
ಬೀದರ್, ಡಿಸೆಂಬರ್ 23: ಕಬ್ಬು ಬೆಳೆದು ಖುಷಿಯಿಂದ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು (Sugarcane) ಹಾಕುತ್ತಿದ್ದಾರೆ. ಆದರೆ ರೈತರಿಗೆ (farmers) ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಹಣ ಮಾತ್ರ ಸಮಯಕ್ಕೆ ಸರಿಯಾಗಿ ಕೈ ಸೇರುತ್ತಿಲ್ಲ. ವರ್ಷವಿಡೀ ಕಷ್ಟಪಟ್ಟು ಬೆಳೆದ ಕಬ್ಬನ್ನ ಕಾರ್ಖಾನೆಗೆ ಹಾಕಿದರೆ ಕಾರ್ಖಾನೆಯ ಮಾಲೀಕರು ಮಾತ್ರ ರೈತರಿಗೆ ಹಣ ಕೊಡದೇ ಸತಾಯಿಸುತ್ತಿದ್ದಾರೆ. ಇದನ್ನ ಪ್ರಶ್ನಿಸಬೇಕಾದ ಅಧಿಕಾರಿಗಳು ಮಾತ್ರ ಕಂಡುಕಾಣದಂತೆ ಕುಳಿತಿದ್ದು, ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.
ಬೀದರ್ ಜಿಲ್ಲೆಯಲ್ಲಿರುವ ಐದು ಸಕ್ಕರೆ ಕಾರ್ಖಾನೆಗಳಿಂದ ಪ್ರಸಕ್ತ ಹಂಗಾಮು ವರ್ಷದಲ್ಲಿ ಕೋಟ್ಯಂತರ ರೂ ಹಣ ರೈತರ ಕೈ ಸೇರಬೇಕಾಗಿದೆ. ಕಾರ್ಖಾನೆಯ ಮಾಲೀಕರು ಕೆಲವು ರೈತರಿಗೆ ಮಾತ್ರ ಹಣನ್ನ ಹಾಕಿ ಸುಮ್ಮನಾಗಿದ್ದು, ಇತರರಿಗೆ ಹಣ ಬಾರದಿರುವುದರಿಂದ ಸಾಲ ಮಾಡಿ ಜೀವನ ನಡೆಸಬೇಕಾದ ಸ್ಥಿತಿ ರೈತರದ್ದಾಗಿದೆ.
ಇದನ್ನೂ ಓದಿ: ಎರಡು ಕಿ.ಮೀ ದೂರದ ಜಮೀನಿಗೆ 20 ಕಿ.ಮೀ ಸುತ್ತಿಕೊಂಡು ಹೋಗ್ಬೇಕು: ರೈತರ ಗೋಳು ಕೇಳೋರ್‍ಯಾರು?
ಸಾಲ ಸೂಲಾ ಮಾಡಿ ಬೆಳೆದ ಕಬ್ಬನ್ನ ಮಾರಾಟ ಮಾಡಿದರೇ ಅದರ ಹಣವನ್ನ ಮಾತ್ರ ರೈತರಿಗೆ ಕೊಡುತ್ತಿಲ್ಲ. ಹೀಗಾಗಿ ರೈತರು ಮಾತ್ರ ಕಬ್ಬಿನ ಹಣ ಬರುತ್ತದೆ ಎಂದು ಮತ್ತೆ ಸಾಲ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಹಾಕಿ ಎರಡು ತಿಂಗಳಾದರೂ ರೈತರ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ, ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ವರ್ಷವಿಡೀ ಕಬ್ಬನ್ನ ಬೆಳೆಸಿದ್ದೇವೆ, ಗೊಬ್ಬರ ಬೀಜ ಹೀಗೆ ಹತ್ತಾರು ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದೇವೆ. ಕಬ್ಬು ಮಾರಾಟದಿಂದ ಬಂದ ಹಣದಲ್ಲಿ ಸಾಲ ತೀರಿಸಬೇಕು. ಆದರೆ ಸಕ್ಕರೆ ಕಾರ್ಖಾನೆಯವರು ಮಾತ್ರ ರೈತರಿಗೆ ಕೊಡಬೇಕಾದ ಹಣ ಕೊಟ್ಟಿಲ್ಲ. ಹೀಗಾಗಿ ಕಾರ್ಖಾನೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಬ್ಬು ಬೆಳೆಗಾರ ಚಾಂದಪಾಷಾ ಅವರು ಅಳಲು ತೊಡಿಕೊಂಡಿದ್ದಾರೆ.
ಯಾವುದೆ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು ಹಾಕಿದ ಎರಡು ವಾರದಲ್ಲಿ ಕೊಡಬೇಕಾದ ಹಣವನ್ನ ಪಾವತಿ ಮಾಡಬೇಕು ಎಂಬ ನಿಯಮವಿದೆ. ಆದರೆ ಕಾರ್ಖಾನೆಗೆ ಕಬ್ಬು ನೀಡಿ ತಿಂಗಳು ಕಳೆದರೂ ರೈತರಿಗೆ ಕೊಡಬೇಕಾದ ಹಣ ಕೊಡುತ್ತಿಲ್ಲ. ಈಗ ರೈತರು ಕಡಲೆ, ಕುಸುಬಿ, ಜೋಳವನ್ನ ಸಾಲತಂದು ನಾಟಿ ಮಾಡಿದ್ದಾರೆ. ರಸಗೊಬ್ಬರ ಖರೀದಿಸಲು ಹಣವಿಲ್ಲ, ಹೀಗಾಗಿ ಬೇಗ ರೈತರಿಗೆ ಕೊಡಬೇಕಾದ ಹಣವನ್ನ ಎರಡು ದಿನದಲ್ಲಿ ಕೊಡದೇ ಹೋದರೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಇನ್ನು ಬೀದರ್ ಜಿಲ್ಲಾಧಿಕಾರಿ ರೈತರ ಬೆನ್ನಿಗೆ ನಿಂತ್ತಿದ್ದು, ಎರಡು ವಾರದೊಳಗಾಗಿ ರೈತರಿಗೆ ಬಾಕಿ ಹಣ ಕೊಡದಿದ್ದರೆ ತಕ್ಕ ಬೆಲೆತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಯ ಈ ನಡೆಯಿಂದ ರೈತರು ಸಂತಸಗೊಂಡಿದ್ದಾರೆ. ಜೊತೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ರೈತರಿಗೆ ಕಾರ್ಖಾನೆಗಳಿಂದ ಕಬ್ಬಿನ ಹಣ ಪಡೆದುಕೊಂಡು ರೈರಿಗೆ ಪಾವತಿಸುವಂತೆ ಒತ್ತಡ ಹಾಕಿದರು ಕೂಡ ರೈತರಿಗೆ ಹಣ ಮಾತ್ರ ಸಂದಾಯ ಮಾಡಲು ಕಾರ್ಖಾನೆ ಮಾಲೀಕರು ಮುಂದಾಗಿಲ್ಲ. ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾಳಜಿವಹಿಸಿ ನಮಗೆ ಸೇರಬೇಕಾದ ಹಣವನ್ನ ಆದಷ್ಟು ಬೇಗ ಕೊಡಿಸಿ ಎಂದು ರೈತರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಿಸಿರುವ ಬ್ಯಾರೇಜ್ನಲ್ಲಿ ನಿಲ್ಲದ ನೀರು: ರೈತರ ನೀರಾವರಿ ಕನಸು ನುಚ್ಚುನೂರು
ಬೀದರ್ ಜಿಲ್ಲೆಯಲ್ಲಿ ಸಾವಿರಾರು ರೈತರು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಯವರಿಗೆ ಕೊಟ್ಟು ಹಣ ಪಡೆಯಲಾಗದೆ ಕೈಕೈ ಹಿಸಿಕೊಂಡು ಕುಳಿತುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ರೂ. ಸಾಲ ಮಾಡಿದ ಹಣವನ್ನು ರೈತರು ಸಾಲಗಾರರಿಗೆ ಕೊಡಲು ಸಾಧ್ಯವಾಗುತ್ತಿಲ್ಲ. ಇತ್ತ ಕಬ್ಬು ತೆಗೆದುಕೊಂಡು ಹೋದ ಕಾರ್ಖಾನೆಯವರು ರೈತರಿಗೆ ಕೊಡಬೇಕಾದ ಹಣ ಕೊಡುತ್ತಿಲ್ಲ. ಇದು ರೈತರನ್ನ ಸಂಕಷ್ಟಕ್ಕೆ ತಳ್ಳಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:54 pm, Tue, 23 December 25