
ಬೀದರ್, (ಜುಲೈ 20): ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಮಾಡಿಕೊಳ್ಳದೇ ಮೋಸ ಮಾಡಿದ ಆರೋಪ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್ (BJP MLA Prabhu Chauhan )ಪುತ್ರ ಪ್ರತೀಕ್ ವಿರುದ್ಧ ಕೇಳಿಬಂದಿದ್ದು, ಈ ಸಂಬಂಧ ಯುವತಿ, ಮಹಿಳಾ ಆಯೋಗಕ್ಕೆ ((Women’s Commission)) ದೂರು ನೀಡಿದ್ದಾಳೆ. ಈ ಸಂಬಂಧ ಇದೀಗ ಶಾಸಕ ಪ್ರಭು ಚೌಹಾಣ್ ಸ್ಪಷ್ಟನೆ ನೀಡಿದ್ದು, ಮದುವೆ ಕ್ಯಾನ್ಸಲ್ ಮಾಡಿಕೊಂಡಿವುದಕ್ಕೆ ಕಾರಣವನ್ನೂ ಸಹ ನೀಡಿದ್ದಾರೆ. ಅಲ್ಲದೇ ನನ್ನ ಕುಟುಂಬದ ಹೆಸರು ಕೆಡಿಸಲು 1 ಗ್ಯಾಂಗ್ ಕೆಲಸ ಮಾಡುತ್ತಿದೆ. ಅದೇ ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಆ್ಯಂಡ್ ಗ್ಯಾಂಗ್ ಎಂದು ಸ್ವಪಕ್ಷದ ನಾಯಕನ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.
ಬೀದರ್ ನಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಭು ಚೌಹಾಣ್, ಪುತ್ರ ಪ್ರತೀಕ್ ವಿರುದ್ಧ ಮಹಿಳಾ ಆಯೋಗಕ್ಕೆ ಯುವತಿ ದೂರು ನೀಡಿದ್ದಾಳೆ. ಆಕೆ ಬೇರೆಯೊಬ್ಬರ ಜತೆ ಮೆಸೇಜ್, ವಿಡಿಯೋ ಕಾಲ್ ಮಾಡುತ್ತಿದ್ದಳು. ಹೀಗೆ ಮಾಡಿದ್ರೆ ಮಗ ಹೇಗೆ ಮದುವೆಯಾಗಲು ಸಾಧ್ಯ ನೀವೇ ಹೇಳಿ? ನಿಶ್ಚಿತಾರ್ಥವಾದ ದಿನದಿಂದಲೂ ಯುವತಿಗೆ ಬುದ್ಧಿವಾದ ಹೇಳಿದ್ದೇನೆ. ಹುಡುಗಿಯ ಸೋದರ ಮಾವನ ಕರೆದು ಸರಿ ಮಾಡುವಂತೆ ಹೇಳಿದ್ದೆ. ಆದರೆ ಆ ಹುಡುಗಿ ವಿಡಿಯೋ ಕಾಲ್ ಹಾಗೂ ಚಾಟಿಂಗ್ ನಿಲ್ಲಿಸಿಲ್ಲ. ಹೀಗಾಗಿ ನಮ್ಮ ಹುಡುಗ ಆಕೆ ಜತೆ ಮದುವೆ ಬೇಡ ಅಂತಾ ಹೇಳಿದ್ದಾನೆ. ಬಂಜಾರ ಮುಖಂಡರು ಜೊತೆಗೆ ಸಭೆ ಬಳಿಕ ಮದುವೆ ರದ್ದಾಯಿತು. 30 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಆರೋಪ ಬಂದಿಲ್ಲ. ಯುವತಿಯ ಆರೋಪ ಕೇಳಿ ನನಗೆ ತುಂಬಾ ನೋವಾಗಿದೆ. ನಾನೇ ನಿಂತು ನೂರಾರು ಮದುವೆ ಮಾಡಿದ್ದೇನೆ, ಅನ್ಯಾಯ ಮಾಡಿಲ್ಲ. ಕೆಲವರು ಅಡೆತಡೆ ಮಾಡಿದರೂ ನಾವು ನಿಶ್ಚಿತಾರ್ಥ ಮಾಡಿದ್ದೇವೆ. ಆಕೆ ನನ್ನ ಮಗಳ ರೀತಿ, ತಪ್ಪು ಮಾಡಿದರೂ ನಾನು ಸುಮ್ಮನಿದ್ದೆ ಎಂದು ಹೇಳಿದರು.
ನನ್ನ ಕುಟುಂಬದ ಹೆಸರು ಕೆಡಿಸಲು 1 ಗ್ಯಾಂಗ್ ಕೆಲಸ ಮಾಡುತ್ತಿದೆ. ಅದೇ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆ್ಯಂಡ್ ಗ್ಯಾಂಗ್. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಆ ಗ್ಯಾಂಗ್ ಅಡ್ಡಿಪಡಿಸುತ್ತೆ. 2014ರಿಂದಲೂ ಆ ಗ್ಯಾಂಗ್ ನನ್ನ ವಿರುದ್ಧ ಕೆಲಸ ಮಾಡುತ್ತಿದೆ. ಆ ಯುವತಿಯನ್ನು ಕರೆದೊಯ್ದು ಮಹಿಳಾ ಆಯೋಗಕ್ಕೆ ದೂರು ಕೊಡಿಸಿದ್ದೇ ಆ ಗ್ಯಾಂಗ್. ಆ ಯುವತಿ ಮೂಲಕ ನಮ್ಮ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಮಗ, ಸೊಸೆ ಹಾಗೂ ಅವರ ಸಹೋದರಿ ಶಿರಡಿಗೆ ಹೋಗಿದ್ದಾರೆ. ನನ್ನ ಮಗ ಯಾವುದೇ ಉಲ್ಟಾಪಲ್ಟಾ ಕೆಲಸ ಮಾಡಿಲ್ಲ. ನನ್ನ ಮಗನಿಗೆ ಬೇಕಾದರೆ ವೈದ್ಯಕೀಯ ತಪಾಸಣೆ ಮಾಡಿಸಲಿ ಎಂದು ಸವಾಲು ಹಾಕಿದರು.
ನನ್ನ ಮಗ ನೆಪ ಮಾತ್ರ, ನನ್ನನ್ನ ರಾಜಕೀಯವಾಗಿ ಮುಗಿಸಲು ಪ್ಲ್ಯಾನ್ ಮಾಡಿದ್ದಾರೆ. ಇದು ಆ ಹುಡುಗಿಯ ವಿಚಾರ ಆಗಿರುವುದರಿಂದ ನಾನು ಸುಮ್ಮನಿದ್ದೆ. ನಮ್ಮ ಕುಟುಂಬದ ವಿಚಾರಕ್ಕೆ ಬಂದರೆ ಸುಮ್ಮನಿರಬೇಕಾ ಹೇಳಿ ಎಂದು ಪ್ರಶ್ನಿಸಿದ ಪ್ರಭು ಚೌಹಾಣ್, 10 ವರ್ಷದಿಂದ ಭಗವಂತ ಖೂಬಾ ನನಗೆ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.