾಗವಿಲ್ಲದೆ ಪರದಾಡ್ತಿದ್ದಾರೆ ಎಂದು ಗ್ರಾಮಸ್ಥರು ಪಂಚಾಯ್ತಿ ಅಧಿಕಾರಿಗಳ ವಿರುದ್ದ ಅಸಮಧಾನ ಹೊರ ಹಾಕಿದ್ದಾರೆ. ಇನ್ನು ಈ ಬಗ್ಗೆ ತಾಲೂಕು ಪಂಚಾಯ್ತಿ ಇಒ ಅವರನ್ನ ಕೇಳಿದ್ರೆ, ‘ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಸರ್ಕಾರಿ ಜಾಗ ಒತ್ತುವರಿಯಾಗಿದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳೋದಾಗಿ ಹೇಳುತ್ತಿದ್ದಾರೆ.
ಒಟ್ಟಾರೆ ಒಂದೆಡೆ ಸರ್ಕಾರಿ ಶಾಲೆಗಳು ಬಂದ್ ಆಗುವ ಹಂತಕ್ಕೆ ಬಂದು ತಲುಪುತ್ತಿರುವ ಹೊತ್ತಿನಲ್ಲೆ ಇದೀಗ ಸರ್ಕಾರಿ ಶಾಲೆ ಜಾಗಗಳು ಒತ್ತುವರಿಯಾಗುತ್ತಿರುವ ಆರೋಪ ಕೇಳಿ ಬರುತ್ತಿರುವುದು ನಿಜಕ್ಕೂ ದುರಂತ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಆಸ್ತಿಗಳನ್ನ ಉಳಿಸುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ